ಕುಂಭಮೇಳಕ್ಕೆ ಹೋಗುವುದು ನನ್ನ ವೈಯಕ್ತಿಕ ವಿಚಾರ, ಗಂಗೆ ಯಾರ ಸ್ವತ್ತಲ್ಲ ಡಿಕೆ ಶಿವಕುಮಾರ್

ವಿವೇಕ ಬಿರಾದಾರ

Updated on: Feb 05, 2025 | 1:52 PM

ಗಂಗೆಯಲ್ಲಿ ಮಿಂದರೆ ಡಿಕೆ ಶಿವಕುಮಾರ್ ಅವರ ಪಾಪಗಳು ಕಳೆಯುತ್ತವೆಯಾ? ಎಂಬ ವಿಪಕ್ಷ ನಾಯಕ ಆರ್ ಅಶೋಕ್ ಅವರ ಹೇಳಿಕೆಗೆ ಡಿಸಿಎಂ ಡಿಕೆ ಶಿವಕುಮಾರ್​ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದು ವೈಯಕ್ತಿಕ ನಂಬಿಕೆ. ಗಂಗೆ, ಕಾವೇರಿ ಮುಂತಾದ ನದಿಗಳು ಯಾರ ಸ್ವತ್ತಲ್ಲ ಎಂದು ಗರಂ ಆಗಿದ್ದಾರೆ.

ಬೆಂಗಳೂರು, ಫೆಬ್ರವರಿ 05: ಗಂಗೆಯಲ್ಲಿ ಮಿಂದ ತಕ್ಷಣ ಡಿಕೆ ಶಿವಕುಮಾರ್​ (DK Shivakumar) ಅವರ ಪಾಪಗಳೆಲ್ಲ ಕಳೆದುಹೋಗುತ್ತಾ? ಎಂಬ ವಿಪಕ್ಷ ನಾಯಕ ಆರ್​ ಅಶೋಕ್​ (R Ashok) ಹೇಳಿಕೆಗೆ ಡಿಸಿಎಂ ಡಿಕೆ ಶಿಕವಕುಮಾರ್​ ತಿರುಗೇಟು ನೀಡಿದ್ದಾರೆ. ಕುಂಭಮೇಳಕ್ಕೆ ಹೋಗುವುದು ಬಿಡುವುದು ನನ್ನ ವೈಯಕ್ತಿಕ ವಿಚಾರ. ನನ್ನ ವೈಯಕ್ತಿಕ ನಂಬಿಕೆ, ಭಕ್ತಿ ಬಗ್ಗೆ ಮಾತನಾಡುವ ನೈತಿಕತೆ ಯಾರಿಗೂ ಇಲ್ಲ. ಎಲ್ಲರಿಗೂ ಅವರದ್ದೇ ಆದ ಭಕ್ತಿ, ನಂಬಿಕೆಗಳು ಇರುತ್ತವೆ ಎಂದು ವಾಗ್ದಾಳಿ ಮಾಡಿದರು.

ಬೆಂಗಳೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಇದು ನಮ್ಮ ಧರ್ಮ-ಕರ್ಮ, ನಮ್ಮ ಆಚಾರ-ವಿಚಾರ ಮತ್ತು ನಮ್ಮ ನಂಬಿಕೆ. ಗಂಗೆ, ಕಾವೇರಿ, ಕೃಷ್ಣ ಮತ್ತು ಭ್ರಹ್ಮಪುತ್ರ ನದಿಗಳು ಯಾರ ಸ್ವತ್ತು ಅಲ್ಲ. ಹಾಗಾದರೆ, ಅವರು ಅಶೋಕ್ ಅಂತ ಯಾಕೆ ಹೆಸರು ಇಟ್ಟುಕೊಂಡಿದ್ದಾರೆ. ಅಶೋಕ್ ಬದಲು ಕಲ್ಲು ಮಣ್ಣು ಎಂದು ಹೆಸರು ಇಟ್ಟುಕೊಳ್ಳಬಹುದಲ್ಲ. ನನ್ನ ನಂಬಿಕೆ ಬಗ್ಗೆ ಮಾತಾಡುವ ಅಶೋಕ್​ ಅವರಿಗೆ ಏನೋ ಸಮಸ್ಯೆ ಇರಬೇಕು. ಮೊದಲು ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆಯಲಿ. ನನ್ನ ಹೆಸರು ಹೇಳದಿದ್ರೆ ಕೆಲವರಿಗೆ ನಿದ್ದೆ ಬರುವುದಿಲ್ಲ, ಉತ್ಸಾಹ ಬರಲ್ಲ ಎಂದು ಆಕ್ರೋಶಗೊಂಡರು.

ಇನ್ನು, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್​ ಖರ್ಗೆ ಅವರು, ಅವರ ವಿಚಾರ ಹೇಳಿದ್ದಾರೆ ಎಂದು ಡಿಸಿಎಂ ಡಿಕೆ ಶಿವಕುಮಾರ್​ ಹೇಳಿದರು.

ಇನ್ನು ಬೆಂಗಳೂರು ಎರಡನೇ ವಿಮಾನ ನಿಲ್ದಾಣದ ವಿಚಾರವಾಗಿ ಮಾತನಾಡಿದ ಅವರು, ಎರಡನೇ ವಿಮಾನ ನಿಲ್ದಾಣಕ್ಕೆ ನಮ್ಮ ಕೈಗಾರಿಕಾ ಸಚಿವರು ಸ್ಥಳ ಹುಡುಕಾಡುತ್ತಿದ್ದಾರೆ. ಇನ್ನು, ಈ ಬಗ್ಗೆ ನನ್ನ ಮತ್ತು ಮುಖ್ಯಮಂತ್ರಿಗಳ ಬಳಿ ಚರ್ಚೆ ಮಾಡಿಲ್ಲ. ಇನ್ನೂ ಅಂತಿಮ ನಿರ್ಧಾರವಾಗಿಲ್ಲ ಎಂದರು. ಬೆಂಗಳೂರಿನಲ್ಲಿ ನೀರಿನ ದರ​ ಏರಿಕೆ ಮಾಡಬೇಕೆಂಬ ಪ್ರಸ್ತಾಪ ಬಂದಿದೆ. ಮುಂದಿನ ಸಂಪುಟ ಸಭೆಯಲ್ಲಿ ಕಾವೇರಿ ನೀರಿನ ದರ​ ಏರಿಕೆ ಬಗ್ಗೆ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ಹೇಳಿದರು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published on: Feb 05, 2025 01:48 PM
Loading...
Unable to load recommendations.
Follow Us