ಭಾರೀ ಮಳೆಗೆ ಗುಡ್ಡ ಕುಸಿತ; ಚಿಕ್ಕಮಗಳೂರಿನ ಈ ಪ್ರವಾಸಿ ತಾಣಗಳಿಗೆ ನಿರ್ಬಂಧ ಹೇರಿದ ಜಿಲ್ಲಾಡಳಿತ

ಚಿಕ್ಕಮಗಳೂರಿನಿಂದ ಚಂದ್ರದ್ರೋಣ ಪರ್ವತಕ್ಕೆ ತೆರಳುವ ಮಾರ್ಗ ಮಧ್ಯದ ಕೈಮರ ಚೆಕ್ ಪೋಸ್ಟ್ ಬಳಿ ಗೇಟ್ ಹಾಕಿದ್ದು ಚಂದ್ರದ್ರೋಣ ಪರ್ವತಕ್ಕೆ ಬರುವ ಪ್ರವಾಸಿಗರನ್ನ ವಾಪಸ್ ಕಳಿಸಲಾಗುತ್ತಿದೆ.

ಭಾರೀ ಮಳೆಗೆ ಗುಡ್ಡ ಕುಸಿತ; ಚಿಕ್ಕಮಗಳೂರಿನ ಈ ಪ್ರವಾಸಿ ತಾಣಗಳಿಗೆ ನಿರ್ಬಂಧ ಹೇರಿದ ಜಿಲ್ಲಾಡಳಿತ
| Updated By: ಆಯೇಷಾ ಬಾನು

Updated on: Jul 29, 2023 | 11:29 AM

ಚಿಕ್ಕಮಗಳೂರು, ಜುಲೈ 29: ಪ್ರವಾಸಿಗರ ಹಾಟ್ ಸ್ಪಾಟ್ ಆಗಿರುವ ಕಾಫಿನಾಡಿನ ಪ್ರವಾಸಿ ತಾಣಗಳಿಗೆ ವೀಕೆಂಡ್ ಪ್ರವಾಸ ಮಾಡುವ ಪ್ಲಾನ್ ನೀವೇನಾದ್ರೂ ಮಾಡಿದ್ರೆ ಸ್ವಲ್ಪ ದಿನ ಮುಂದೂಡುವುದು ಒಳ್ಳೆಯದು. ಚಂದ್ರದ್ರೋಣ ಪರ್ವತದ ಸಾಲಿನ ಮುಳ್ಳಯ್ಯನಗಿರಿ, ದತ್ತಪೀಠಕ್ಕೆ ಅಂತ ವೀಕೆಂಡ್ ಪ್ರವಾಸಕ್ಕೆ ಬಂದ್ರೆ ನಿಮ್ಗೆ ನಿರಾಸೆ ಆಗೋದು ಪಕ್ಕ.

ಕಾಫಿನಾಡು ಚಿಕ್ಕಮಗಳೂರಿನ ಪ್ರವಾಸಿ ತಾಣಗಳು ಪ್ರವಾಸಿಗರ ಹಾಟ್ ಸ್ಪಾಟ್ ಆಗಿದೆ. ವಾರದಿಂದ ವಾರಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ರಾಜ್ಯ ಹೊರರಾಜ್ಯದ ಪ್ರವಾಸಿಗರು ಚಿಕ್ಕಮಗಳೂರಿನ ಚಂದ್ರದ್ರೋಣ ಪರ್ವತದ ಸಾಲಿನಲ್ಲಿ ಇರುವ ಪ್ರವಾಸಿ ತಾಣಗಳದ ಮುಳ್ಳಯ್ಯನಗಿರಿ, ದತ್ತಪೀಠ, ಸೀತಾಳಯ್ಯನ ಗಿರಿ, ಹೊನ್ನಮ್ಮನಹಳ್ಳ, ಕೆಮ್ಮಣ್ಣು ಗುಂಡಿ ಸೇರಿದಂತೆ ಹೆಬ್ಬೆ ಜಲಪಾತಕ್ಕೆ ಪ್ರವಾಸಿಗರ ದಂಡೆ ಹರಿದು ಬರುತ್ತದೆ. ಕಳೆದ ಒಂದು ವಾರದಿಂದ ಸುರಿಯುತ್ತಿರುವ ಧಾರಾಕಾರ ಮಳೆಗೆ ಚಂದ್ರದ್ರೋಣ ಪರ್ವತದ ಸಾಲಿನಲ್ಲಿ ಗುಡ್ಡ ಕುಸಿತವಾಗಿದ್ದು ನಿರಂತರ ಮಳೆಗೆ ರಸ್ತೆಗೆ ಅಡ್ಡಲಾಗಿ ಗುಡ್ಡದ ಮಣ್ಣು ಕಲ್ಲು ‌ಬಿಳುತ್ತಿದೆ. ಹೀಗಾಗಿ ಮುಂಜಾಗ್ರತಾ ಕ್ರಮವಾಗಿ ಪ್ರವಾಸಿಗರನ್ನ ಚಿಕ್ಕಮಗಳೂರು ಜಿಲ್ಲಾಡಳಿತ ಜುಲೈ 31ರ ವರೆಗೆ ನಿರ್ಬಂಧ ಹೇರಿದೆ. ಚಿಕ್ಕಮಗಳೂರಿನಿಂದ ಚಂದ್ರದ್ರೋಣ ಪರ್ವತಕ್ಕೆ ತೆರಳುವ ಮಾರ್ಗ ಮಧ್ಯದ ಕೈಮರ ಚೆಕ್ ಪೋಸ್ಟ್ ಬಳಿ ಗೇಟ್ ಹಾಕಿದ್ದು ಚಂದ್ರದ್ರೋಣ ಪರ್ವತಕ್ಕೆ ಬರುವ ಪ್ರವಾಸಿಗರನ್ನ ವಾಪಸ್ ಕಳಿಸಲಾಗುತ್ತಿದೆ.

ರಾಜ್ಯದ ಅತಿ‌ ಎತ್ತರದ ಶಿಖರವಾದ ಮುಳ್ಳಯ್ಯನಗಿರಿಗೆ ಪ್ರವಾಸಿಗರ ದಂಡು ಹರಿದು ಬರುತ್ತಿದ್ದು ಜನವರಿ ಇಂದ ಜೂನ್ ವರೆಗೂ 30 ಲಕ್ಷ ಪ್ರವಾಸಿಗರು ಭೇಟಿ ನೀಡಿದ್ದಾರೆ. ಈ‌ ವೀಕೆಂಡ್ ನಲ್ಲಿ ಧಾರಾಕಾರವಾಗಿ‌ ಸುರಿಯುತ್ತಿರುವ ಮಳೆಯಲ್ಲಿ ಎತ್ತರದ ಶಿಖರವಾದ ಮುಳ್ಳಯ್ಯನಗಿರಿ ಮೇಲೆ ನಿಂತು ಪ್ರಕೃತಿ ಸೌಂದರ್ಯ ಸವಿಯುವ ಪ್ಲಾನ್ ಮಾಡಿದ್ದ ಪ್ರವಾಸಿಗರಿಗೆ ನಿರಾಸೆಯಾಗಿದೆ‌. ಚಂದ್ರದ್ರೋಣ ಪರ್ವತದ ಸಾಲಿನಲ್ಲಿ ಮಳೆ‌ ಆರ್ಭಟ ಮುಂದುವರೆದಿದ್ದು ಮಳೆ‌ ಕಡಿಮೆ ‌ಆಗುವ ವರೆಗೂ ಕಾಫಿನಾಡಿನ ಪ್ರವಾಸಿ ತಾಣಗಳಿಗೆ ಬರುವ ಪ್ಲಾನ್ ಮಾಡ್ಬೇಡಿ‌ ಎಂದು ಚಿಕ್ಕಮಗಳೂರು ಜಿಲ್ಲಾಡಳಿತ ಪ್ರವಾಸಿಗರಿಗೆ ಮನವಿ ಮಾಡಿದೆ.

Follow us