73ರ ವಯಸ್ಸಿನ ಒಂಟಿ ವೃದ್ಧೆಯ ಗೋಳು ಕೇಳುವವರೇ ಇಲ್ಲ..: ರೇಷನ್ ಕಾರ್ಡ್‌ಗಾಗಿ 40 ವರ್ಷಗಳಿಂದ ಅಲೆದಾಟ; ಅನ್ನವೂ ಇಲ್ಲ, ಭಾಗ್ಯವೂ ಇಲ್ಲ
ಶಿವಮೊಗ್ಗದ ಹೊಸನಗರದಲ್ಲಿ 73 ವರ್ಷದ ವನಜ ಶೆಡ್ತಿ ಅವರು 40 ವರ್ಷಗಳಿಂದ ಪಡಿತರ ಚೀಟಿಗಾಗಿ ಕಚೇರಿ ಕಚೇರಿ ಅಲೆದಾಡುತ್ತಿದ್ದಾರೆ. ಬಿಪಿ, ಶುಗರ್ ಹಾಗೂ ಕಾಲು ನೋವಿನಿಂದ ಬಳಲುತ್ತಿರುವ ಇವರಿಗೆ 'ಅನ್ನಭಾಗ್ಯ' ಸೇರಿದಂತೆ ಯಾವುದೇ ಸರ್ಕಾರಿ ಯೋಜನೆಗಳ ಸೌಲಭ್ಯ ಸಿಗುತ್ತಿಲ್ಲ. ಅಧಿಕಾರಿಗಳ ನಿರ್ಲಕ್ಷ್ಯದಿಂದ ವೃದ್ಧಾಪ್ಯದಲ್ಲಿ ಬದುಕು ಕಷ್ಟವಾಗಿದೆ. ತಕ್ಷಣ ಪಡಿತರ ಚೀಟಿ ನೀಡುವಂತೆ ಅವರು ಮನವಿ ಮಾಡಿದ್ದಾರೆ.
ಶಿವಮೊಗ್ಗ, ನ.16: ಸರ್ಕಾರ ಬಡವರಿಗಾಗಿ ‘ಅನ್ನಭಾಗ್ಯ’ ಸೇರಿದಂತೆ ಹತ್ತಾರು ಜನಪರ ಯೋಜನೆಗಳನ್ನು ಜಾರಿಗೆ ತಂದಿದ್ದರೂ, ಇಳಿವಯಸ್ಸಿನ ಒಂಟಿ ವೃದ್ಧೆಯೊಬ್ಬರು ಕಳೆದ 40 ವರ್ಷಗಳಿಂದ ಒಂದು ರೇಷನ್ ಕಾರ್ಡ್‌ಗಾಗಿ ಕಚೇರಿಯಿಂದ ಕಚೇರಿಗೆ ಅಲೆದಾಡುತ್ತಿರುವ ಮನಕಲಕುವ ಘಟನೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಅಡಗೋಡಿಯಲ್ಲಿ ಬೆಳಕಿಗೆ ಬಂದಿದೆ. ಬಿಪಿ, ಶುಗರ್ ಹಾಗೂ ತೀವ್ರ ಕಾಲು ನೋವಿನಿಂದ ಬಳಲುತ್ತಿರುವ 73 ವರ್ಷದ ವನಜ ಶೆಡ್ತಿ ಅವರು, ತಮಗೆ ಅನ್ನವೂ ಇಲ್ಲ, ಸರ್ಕಾರದ ಯಾವ ಭಾಗ್ಯವೂ ಸಿಗುತ್ತಿಲ್ಲ ಎಂದು ಕಣ್ಣೀರಿಡುತ್ತಾ ಅಧಿಕಾರಿಗಳ ಮುಂದೆ ಅಂಗಲಾಚುತ್ತಿದ್ದಾರೆ. ಮೂಲತಃ ಉಡುಪಿ ಜಿಲ್ಲೆಯ ಕಾವಡಿ ಗ್ರಾಮದವರಾದ ವನಜ ಶೆಡ್ತಿ, ಚಿಕ್ಕ ವಯಸ್ಸಿನಲ್ಲೇ ಮದುವೆಯಾಗಿ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಮಂಡಗದ್ದೆಗೆ ಬಂದಿದ್ದರು. ಬಳಿಕ ಜೀವನೋಪಾಯಕ್ಕಾಗಿ ಕೆಲಸ ಅರಸಿ ಮಗನ ಜೊತೆ ಬೆಂಗಳೂರಿಗೆ ತೆರಳಿದ್ದರು. ಆದರೆ ಬೆಂಗಳೂರಿನಲ್ಲಿ ಬದುಕು ಕಟ್ಟಿಕೊಳ್ಳಲು ಸಾಧ್ಯವಾಗದೆ ಮತ್ತೆ ಹೊಸನಗರ ತಾಲೂಕಿನ ಅಡಗೋಡಿಗೆ ವಾಪಸಾಗಿದ್ದಾರೆ. ಅಡಗೋಡಿಯಲ್ಲಿ ಒಂಟಿಯಾಗಿ ವಾಸಿಸುತ್ತಿರುವ ವನಜ ಶೆಡ್ತಿ ಅವರಿಗೆ ಕಳೆದ ನಾಲ್ಕು ದಶಕಗಳಿಂದ ರೇಷನ್ ಕಾರ್ಡ್ ಮಾಡಿಸಿಕೊಳ್ಳಲು ಸಾಧ್ಯವಾಗಿಲ್ಲ. ದಾಖಲೆಗಳ ತಾಂತ್ರಿಕ ಸಮಸ್ಯೆ ಅಥವಾ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಇಂದಿಗೂ ಅವರ ಕೈಗೆ ಪಡಿತರ ಚೀಟಿ ಸಿಕ್ಕಿಲ್ಲ. 73ರ ಇಳಿವಯಸ್ಸಿನಲ್ಲಿ ಬಿಪಿ, ಶುಗರ್ ಮತ್ತು ಕಾಲು ನೋವಿನಿಂದ ಬಳಲುತ್ತಿರುವ ವನಜ ಶೆಡ್ತಿ ಅವರಿಗೆ ದುಡಿದು ತಿನ್ನುವ ಶಕ್ತಿಯಿಲ್ಲ. ಸರ್ಕಾರದಿಂದ ಬರುವ ಅಲ್ಪ ವೃದ್ಧಾಪ್ಯ ವೇತನದಲ್ಲೇ ಹೇಗೋ ಜೀವನ ದೂಡುತ್ತಿದ್ದಾರೆ. ರೇಷನ್ ಕಾರ್ಡ್ ಇಲ್ಲದ ಕಾರಣ ಸರ್ಕಾರದ ಉಚಿತ ಅಕ್ಕಿಯಾಗಲಿ ಅಥವಾ ಇತರೆ ಗ್ಯಾರಂಟಿ ಯೋಜನೆಗಳ ಸೌಲಭ್ಯವಾಗಲಿ ಇವರಿಗೆ ಸಿಗುತ್ತಿಲ್ಲ. ಹೊರಗಿನ ಅಂಗಡಿಗಳಲ್ಲಿ ದುಬಾರಿ ಹಣ ಕೊಟ್ಟು ಅಕ್ಕಿ, ದಿನಸಿ ಖರೀದಿಸಲು ಸಾಧ್ಯವಾಗದೆ ಪರದಾಡುತ್ತಿದ್ದಾರೆ. “ಇಳಿವಯಸ್ಸಿನಲ್ಲಿ ಬದುಕುವುದೇ ಕಷ್ಟವಾಗಿದೆ, ಈಗಲಾದರೂ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಮನಸ್ಸು ಮಾಡಿ ನನಗೊಂದು ರೇಷನ್ ಕಾರ್ಡ್ ನೀಡಿ ಬದುಕಲು ಅವಕಾಶ ಮಾಡಿಕೊಡಿ ಸ್ವಾಮಿ” ಎಂದು ವನಜ ಶೆಡ್ತಿ ಅಂಗಲಾಚಿದ್ದಾರೆ.
ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published on: Nov 16, 2026 02:27 PM
‘ನಾನು ಕನ್ನಡ ನಟರ ಬಗ್ಗೆ ತಪ್ಪಾಗಿ ಮಾತನಾಡಿಲ್ಲ’; ಶ್ರೀರಾಮ್ ಸ್ಪಷ್ಟನೆ
ಹೊಸ ಗಂಗಾ ಮನೆಯ ಬಗ್ಗೆ ಮುಕ್ತವಾಗಿ ಹಂಚಿಕೊಂಡ ಸಿಎಂ ಡಿಕೆ ಶಿವಕುಮಾರ್
ಇ-ಕೆವೈಸಿ ಹೆಸರಲ್ಲಿ ವಸೂಲಿಗಿಳಿದ ನ್ಯಾಯಬೆಲೆ ಅಂಗಡಿಗಳ ವಿರುದ್ಧ ಕಠಿಣ ಕ್ರಮ
ಜೆಡಿಎಸ್-ಬಿಜೆಪಿ ಮೈತ್ರಿ ಭಿನ್ನಾಭಿಪ್ರಾಯವಿಲ್ಲ: ಕುಮಾರಸ್ವಾಮಿ ಸ್ಪಷ್ಟನೆ

