ನಕಲಿ ಔಷಧಿ ಜಾಲ ಪತ್ತೆ ಪ್ರಕರಣ: ಅಜರ್ ಬೈಜಾನ್​ನಿಂದ ಕಿಂಗ್ ಪಿನ್ ಪ್ರಶಾಂತ್ ಕರೆತರಲು ಎಸ್​ಐಟಿ ತಯಾರಿ

Updated on: Aug 28, 2026 | 1:47 PM

ರಾಮನಗರದ ಬಿಡದಿಯಲ್ಲಿ ಬೆಳಕಿಗೆ ಬಂದ ನಕಲಿ ಔಷಧಿ ಜಾಲ ಪ್ರಕರಣದ ಕಿಂಗ್‌ಪಿನ್ ಪ್ರಶಾಂತ್‌ನನ್ನು ಅಜರ್ ಬೈಜಾನ್​ನಿಂದ ಕರೆತರಲು ಎಸ್‌ಐಟಿ ಸಿದ್ಧತೆ ನಡೆಸಿದೆ. ಅಜರ್ ಬೈಜಾನ್​ನ ಕಸ್ಟಮ್ಸ್ ಅಧಿಕಾರಿಗಳು ಪ್ರಶಾಂತ್‌ನನ್ನು ವಶಕ್ಕೆ ಪಡೆದಿದ್ದು, ಇಂಟರ್‌ಪೋಲ್ ಮೂಲಕ ರೆಡ್ ಕಾರ್ನರ್ ನೋಟಿಸ್ ನೀಡಲು ಕ್ರಮ ಕೈಗೊಳ್ಳಲಾಗಿದೆ. ಈ ಪ್ರಕರಣದಲ್ಲಿ ಈಗಾಗಲೇ ಹಲವರನ್ನು ಬಂಧಿಸಿ ತನಿಖೆ ನಡೆಸಲಾಗುತ್ತಿದೆ.

ಬೆಂಗಳೂರು, ಆಗಸ್ಟ್ 28: ರಾಮನಗರದ ಬಿಡದಿಯ ಫಾರ್ಮ್‌ ಹೌಸ್‌ನಲ್ಲಿ ಪತ್ತೆಯಾದ ಬೃಹತ್ ನಕಲಿ ಔಷಧಿ ಜಾಲದ ಪ್ರಕರಣವು ರಾಜ್ಯದಲ್ಲಿ ತೀವ್ರ ಸಂಚಲನ ಮೂಡಿಸಿದೆ. ಈ ಜಾಲದ ಕಿಂಗ್‌ಪಿನ್ ಪ್ರಶಾಂತ್‌ನನ್ನು ಅಜರ್ ಬೈಜಾನ್​ನಿಂದ ಕರೆತರಲು ವಿಶೇಷ ತನಿಖಾ ದಳ (ಎಸ್‌ಐಟಿ) ಅಧಿಕಾರಿಗಳು ಸಕಲ ಸಿದ್ಧತೆಗಳನ್ನು ನಡೆಸುತ್ತಿದ್ದಾರೆ. ಎಸ್‌ಐಟಿ ನಡೆಸಿದ ತೀವ್ರ ತನಿಖೆಯ ಪರಿಣಾಮವಾಗಿ ಪ್ರಶಾಂತ್ ಅಜರ್ ಬೈಜಾನ್​ನಲ್ಲಿ ಇರುವುದು ಖಚಿತವಾಗಿದೆ. ಅಲ್ಲಿನ ಕಸ್ಟಮ್ಸ್ ಅಧಿಕಾರಿಗಳು ಪ್ರಶಾಂತ್‌ನನ್ನು ವಶಕ್ಕೆ ಪಡೆದುಕೊಂಡಿದ್ದು, ಆತನ ಪಾಸ್‌ಪೋರ್ಟ್ ಅನ್ನು ಸಹ ಜಪ್ತಿ ಮಾಡಿದ್ದಾರೆ. ಈ ಕುರಿತು ಎಸ್‌ಐಟಿ, ಇಂಟರ್‌ಪೋಲ್ ಮೂಲಕ ಮಾಹಿತಿ ಪಡೆದಿದೆ.

ಆರೋಪಿ ಪ್ರಶಾಂತ್ ವಿರುದ್ಧ ರೆಡ್ ಕಾರ್ನರ್ ನೋಟಿಸ್ ಹೊರಡಿಸುವ ಮೂಲಕ ಬಂಧನ ವಾರಂಟ್‌ಗೆ ಸಿದ್ಧತೆಗಳು ನಡೆಯುತ್ತಿವೆ. ಪ್ರಶಾಂತ್ ತನ್ನ ಕುಟುಂಬಸ್ಥರು ಮತ್ತು ಪತ್ನಿಯೊಂದಿಗೆ ಸಂಪರ್ಕದಲ್ಲಿದ್ದಾನೆ ಎಂಬ ಮಾಹಿತಿ ಲಭ್ಯವಾಗಿದೆ. ಈ ಪ್ರಕರಣದಲ್ಲಿ ಈಗಾಗಲೇ ಹಲವು ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದ್ದು, ಇಡೀ ಜಾಲದ ಮೂಲವನ್ನು ಪತ್ತೆಹಚ್ಚಲು ಎಸ್‌ಐಟಿ ಶ್ರಮಿಸುತ್ತಿದೆ. ಪ್ರಶಾಂತ್‌ನನ್ನು ಭಾರತಕ್ಕೆ ಹಸ್ತಾಂತರಿಸುವ ಪ್ರಕ್ರಿಯೆ ಚುರುಕುಗೊಂಡಿದ್ದು, ಈ ಪ್ರಕರಣದ ತನಿಖೆಯಲ್ಲಿ ಇದೊಂದು ಮಹತ್ವದ ಬೆಳವಣಿಗೆಯಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us
ಗಣಪತಿ ಶರ್ಮಾ

ಕೇರಳದ ಕಾಸರಗೋಡು ಮೂಲದ ಕನ್ನಡಿಗ, ಪ್ರಸ್ತುತ ಬೆಂಗಳೂರಿನಲ್ಲಿ ವಾಸ. 14 ವರ್ಷಗಳಿಂದ ಪತ್ರಕರ್ತನಾಗಿ ಕಾರ್ಯನಿರ್ವಹಿಸುತ್ತಿದ್ದು, ವರದಿಗಾರಿಕೆ ಅನುಭವದ ಜತೆಗೆ ಬರವಣಿಗೆ, ಅನುವಾದದಲ್ಲಿ ಆಸಕ್ತಿ ಮತ್ತು ಪರಿಣತಿ. ಪ್ರಚಲಿತ ವಿದ್ಯಮಾನಗಳು, ರಾಜ್ಯ-ರಾಷ್ಟ್ರ ರಾಜಕೀಯ, ಉದ್ಯಮ, ವೈಯಕ್ತಿಕ ಹಣಕಾಸು ವಿಚಾರಗಳ ಬರವಣಿಗೆಯ ಬಗ್ಗೆ ಹೆಚ್ಚಿನ ಆಸಕ್ತಿ, ಒಲವು. ವಿಜಯ ಕರ್ನಾಟಕ, ಸಮಯ ನ್ಯೂಸ್ ಟಿವಿ, ವಿಜಯವಾಣಿ, ಪ್ರಜಾವಾಣಿ ಪತ್ರಿಕೆಗಳು ಹಾಗೂ ಡಿಜಿಟಲ್ ಮೀಡಿಯಾದಲ್ಲಿ ಕೆಲಸ ಮಾಡಿದ ಅನುಭವ. 2022 ರಿಂದ ಟಿವಿ9 ಕನ್ನಡ ಡಿಜಿಟಲ್​ನಲ್ಲಿ ಕಾರ್ಯನಿರ್ವಹಣೆ.

Read More