ಧಾರವಾಡ ಜಿಲ್ಲಾಸ್ಪತ್ರೆ ಆವರಣದಲ್ಲಿ ದಿನೇಶ್ ಗುಂಡೂರಾವ್​ಗೆ ರೊಟ್ಟಿ ಬದನೆಕಾಯಿ ಪಲ್ಯ ತಿನ್ನಿಸಿದ ಒಳರೋಗಿಗಳ ಸಂಬಂಧಿಕರು!

|

Updated on: Jan 06, 2024 | 7:27 PM

ಸಂತೋಷ್ ಲಾಡ್ ಹಾಸ್ಯಪ್ರಜ್ಞೆಯನ್ನು ಇಲ್ಲಿ ಅಭಿನಂದಿಸಲೇಬೇಕು. ತಾವು ನೀಡಿದ ಊಟ ತಿಂದಿದ್ದಕ್ಕೆ ಸಂಪ್ರೀತರಾಗುವ ಮಹಿಳೆಯರು ದಿನೇಶ್ ಗುಂಡೂರಾವ್ ಅವರ ಕೈ ಕುಲುಕುತ್ತಾರೆ. ಒಬ್ಬ ಮಧ್ಯವಯಸ್ಕ ಮಹಿಳೆ ಆರೋಗ್ಯ ಸಚಿವರ ಸಂಕೋಚದಿಂದಲೇ ಕೈ ಕುಲುಕಿದಾಗ ಲಾಡ್, ‘ಛೊಲೋ ನೋಡ್ಕೊಂಡು ಬಿಡ್ಬೇ, ಅವರು ಮತ್ತೊಂದು ಲಗ್ನ ಆಗ್ತಾರಂತ,’ ಅಂದಾಗ ಸಚಿವರ ಜೊತೆ ಅಲ್ಲಿದ್ದವರೆಲ್ಲ ಜೋರಾಗಿ ನಕ್ಕರೆ ಮಹಿಳೆ ನಾಚಿ ನೀರಾಗುತ್ತಾಳೆ!

ಧಾರವಾಡ: ಬೆಂಗಳೂರಲ್ಲಿ ಹುಟ್ಟಿ ಬೆಳೆದಿರುವ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ (Dinesh Gundu Rao) ಅವರಿಗೆ ಕಾರ್ಮಿಕ ಸಚಿವ ಸಂತೋಷ್ ಲಾಡ್ (Santosh Lad) ಇಂದು ಧಾರವಾಡ ಜನರ ಅಚ್ಚುಮೆಚ್ಚಿನ ಊಟ; ರೊಟ್ಟಿ ಮತ್ತು ಬದನೆಕಾಯಿ ಪಲ್ಯ ತಿನ್ನಿಸಿದರು! ನಗರದ ಜಿಲ್ಲಾಸ್ಪತ್ರೆ (district hospital) ವೀಕ್ಷಣೆ ನಡೆಸಿದ ಬಳಿಕ ಹೊರಗಡೆ ಅಸ್ಪತ್ರೆಯ ಆವರಣಕ್ಕೆ ಸಚಿವದ್ವಯರು, ವೈದ್ಯರು ಮತ್ತು ಅಧಿಕಾರಿಗಳು ಬಂದಾಗ ಒಳರೋಗಿಗಳ ಸಂಬಂಧಿಕರು ಊಟ ಮಾಡುತ್ತಿರುವುದನ್ನು ಲಾಡ್ ನೋಡಿದರು. ಬುತ್ತಿ ಐತೇನ್ಬೇ ಅನ್ನುತ್ತಾ ಅವರು ದಿನೇಶ್ ರನ್ನು ಅವರಲ್ಲಿಗೆ ಒಯ್ದಾಗ ಹರ್ಷೋಲ್ಲಾಸಕ್ಕೊಳಗಾಗುವ ಮಹಿಳೆಯರು ತಾವು ತಿನ್ನುತ್ತಿದ್ದ ತಟ್ಟೆಗಳಲ್ಲೇ ರೊಟ್ಟಿ ಮತ್ತು ಬದನೆಕಾಯಿ ಪಲ್ಯ ಗಣ್ಯರಿಗೆ ನೀಡುತ್ತಾರೆ. ಲಾಡ್ ರಾಜ್ಯದ ಉತ್ತರಭಾಗದವರಾಗಿರುವುದರಿಂದ ರೊಟ್ಟಿ, ಬದನೆಕಾಯಿ ಪಲ್ಯ ಹೊಸದೇನೂ. ಆದರೆ, ದಿನೇಶ್ ಬದನೆಕಾಯಿ ಪಲ್ಯ ತಿಂದಿರುತ್ತಾರೆ ಆದರೆ ರೊಟ್ಟಿ ಜೊತೆ ಸವಿದಿರಲಾರರು.

ಮೊದಲ ತುತ್ತು ಬಾಯಿಗಿಟ್ಟುಕೊಂಡ ಅರೋಗ್ಯ ಸಚಿವ ಪಲ್ಯದ ರುಚಿಗೆ ತಲೆದೂಗುತ್ತಾ ಎರಡನೇ ತುತ್ತಿಗೆ ಕೈ ಮುಂದೆ ಮಾಡುತ್ತಾರೆ. ಎರಡನೇ ತುತ್ತನ್ನು ಬಾಯಿ ಚಪ್ಪರಿಸುತ್ತಾ ಸವಿಯುತ್ತಾರೆ! ಬಳಿಕ ಮಹಿಳೆಯರಿಗೆ ಸನ್ನೆಗಳಿಂದಲೇ ಅದ್ಭುತವಾಗಿದೆ ಅನ್ನುತ್ತಾರೆ. ಉತ್ತರ ಕರ್ನಾಟಕ ಊಟದ ವೈಶಿಷ್ಟ್ಯವೇ ಅದು ಮಾರಾಯ್ರೇ, ತಿಂದವರ ಬಾಯಿ ಚಪ್ಪರಿಸುವ ಜೊತೆಗೆ ಮೆಚ್ಚುಗೆಯಿಂದ ತಲೆದೂಗುವಂತೆ ಮಾಡುತ್ತದೆ.

 

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ