ರೇವಂತ್ ರೆಡ್ಡಿ ಪದಗ್ರಹಣ ಸಮಾರಂಭದಲ್ಲಿ ಡಿಕೆ ಶಿವಕುಮಾರ್ ಸೋನಿಯಾ ಗಾಂಧಿಗೆ ಗೌರವ ಸಲ್ಲಿಸಿದ್ದು ಹೇಗೆ ಗೊತ್ತಾ?

|

Updated on: Dec 07, 2023 | 3:44 PM

ತೆಲಂಗಾಣದ ಕೊಡಂಗಲ್ ವಿಧಾನ ಸಭಾ ಕ್ಷೇತ್ರದಿಂದ ವಿಧಾನ ಸಭೆಗೆ ಆಯ್ಕೆಯಾಗಿರುವ ಅನ್ನಮುಲ ರೇವಂತ್ ರೆಡ್ಡಿ ಮತ್ತು ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ನಡುವೆ ಅವರ ಪೊಲಿಟಿಕಲ್ ಕರೀಯರ್ ಗಳಿಗೆ ಸಂಬಂಧಿಸಿದಂತೆ ಒಂದಷ್ಟು ಸಾಮ್ಯತೆಗಳಿವೆ. ಇಬ್ಬರೂ ಮೂಲ ಕಾಂಗ್ರೆಸ್ಸಿಗರಲ್ಲದಿದ್ದರೂ ಪಕ್ಷವನ್ನು ಸೇರಿ ಮಾಸ್ ಲೀಡರ್ ಗಳಾಗಿ ಗುರುತಿಸಿಕೊಂಡು ಮುಖ್ಯಮಂತ್ರಿ ಸ್ಥಾನಕ್ಕೇರಿದವರು. ಸಿದ್ದರಾಮಯ್ಯ ಜೆಡಿಎಸ್ ಪಕ್ಷದಿಂದ ಕಾಂಗ್ರೆಸ್ ಸೇರಿದ್ದರೆ ರೇವಂತ್ 2017ರಲ್ಲಿ ತೆಲುಗು ದೇಶಂ ಪಕ್ಷ ಬಿಟ್ಟು ‘ಕೈ’ ಹಿಡಿದಿದ್ದರು.

ಹೈದರಾಬಾದ್: ತೆಲಂಗಾಣದಲ್ಲಿ ಕೆ ಚಂದ್ರಶೇಖರ್ ರಾವ್ ಅಧಿಕಾರ ಕೊನೆಗೊಂಡು ರೇವಂತ್ ರೆಡ್ಡಿ (Revanth Reddy) ರಾಜ್ಯಭಾರ ಆರಂಭವಾಗಿದೆ. ನಗರದ ಲಾಲ್ ಬಹಾದೂರ್ ಕ್ರೀಡಾಂಗಣದಲ್ಲಿ ಸಾವಿರಾರು ಜನ, ಅಭಿಮಾನಿಗಳು, ಆಪ್ತರು ಮತ್ತು ಗಣ್ಯರ ಸಮ್ಮುಖದಲ್ಲಿ ರೇವಂತ್ ತೆಲಂಗಾಣದ ಎರಡನೇ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ಗಣ್ಯರಲ್ಲಿ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ (Sonia Gandhi), ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah), ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar), ಪ್ರಿಯಾಂಕಾ ಗಾಂಧಿ ವಾದ್ರಾ, ರಾಹುಲ್ ಗಾಂಧಿ ಮೊದಲಾದವರು ಸೇರಿದ್ದರು. ವೇದಿಕೆಯ ಮೇಲೆ ತೆಲಂಗಾಣ ಕಾಂಗ್ರೆಸ್ ನಾಯಕರ ಜೊತೆ ನಿಂತಿದ್ದ ಶಿವಕುಮಾರ್, ಸೋನಿಯಾ ತಮ್ಮ ಬಳಿ ಬಂದಾಗ ಕಾಲು ಮುಟ್ಟಿ ನಮಸ್ಕರಿಸುತ್ತಾರೆ. ಸೋನಿಯ, ಕೆಪಿಸಿಸಿ ಅಧ್ಯಕ್ಷನ ಬೆನ್ನುತಟ್ಟಿ ಯೋಗಕ್ಷೇಮ ವಿಚಾರಿಸುತ್ತಾರೆ. ಇವರಿಬ್ಬರ ನಡುವೆ ತಾಯಿ-ಮಗನ ಬಾಂಧವ್ಯವಿದೆ. ವಿಧಾನಸಭಾ ಚುನಾವಣೆ ಸಮಯದಲ್ಲಿ ಬಸನಗೌಡ ಪಾಟೀಲ್ ಯತ್ನಾಳ್, ಸೋನಿಯಾ ವಿರುದ್ಧ ಕಾಮೆಂಟ್ ಮಾಡಿದ್ದಾಗ ಶಿವಕುಮಾರ್, ಸೋನಿಯಾ ತಮ್ಮ ತಾಯಿಯ ಹಾಗೆ, ಅವರ ವಿರುದ್ಧ ಮಾತಾಡಿದರೆ ಸಹಿಸಲ್ಲ ಎಂದಿದ್ದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ