ದುಬಾರೆ ದುರಂತಕ್ಕೆ 2.5 ತಿಂಗಳು: ಇಂದಿಗೂ ಜಾರಿಯಾಗದ ಎಸ್‌ಒಪಿ, ಲಕ್ಷಾಂತರ ರೂ. ನಷ್ಟದಲ್ಲಿ ರಾಫ್ಟಿಂಗ್ ಉದ್ಯಮಿಗಳು

Edited By:

Updated on: Aug 07, 2026 | 3:39 PM

ದುಬಾರೆ ಆನೆ ಶಿಬಿರದಲ್ಲಿ ಪ್ರವಾಸಿಗರ ಸಾವು ಸಂಭವಿಸಿ ಎರಡೂವರೆ ತಿಂಗಳಾದರೂ, ಅರಣ್ಯ ಇಲಾಖೆ SOP ಜಾರಿಗೊಳಿಸುವಲ್ಲಿ ವಿಳಂಬ ಮಾಡಿದೆ. ಇದರಿಂದ ಶಿಬಿರ ಇನ್ನೂ ಮುಚ್ಚಿರುವುದರಿಂದ ಕೊಡಗಿನ ಪ್ರವಾಸೋದ್ಯಮ ಕುಸಿದಿದೆ. ರಿವರ್ ರಾಫ್ಟಿಂಗ್, ಹೋಟೆಲ್‌ಗಳು ಮತ್ತು ವ್ಯಾಪಾರಿಗಳು ತೀವ್ರ ಆರ್ಥಿಕ ನಷ್ಟ ಅನುಭವಿಸುತ್ತಿದ್ದಾರೆ. ಸ್ಥಳೀಯರು ಕೂಡಲೇ ಸುರಕ್ಷತಾ ಕ್ರಮಗಳನ್ನು ಜಾರಿಗೊಳಿಸಿ, ದುಬಾರೆಯನ್ನು ಪ್ರವಾಸಿಗರಿಗೆ ಮುಕ್ತಗೊಳಿಸುವಂತೆ ಒತ್ತಾಯಿಸಿದ್ದಾರೆ.

ಮಡಿಕೇರಿ, ಆ.7 : ಕೊಡಗಿನ ಪ್ರಸಿದ್ಧ ಪ್ರವಾಸಿ ತಾಣವಾದ ದುಬಾರೆ ಆನೆ ಶಿಬಿರದಲ್ಲಿ ಎರಡು ಸಾಕಾನೆಗಳ ನಡುವಿನ ಕಾದಾಟಕ್ಕೆ ಸಿಲುಕಿ ಪ್ರವಾಸಿ ಮಹಿಳೆಯೊಬ್ಬರು ದುರಂತವಾಗಿ ಮೃತಪಟ್ಟು ಎರಡೂವರೆ ತಿಂಗಳು ಕಳೆದರೂ, ಅರಣ್ಯ ಇಲಾಖೆಯ ವಿಳಂಬ ಧೋರಣೆಯಿಂದಾಗಿ ಶಿಬಿರ ಇನ್ನೂ ಬಾಗಿಲು ತೆರೆದಿಲ್ಲ. ಸರ್ಕಾರ ಪ್ರಮಾಣಿತ ಕಾರ್ಯಾಚರಣೆ ವಿಧಾನ (SOP) ರೂಪಿಸಿದ್ದರೂ, ಇಲಾಖೆ ಅದನ್ನು ಜಾರಿಗೊಳಿಸಲು ಕಾಲಹರಣ ಮಾಡುತ್ತಿರುವುದರಿಂದ ದುಬಾರೆಯ ಪ್ರವಾಸೋದ್ಯಮ ಸಂಪೂರ್ಣವಾಗಿ ಕುಸಿದುಬಿದ್ದಿದೆ. ಮೇ 18ರಂದು ನಡೆದ ದುರಂತದ ಬೆನ್ನಲ್ಲೇ ದುಬಾರೆ ಆನೆ ಶಿಬಿರವನ್ನು ತಾತ್ಕಾಲಿಕವಾಗಿ ಬಂದ್ ಮಾಡಲಾಗಿತ್ತು. ಆದರೆ ತಿಂಗಳುಗಳು ಉರುಳಿದರೂ ಶಿಬಿರ ಪುನರಾರಂಭಗೊಳ್ಳದ ಹಿನ್ನೆಲೆಯಲ್ಲಿ ಪ್ರವಾಸಿಗರು ದುಬಾರೆಯತ್ತ ಮುಖ ಮಾಡುತ್ತಿಲ್ಲ. ಪ್ರತಿವರ್ಷ ಮಳೆಗಾಲದಲ್ಲಿ ದುಬಾರೆಯಲ್ಲಿ ರಿವರ್ ರಾಫ್ಟಿಂಗ್‌ಗೆ ಭರ್ಜರಿ ಬೇಡಿಕೆ ಇರುತ್ತಿತ್ತು. ಲಕ್ಷಾಂತರ ರೂಪಾಯಿ ಹೂಡಿಕೆ ಮಾಡಿ ಬೋಟ್‌ಗಳನ್ನು ಇಳಿಸಿರುವ ರಾಫ್ಟಿಂಗ್ ಮಾಲೀಕರು, ಈ ಬಾರಿ ಪ್ರವಾಸಿಗರಿಲ್ಲದೆ ತೀವ್ರ ಆರ್ಥಿಕ ನಷ್ಟ ಎದುರಿಸುತ್ತಿದ್ದಾರೆ. ದುಬಾರೆ ವ್ಯಾಪ್ತಿಯ ಹೋಟೆಲ್‌ಗಳು, ಹೋಮ್‌ಸ್ಟೇಗಳು ಹಾಗೂ ಸಣ್ಣಪುಟ್ಟ ವ್ಯಾಪಾರಿ ಮಳಿಗೆಗಳು ಪ್ರವಾಸಿಗರಿಲ್ಲದೆ ಬಿಕೋ ಎನ್ನುತ್ತಿದ್ದು, ಜೀವನೋಪಾಯಕ್ಕೆ ಪರದಾಡುವಂತಾಗಿದೆ. ಆನೆ ಶಿಬಿರಗಳಿಗೆ ಸುರಕ್ಷಿತ ಎಸ್‌ಒಪಿ (SOP) ಜಾರಿಗೊಳಿಸುವಂತೆ ಸರ್ಕಾರ ಸೂಚನೆ ನೀಡಿದ್ದರೂ, ಅದನ್ನು ಅನುಷ್ಠಾನಕ್ಕೆ ತರಲು ಅರಣ್ಯ ಇಲಾಖೆ ಅಧಿಕಾರಿಗಳು ನಿರ್ಲಕ್ಷ್ಯ ವಹಿಸುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ. “ಸುರಕ್ಷತಾ ನಿಯಮಗಳನ್ನು ಹಾಗೂ ಎಸ್‌ಒಪಿಯನ್ನು ಶೀಘ್ರವಾಗಿ ಅನುಷ್ಠಾನಗೊಳಿಸಿ, ಸುರಕ್ಷಿತ ವಾತಾವರಣದೊಂದಿಗೆ ದುಬಾರೆ ಆನೆ ಶಿಬಿರವನ್ನು ತಕ್ಷಣವೇ ಪ್ರವಾಸಿಗರಿಗೆ ಮುಕ್ತಗೊಳಿಸಬೇಕು” ಎಂದು ಸ್ಥಳೀಯ ಉದ್ಯಮಿಗಳು ಹಾಗೂ ಸಾರ್ವಜನಿಕರು ಒತ್ತಾಯಿಸಿದ್ದಾರೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published on: Aug 07, 2026 03:39 PM
Loading...
Unable to load recommendations.
Follow Us