ಗಳೆ ಹೊಡೆಯಲು ಎತ್ತುಗಳಿಲ್ಲದ ಕಲಘಟಗಿಯ ವೃದ್ಧ ದಂಪತಿ ತಾವೇ ಪಶುಗಳ ಹಾಗೆ ಕೆಲಸಕ್ಕೆ ಮುಂದಾಗುತ್ತಾರೆ!

Updated on: Jun 25, 2025 | 2:28 PM

ಜಂಬುಲಿಂಗ ಅವರಿಗೆ ಇಬ್ಬರು ಗಂಡು ಮಕ್ಕಳಿದ್ದಾರೆ. ಮದುವೆಯ ಬಳಿಕ ಅವರು ಬೇರೆ ಮನೆಗಳನ್ನು ಮಾಡಿಕೊಂಡು ತಮ್ಮ ತಮ್ಮ ಬದುಕಿನಲ್ಲಿ ವ್ಯಸ್ತರಾಗಿದ್ದಾರೆ. ಅಪ್ಪ ಅಮ್ಮನ ಕಡೆ ಗಮನ ಹರಿಸುವ ವ್ಯವಧಾನ ಅವರಿಗಿಲ್ಲ. ಅವರು ಹುಬ್ಬಳ್ಳಿಗೆ ಗಾರೆ ಕೆಲಸಕ್ಕೆ ಅಂತ ಹೋಗೋದ್ರಿಂದ ಹೆಚ್ಚಿನದೇನು ನಿರೀಕ್ಷಿಸಲಾದೀತು? ಆದರೆ, ಹಿರಿಯ ದಂಪತಿ ಹೀಗೆ ಪಶುಗಳ ಹಾಗೆ ದುಡಿಯುವದನ್ನು ನೋಡಿದರೆ ಹೆತ್ತಮಕ್ಕಳಲ್ಲದವರಿಗೂ ವ್ಯಥೆ ಅನಿಸುತ್ತದೆ.

ಧಾರವಾಡ, ಜೂನ್ 25: ಈ ದೃಶ್ಯಗಳನ್ನು ನೋಡಿದ ಬಳಿಕ ನಮ್ಮ ರಾಜಕಾರಣಿಗಳಿಗೆ ಏನೂ ಅನಿಸುತ್ತಿಲ್ಲವಾದರೆ ಅವರಲ್ಲಿ ಮಾನವೀಯತೆ ಸತ್ತಿದೆ ಅಂತಲೇ ಅರ್ಥ. ಎತ್ತುಗಳ ಹಾಗೆ ಗಳೆ ಹೊಡೆಯುತ್ತಿರುವ ಜಂಬುಲಿಂಗ ಬಸವಣ್ಣೆಪ್ಪ ಅಂಗಡಿಯವರಿಗೆ ಈಗ 62 ರ ಇಳಿಪ್ರಾಯ. ಆದರೂ ತಮ್ಮ ಪತ್ನಿಯೊಂದಿಗೆ ತಮ್ಮ ಒಂದೂವರೆ ಎಕರೆ ಜಮೀನಿನಲ್ಲಿ ದುಡಿಯುವುದು ತಪ್ಪಿಲ್ಲ. ಗಳೆ ಹೊಡೆಯಲು ಅವರಲ್ಲಿ ಎತ್ತುಗಳಿಲ್ಲ ಮತ್ತು ಅವುಗಳನ್ನು ಬಾಡಿಗೆ ಪಡೆಯಲು ಅಥವಾ ಕೊಳ್ಳಲು ಹಣವಿಲ್ಲ. ತಮ್ಮನ್ನು ಸಲುಹಿರಿ ಅಂತ ಈ ಸ್ವಾಭಿಮಾನಿ ಹಿರಿಯ ದಂಪತಿ ಯಾರನ್ನೂ ಅಂಗಲಾಚುತ್ತಿಲ್ಲ, ಬದಲಿಗೆ ಸರ್ಕಾರದಿಂದ ಸಿಗುವ ಸವಲತ್ತುಗಳನ್ನು ತಮ್ಮವರೆಗೆ ಮುಟ್ಟಿಸಿ ಅಂತ ವಿನಂತಿಸಿಕೊಳ್ಳುತ್ತಿದ್ದಾರೆ. ಧಾರವಾಡದ ಕಲಘಟಗಿಯಲ್ಲಿ ಸಾಕಷ್ಟು ಬ್ಯಾಂಕುಗಳಿವೆ, ಜಂಬುಲಿಂಗ ಅವರಿಗೆ ಕೃಷಿ ಸಾಲ ಕೊಡಿಸಿದರೆ ಎತ್ತುಗಳನ್ನು ಕೊಂಡು ತಮ್ಮ ಬದುಕಿನಲ್ಲಿ ಕೊಂಚ ನೆಮ್ಮದಿಯನ್ನು ಕಂಡುಕೊಳ್ಳುತ್ತಾರೆ. ಕ್ಷೇತ್ರದ ಶಾಸಕ ಮತ್ತು ಮಂತ್ರಿಯೂ ಅಗಿರುವ ಸಂತೋಷ್ ಲಾಡ್ ಕೇಳಿಸಿಕೊಳ್ಳುತ್ತಿದ್ದಾರೆಯೇ?

ಇದನ್ನೂ ಓದಿ:   Karnataka Assembly Session: ಉತ್ತರ ಕರ್ನಾಟಕದಲ್ಲಿ ಕೇವಲ ಕೃಷಿ ಕ್ರಾಂತಿ ಆದರೆ ಸಾಲದು, ಔದ್ಯೋಗಿಕ ಕ್ರಾಂತಿಯೂ ಅಗಬೇಕು: ಲಕ್ಷ್ಮಣ ಸವದಿ

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ