ವಿಜಯೇಂದ್ರ ರಾಜ್ಯಾಧ್ಯಕ್ಷನಾಗುವ ಮೊದಲು ಸಹ ಬಿಜೆಪಿಯಲ್ಲಿ ಅಶಿಸ್ತು ಇತ್ತು: ಕೆಎಸ್ ಈಶ್ವರಪ್ಪ, ಹಿರಿಯ ಬಿಜೆಪಿ ನಾಯಕ

ವಿಜಯೇಂದ್ರ ರಾಜ್ಯಾಧ್ಯಕ್ಷನಾಗುವ ಮೊದಲು ಸಹ ಬಿಜೆಪಿಯಲ್ಲಿ ಅಶಿಸ್ತು ಇತ್ತು: ಕೆಎಸ್ ಈಶ್ವರಪ್ಪ, ಹಿರಿಯ ಬಿಜೆಪಿ ನಾಯಕ

ಅರುಣ್​ ಕುಮಾರ್​ ಬೆಳ್ಳಿ
|

Updated on: Feb 19, 2024 | 6:24 PM

ಸಮ್ಮಿಶ್ರ ಸರ್ಕಾರ ಉರುಳಿಸಲು ಜೆಡಿಎಸ್ ಮತ್ತು ಕಾಂಗ್ರೆಸ್ ಪಕ್ಷದ ಶಾಸಕರು ಬಿಜೆಪಿ ಸೇರಿದ ಬಳಿಕ ಪಕ್ಷದಲ್ಲಿ ಶಿಸ್ತು ಎಕ್ಕುಟ್ಟಿ ಹೋಗಿದೆ ಅಂತ ಅವರು ಹೇಳಿದ್ದರು. ವಲಸಿಗರು ರೊಚ್ಚಿಗೆದ್ದ ಬಳಿಕ, ನಾನು ಹಾಗೆ ಹೇಳೇ ಇಲ್ಲ ಅಂದಿದ್ದರು. ನಾವು ಅವರು ಹಾಗೆ ಹೇಳಿದ್ದ ವಿಡಿಯೋ ಮತ್ತು ಹೇಳಿದ್ದನ್ನು ನಿರಾಕರಿಸಿದ ವಿಡಿಯೋ ಎರಡನ್ನೂ ಕ್ಲಬ್ ಮಾಡಿ ಕನ್ನಡಿಗರಿಗೆ ತೋರಿಸಿದ್ದೆವು!

ಚಿತ್ರದುರ್ಗ: ಹಿರಿಯ ಬಿಜೆಪಿ ನಾಯಕ ಕೆ ಎಸ್ ಈಶ್ವರಪ್ಪ (KS Eshwarappa) ಮಾತಾಡುವ ಭರದಲ್ಲಿ ತಮ್ಮ ಪಕ್ಷದ ಹುಳುಕುಗಳನ್ನು ಸಹ ಹೊರ ಹಾಕಿಬಿಡುತ್ತಾರೆ. ಅಂಥದೊಂದು ಪ್ರಸಂಗ ಇಂದು ಚಿತ್ರದುರ್ಗದಲ್ಲಿ ಅವರು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡುವಾಗ ನಡೆಯಿತು. ಬಿವೈ ವಿಜಯೇಂದ್ರ (BY Vijayendra) ರಾಜ್ಯಾಧ್ಯಕ್ಷರಾದ ಬಳಿಕ ಬಿಜೆಪಿಯಲ್ಲಿ ಆಂತರಿಕ ಭಿನ್ನಾಭಿಪ್ರಾಯಗಳು (internal differences) ತಲೆದೋರಿರುವ ಬಗ್ಗೆ ಕೇಳಿದ ಪ್ರಶ್ನೆಗೆ ಮೊದಲು ಅವರು ಅದ್ಯಾವದೂ ಇಲ್ಲ ಅಂತ ಹೇಳಿ ವಿಜಯೇಂದ್ರ ಅಧ್ಯಕ್ಷನಾಗುವ ಮೊದಲು ಎಲ್ಲ ಸರಿಯಿತ್ತಾ? ಎಂದು ಮರುಪ್ರಶ್ನೆ ಹಾಕುತ್ತಾರೆ. ತಮ್ಮ ಪಕ್ಷದ ಭಾರೀ ಶಿಸ್ತಿದೆ ಅಂತೇನೂ ಹೇಳಲ್ಲ, ಚಿಕ್ಕಪುಟ್ಟ ಅಸಮಾಧಾನ, ಭಿನ್ನಾಭಿಪ್ರಾಯ ತಮ್ಮಲ್ಲಿವೆ ಎಂದು ಈಶ್ವರಪ್ಪ ಹೇಳುತ್ತಾರೆ. ಆದರೆ ಮೊದಲು ಅವ್ಯಾವೂ ಪಕ್ಷದಲ್ಲಿರಲಲ್ಲ, ಬಿಜೆಪಿ ಪಕ್ಷ ಈಗ ಬೆಳೆಯುತ್ತಿರುವುದರಿಂದ ಬೇರೆ ಪಕ್ಷದ ನಾಯಕರು ಬಂದು ಸೇರ್ಪಡೆಗೊಳ್ಳುತ್ತಿದ್ದಾರೆ ಅನ್ನುತ್ತಾರೆ. ಅವರ ಮಾತಿನ ಅರ್ಥ ಬೇರೆ ಪಕ್ಷಗಳ ನಾಯಕರಿಂದ ಪಕ್ಷದ ಶಿಸ್ತು ಹಾಳಾಗುತ್ತಿದೆಯೇ? ನಿಮಗೆ ನೆನಪಿರಬಹದು, ಹಿಂದೆ ಇದೇ ಬಗೆಯ ಮಾತನ್ನು ಹೇಳಿ ಅವರು ವಿವಾದಕ್ಕೀಡಾಗಿದ್ದರು. ಸಮ್ಮಿಶ್ರ ಸರ್ಕಾರ ಉರುಳಿಸಲು ಜೆಡಿಎಸ್ ಮತ್ತು ಕಾಂಗ್ರೆಸ್ ಪಕ್ಷದ ಶಾಸಕರು ಬಿಜೆಪಿ ಸೇರಿದ ಬಳಿಕ ಪಕ್ಷದಲ್ಲಿ ಶಿಸ್ತು ಎಕ್ಕುಟ್ಟಿ ಹೋಗಿದೆ ಅಂತ ಅವರು ಹೇಳಿದ್ದರು. ವಲಸಿಗರು ರೊಚ್ಚಿಗೆದ್ದ ಬಳಿಕ, ನಾನು ಹಾಗೆ ಹೇಳೇ ಇಲ್ಲ ಅಂದಿದ್ದರು. ನಾವು ಅವರು ಹಾಗೆ ಹೇಳಿದ್ದ ವಿಡಿಯೋ ಮತ್ತು ಹೇಳಿದ್ದನ್ನು ನಿರಾಕರಿಸಿದ ವಿಡಿಯೋ ಎರಡನ್ನೂ ಕ್ಲಬ್ ಮಾಡಿ ಕನ್ನಡಿಗರಿಗೆ ತೋರಿಸಿದ್ದೆವು!

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ