ಸಿದ್ದರಾಮಯ್ಯ ನಡೆಸಿದ ಜನಸ್ಪಂದನೆ ಕಾರ್ಯಕ್ರಮವನ್ನು ಮೆಚ್ಚಿ ಹೊಗಳಿದ ಹೆಚ್ ಡಿ ಕುಮಾರಸ್ವಾಮಿ
ಮೊದಲ ಬಾರಿ ಮುಖ್ಯಮಂತ್ರಿಯಾಗಿದ್ದಾಗ ನಡೆಸುತ್ತಿದ್ದ ಜನತಾ ದರ್ಶನ ನಡೆಸುತ್ತಿದ್ದಾಗ ಜನ ಹೇಳಿಕೊಳ್ಳುತ್ತಿದ್ದ ಸಮಸ್ಯೆಗಳು ಈಗಲೂ ಹಾಗೆಯೇ ಇವೆ ಎಂದು ಕುಮಾರಸ್ವಾಮಿ ಹೇಳಿದರು. ಹಿಂದಿನ ಬಿಜೆಪಿ ಸರ್ಕಾರದಲ್ಲಿ ಕಂದಾಯ ಸಚಿವರಾಗಿದ್ದ ಈಗಿನ ವಿರೋಧ ಪಕ್ಷದ ನಾಯಕ ಆರ್ ಅಶೋಕ ಆರಂಭಿಸಿದ್ದ ಜಿಲ್ಲಾಧಿಕಾರಿಯ ನಡಿಗೆ ಹಳ್ಳಿಯ ಕಡೆಗೆ ಕಾರ್ಯಕ್ರಮವನ್ನು ಕುಮಾರಸ್ವಾಮಿ ಶ್ಲಾಘಿಸಿದರು.
ಮಡಿಕೇರಿ: ಕೊಡಗು ಜಿಲ್ಲೆ ಜೆಡಿಎಸ್ ಪಕ್ಷದ ಕಾರ್ಯಕರ್ತರ ಸಭೆ ನಡೆಸಲು ಮಡಿಕೇರಿಗೆ ಆಗಮಿಸಿದ್ದ ಹೆಚ್ ಡಿ ಕುಮಾರಸ್ವಾಮಿ (HD Kumaraswamy), ಫಾರ್ ಎ ಚೇಂಜ್ ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಕುರಿತು ಸಕಾರಾತ್ಮಕ ಪ್ರತಿಕ್ರಿಯೆ ನೀಡಿದರು. ಎಲ್ಲ ಇಲಾಖೆಯ ಅಧಿಕಾರಿಗಳನ್ನು ಕರೆಸಿ ಮುಖ್ಯಮಂತ್ರಿಯವರು ಜನತಾ ದರ್ಶನ ಅಥವಾ ಜನಸ್ಪಂದನೆ ಕಾರ್ಯಕ್ರಮ (Janaspandana programme) ನಡೆಸಿದ್ದು ನಿಜಕ್ಕೂ ಅಭಿನಂದನೀಯ, ಕನಿಷ್ಟ ಈಗಲಾದರೂ ಅವರಿಗೆ ಜನರ ಸಮಸ್ಯೆಗಳು ಮತ್ತು ಆಡಳಿತ ಯಂತ್ರ ಹೇಗೆ ಕೆಲಸ ಮಾಡುತ್ತಿದೆ ಅನ್ನೋದು ಅರ್ಥವಾಗಿರುತ್ತದೆ. ತಾವು ಎಲ್ಲವನ್ನೂ ಟೀಕಿಸುವುದಿಲ್ಲ, ಸರಿಯಾದ ಕ್ರಮವನ್ನು ಅಭಿನಂದಿಸಬೇಕಾಗುತ್ತದೆ ಎಂದು ಕುಮಾರಸ್ವಾಮಿ ಹೇಳಿದರು. ಹಿಂದೆ, 2006 ರಲ್ಲಿ ತಾನು ಮುಖ್ಯಮಂತ್ರಿಯಾಗಿದ್ದಾಗ ಜನತಾ ದರ್ಶನ ಕಾರ್ಯಕ್ರಮ ಮಾಡುತ್ತಿದ್ದೆ ಮತ್ತು 2018 ರಲ್ಲೂ ಅದನ್ನು ಪ್ರಾರಂಭಿಸಿದ್ದೆ ಎಂದು ಹೇಳಿದ ಕುಮಾರಸ್ವಾಮಿ, ಜನರು ಹೇಳಿಕೊಂಡ ಕಷ್ಟಗಳನ್ನು ಬಗೆಹರಿಸಲು ಅಧಿಕಾರಿಗಳಿಗೆ ಸಿದ್ದರಾಮಯ್ಯ ಒಂದು ತಿಂಗಳು ಗಡುವು ನೀಡಿದ್ದಾರೆ. ಆ ಅವಧಿ ಮುಗಿದ ನಂತರ ಪ್ರಗತಿ ಎಲ್ಲಿಯವರೆಗೆ ಆಗಿದೆ ಅನ್ನೋದು ಗೊತ್ತಾಗಲಿದೆ ಅಂತ ಕುಮಾರಸ್ವಾಮಿ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ