ಚುನಾವಣೆ ಮುಗಿದಿದೆ, ಶೀಘ್ರದಲ್ಲೇ ನಾಯಕತ್ವ ಗೊಂದಲಕ್ಕೆ ತೆರೆ ಎಳೆಯಬೇಕು: ಪರಮೇಶ್ವರ್ ಖಡಕ್ ಮಾತು

Updated on: May 06, 2026 | 10:21 AM

ಕರ್ನಾಟಕದಲ್ಲಿನ ನಾಯಕತ್ವ ಗೊಂದಲಕ್ಕೆ ಶೀಘ್ರದಲ್ಲೇ ತೆರೆ ಬೀಳಲಿದೆ ಎಂದು ಸಚಿವ ಡಾ. ಜಿ. ಪರಮೇಶ್ವರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಆಡಳಿತ ಮತ್ತು ಜನಪರ ಕಾರ್ಯಕ್ರಮಗಳಿಗೆ ಆದ್ಯತೆ ನೀಡುವುದು ಪ್ರಮುಖವಾಗಿದ್ದು, ಹೈಕಮಾಂಡ್ ಈ ವಿಷಯವನ್ನು ಆದಷ್ಟು ಬೇಗ ಇತ್ಯರ್ಥಪಡಿಸುತ್ತದೆ ಎಂದು ಅವರು ಹೇಳಿದರು. ಆಂತರಿಕ ಸಮಸ್ಯೆಗಳು ಆಡಳಿತದ ಮೇಲೆ ಪರಿಣಾಮ ಬೀರದಂತೆ ನೋಡಿಕೊಳ್ಳುವ ಅಗತ್ಯವನ್ನು ಪರಮೇಶ್ವರ್ ಒತ್ತಿ ಹೇಳಿದರು.

ಬೆಂಗಳೂರು, ಮೇ 6: ಕರ್ನಾಟಕದ ನಾಯಕತ್ವ ಗೊಂದಲಕ್ಕೆ ಸಂಬಂಧಿಸಿದಂತೆ ಸಚಿವ ಡಾ. ಜಿ ಪರಮೇಶ್ವರ್ ಮಾತನಾಡಿದ್ದು, ಚುನಾವಣೆಗಳು ಮುಗಿದಿರುವುದರಿಂದ ಈ ವಿಷಯಕ್ಕೆ ಶೀಘ್ರದಲ್ಲೇ ತೆರೆ ಬೀಳಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಸಮರ್ಪಕ ಆಡಳಿತ ನೀಡುವುದು ಮುಖ್ಯವಾಗಿದ್ದು, ಜನಪರ ಕಾರ್ಯಕ್ರಮಗಳಿಗೆ ಆದ್ಯತೆ ನೀಡಬೇಕು ಎಂದರು. ಹಲವಾರು ನಾಯಕರು ಮುಂಚೂಣಿಯಲ್ಲಿ ಇರುವಾಗ ತೀರ್ಮಾನ ಕೈಗೊಳ್ಳುವುದು ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ. ಆದರೆ, ಈಗ ಚುನಾವಣೆಗಳ ಗಜಿಬಿಜಿ ಇಲ್ಲದಿರುವುದರಿಂದ ಹೈಕಮಾಂಡ್ ಶೀಘ್ರದಲ್ಲೇ ಈ ಬಗ್ಗೆ ನಿರ್ಧಾರ ಕೈಗೊಳ್ಳುತ್ತದೆ ಮತ್ತು ಕೈಗೊಳ್ಳಬೇಕು ಎಂದು ಪರಮೇಶ್ವರ್ ಹೇಳಿದರು.

ಆಂತರಿಕ ಭಿನ್ನಾಭಿಪ್ರಾಯಗಳು ಆಡಳಿತದ ಮೇಲೆ ದುಷ್ಪರಿಣಾಮ ಬೀರಬಾರದು ಎಂಬುದನ್ನು ಗಮನದಲ್ಲಿಟ್ಟುಕೊಂಡು ನಿರ್ಧಾರ ಕೈಗೊಳ್ಳಬೇಕಿದೆ. ಕಳೆದ 40 ವರ್ಷಗಳಲ್ಲಿ ಇಂತಹ ಅನೇಕ ಸಂದರ್ಭಗಳನ್ನು ನೋಡಿದ್ದೇನೆ ಎಂದು ಅವರು ಸ್ಮರಿಸಿದರು. ಸಂಪುಟ ಪುನಾರಚನೆ ಸೇರಿದಂತೆ ಯಾವುದೇ ನಿರ್ಧಾರಗಳನ್ನು ಮುಖ್ಯಮಂತ್ರಿಗಳು, ಪಕ್ಷದ ಅಧ್ಯಕ್ಷರು ಮತ್ತು ಹೈಕಮಾಂಡ್ ಸಭೆ ಸೇರಿ ತೆಗೆದುಕೊಳ್ಳುತ್ತಾದೆ ಎಂದು ಪರಮೇಶ್ವರ್ ಸ್ಪಷ್ಟಪಡಿಸಿದರು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us