18 ವರ್ಷಗಳಿಂದ ಆರ್​ಸಿಬಿ ತಂಡದಲ್ಲಿದ್ದ ಫಿಸಿಯೋಗೆ ಭಾವುಕ ವಿದಾಯ

Updated on: May 04, 2026 | 6:00 PM

Evan Speechly's Emotional RCB Exit: ಹಾಲಿ ಚಾಂಪಿಯನ್ ಆರ್‌ಸಿಬಿ ತನ್ನ 18 ವರ್ಷಗಳ ಅನುಭವಿ ಫಿಸಿಯೋ ಇವಾನ್ ಸ್ಪೀಚ್ಲಿಗೆ ಭಾವುಕ ವಿದಾಯ ಹೇಳಿದೆ. 2008 ರಿಂದ 2025 ರವರೆಗೆ ತಂಡದಲ್ಲಿದ್ದ ಇವಾನ್, ಆರ್‌ಸಿಬಿ ಮೊದಲ ಐಪಿಎಲ್ ಪ್ರಶಸ್ತಿ ಗೆದ್ದ ಬಳಿಕ ನಿವೃತ್ತರಾದರು. ಆರ್‌ಸಿಬಿ ಅವರನ್ನು ವಿಶೇಷವಾಗಿ ಗೌರವಿಸಿ, ಕೊಹ್ಲಿ ಅವರ ಕೊಡುಗೆಯನ್ನು ಸ್ಮರಿಸಿದರು. ಸ್ಪೀಚ್ಲಿ ಆಟಗಾರರನ್ನು ಫಿಟ್ ಆಗಿಡುವಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದರು.

ಹಾಲಿ ಚಾಂಪಿಯನ್ ಆರ್​ಸಿಬಿ ತನ್ನ ಮುಂದಿನ ಪಂದ್ಯವನ್ನು ಮೇ 7 ರಂದು ಲಕ್ನೋ ಸೂಪರ್​ಜೈಂಟ್ಸ್ ವಿರುದ್ಧ ಏಕನಾ ಕ್ರೀಡಾಂಗಣದಲ್ಲಿ ಆಡಲಿದೆ. ಈ ಪಂದ್ಯಕ್ಕಾಗಿ ತಂಡ ಕೂಡ ತಯಾರಿ ನಡೆಸುತ್ತಿದೆ. ಏಕೆಂದರೆ ಪ್ಲೇ ಆಫ್ ದೃಷ್ಟಿಯಿಂದ ಆರ್​ಸಿಬಿ ತಂಡಕ್ಕೆ ಉಳಿದ ಪಂದ್ಯಗಳ ಗೆಲುವು ಅತ್ಯಗತ್ಯವಾಗಿದೆ. ಈ ನಡುವೆ ಆರ್​ಸಿಬಿ ಫ್ರಾಂಚೈಸಿ ತನ್ನ ಎಕ್ಸ್ ಖಾತೆಯಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿದ್ದು, ಅದರಲ್ಲಿ ಸತತ 18 ವರ್ಷಗಳ ಕಾಲ ಆರ್​ಸಿಬಿ ತಂಡದ ಫಿಸಿಯೋ ಆಗಿ ಕೆಲಸ ಮಾಡಿದ್ದ ಇವಾನ್ ಸ್ಪೀಚ್ಲಿ ಅವರಿಗೆ ಭಾವುಕ ವಿದಾಯವನ್ನು ಹೇಳಿದೆ.

ವಾಸ್ತವವಾಗಿ 2008 ರಲ್ಲಿ ಆರ್​ಸಿಬಿ ತಂಡದ ಫಿಸಿಯೋ ಆಗಿ ನೇಮಕಗೊಂಡಿದ್ದ ಇವಾನ್ ಸ್ಪೀಚ್ಲಿ ಮೂಲತಃ ದಕ್ಷಿಣ ಆಫ್ರಿಕಾದವರು. ಸತತ 18 ವರ್ಷಗಳ ಕಾಲ ಅಂದರೆ 2008 ರಿಂದ 2025 ರ ವರೆಗೆ ಆರ್​ಸಿಬಿ ತಂಡದಲ್ಲಿದ್ದ ಫಿಸಿಯೋ ಇವಾನ್ ಸ್ಪೀಚ್ಲಿ ಕಳೆದ ವರ್ಷವಷ್ಟೇ ತಮ್ಮ ಹುದ್ದೆಯಿಂದ ನಿವೃತ್ತಿ ಹೊಂದಿದ್ದರು. ಅಂದರೆ ಆರ್​ಸಿಬಿ ತಂಡವನ್ನು ಮೊಟ್ಟ ಮೊದಲ ಬಾರಿಗೆ ಐಪಿಎಲ್ ಚಾಂಪಿಯನ್ ಮಾಡಿದ್ದ ಬಳಿಕ ಇವಾನ್ ಸ್ಪೀಚ್ಲಿ ತಂಡವನ್ನು ತೊರೆದಿದ್ದರು.

18 ವರ್ಷಗಳ ಕಾಲ ಆಟಗಾರರನ್ನು ಫಿಟ್ ಆಗಿಡುವಲ್ಲಿ ನಿರ್ಣಾಯಕ ಪಾತ್ರವಹಿಸಿದ್ದ ಸ್ಪೀಚ್ಲಿ ಅವರನ್ನು ಸನ್ಮಾನಿಸಲು ಆರ್‌ಸಿಬಿ ನಿರ್ಧರಿಸಿತ್ತು. ಈ ಕಾರಣಕ್ಕಾಗಿ, ಅವರನ್ನು ವಿಶೇಷವಾಗಿ ಆಹ್ವಾನಿಸಿ ತಂಡದ ಡ್ರೆಸ್ಸಿಂಗ್ ಕೋಣೆಯಲ್ಲಿ ವಿಶೇಷ ಕೈಗಡಿಯಾರವನ್ನು ನೀಡಿ ಗೌರವಿಸಲಾಯಿತು. ಸಮಾರಂಭದಲ್ಲಿ, ಕೊಹ್ಲಿ ಸ್ಪೀಚ್ಲಿ ಬಗ್ಗೆ ತಮ್ಮ ಗೌರವ ಮತ್ತು ಪ್ರೀತಿಯನ್ನು ವ್ಯಕ್ತಪಡಿಸಿದರು, ಆ 18 ವರ್ಷಗಳಲ್ಲಿ, ಆರ್‌ಸಿಬಿಯಲ್ಲಿ ಬೇರೆಯವರಿಗಿಂತ ಸ್ಪೀಚ್ಲಿ, ಬಸು ಮತ್ತು ಮೇನಕಾ ಅವರೊಂದಿಗೆ ಹೆಚ್ಚು ಸಮಯ ಕಳೆದಿದ್ದೇನೆ ಎಂದು ಹೇಳಿದರು.

Follow Us