ಅರಣ್ಯ ಇಲಾಖೆಗೆ ಸವಾಲಾದ ಕಾಡೆಮ್ಮೆ: ಅರವಳಿಕೆ ಇದ್ರೆ ಕಾಡೆಮ್ಮೆ ಇಲ್ಲ, ಕಾಡೆಮ್ಮೆ ಪತ್ತೆಯಾದಾಗ ಅರವಳಿಕೆ ಇಲ್ಲ

Updated on: Nov 28, 2025 | 7:43 PM

ಆನೇಕಲ್ ಬಳಿ ಕಾಣಿಸಿಕೊಂಡ ಕಾಡೆಮ್ಮೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ. ಹೌದು...ಸ್ಥಳೀಯರ ಆತಂಕಕ್ಕೆ ಕಾರಣವಾಗಿರುವ ಕಾಡೆಮ್ಮೆ ಸೆರೆಹಿಡಿಯುವ ಅರಣ್ಯ ಇಲಾಖೆಯ ಎರಡು ದಿನಗಳ ಕಾರ್ಯಾಚರಣೆ ವಿಫಲವಾಗಿದೆ. ಮೊದಲ ದಿನ ಅರವಳಿಕೆ ಇಲ್ಲದ ಕಾರಣ ಮತ್ತು ಎರಡನೇ ದಿನ ಕಾಡೆಮ್ಮೆಯೇ ಪತ್ತೆಯಾಗದ ಕಾರಣ ಸಿಬ್ಬಂದಿ ವಿಫಲರಾಗಿದ್ದು, ಸ್ಥಳೀಯರಲ್ಲಿ ಆತಂಕ ಮುಂದುವರೆದಿದೆ.

ಬೆಂಗಳೂರು, (ನವೆಂಬರ್ 28): ಆನೇಕಲ್ ತಾಲ್ಲೂಕಿನ ಕಮ್ಮಸಂದ್ರ ಅಗ್ರಹಾರದ ಬಳಿ ಕಾಣಿಸಿಕೊಂಡಿದ್ದ ಕಾಡೆಮ್ಮೆಯನ್ನು ಸೆರೆ ಹಿಡಿಯಲು ಅರಣ್ಯ ಇಲಾಖೆ ಕಳೆದ ಎರಡು ದಿನಗಳಿಂದ ನಡೆಸುತ್ತಿರುವ ಕಸರತ್ತು ವಿಫಲವಾಗಿದ್ದು, ಇಲಾಖೆಯ ಕಾರ್ಯಾಚರಣೆ ಸ್ಥಳೀಯರಲ್ಲಿ ಕುತೂಹಲ ಮತ್ತು ಆತಂಕವನ್ನು ಸೃಷ್ಟಿಸಿದೆ. ಈ ಕಾಡೆಮ್ಮೆ ಅರಣ್ಯ ಇಲಾಖೆಗೆ ದೊಡ್ಡ ಸವಾಲಾಗಿ ಪರಿಣಮಿಸಿದ್ದು, ಸಿಬ್ಬಂದಿಗೆ ‘ಕಾಡೆಮ್ಮೆ ಸಿಕ್ಕಾಗ ಅರವಳಿಕೆ ಇರಲಿಲ್ಲ, ಈಗ ಅರವಳಿಕೆ ತಂದಾಗ ಕಾಡೆಮ್ಮೆ ಸಿಗುತ್ತಿಲ್ಲ’. ಆದ್ದರಿಂದ ಅರಣ್ಯ ಇಲಾಖೆ ಸಿಬ್ಬಂದಿಗೆ ಕಾಡೆಮ್ಮೆ ಸೆರೆ ಹಿಡಿಯೋದು ತಲೆನೋವಾಗಿದೆ.

ಕಳೆದ ದಿನ ಕಮ್ಮಸಂದ್ರ ಅಗ್ರಹಾರದ ಬಳಿ ಕಾಡೆಮ್ಮೆ ಕಾಣಿಸಿಕೊಂಡಾಗ, ಅರಣ್ಯ ಇಲಾಖೆಯ ಸಿಬ್ಬಂದಿ, ತಜ್ಞ ವೈದ್ಯರ ತಂಡ ಸೇರಿದಂತೆ ದೊಡ್ಡ ಪಡೆಯೇ ಸ್ಥಳದಲ್ಲಿ ಜಮಾವಣೆಗೊಂಡಿತ್ತು. ಕಾಡೆಮ್ಮೆ ಜನರ ಕಣ್ಣ ಮುಂದೆಯೇ ಇಡೀ ದಿನ ಸಂಚರಿಸುತ್ತಿತ್ತು. ಆದರೆ, ಪ್ರಾಣಿಯನ್ನು ಸೆರೆ ಹಿಡಿಯಲು ಅತ್ಯಗತ್ಯವಾದ ಅರವಳಿಕೆ ಲಭ್ಯವಿರಲಿಲ್ಲ. ಇದರಿಂದಾಗಿ ಇಡೀ ದಿನ ಕಾಡೆಮ್ಮೆ ಇಲಾಖೆಯ ಕಣ್ಣ ಮುಂದೆಯೇ ಓಡಾಡಿದ್ದರೂ, ಅದನ್ನು ಹಿಡಿಯಲು ಸಾಧ್ಯವಾಗದೆ ಸಿಬ್ಬಂದಿ ವಿಫಲರಾಗಿದ್ದರು. ಇದೀಗ ಅರವಳಿಕೆ ಹಿಡಿದು ಓಡಾಡುತ್ತಿದ್ದರೂ ಸಹ ಕಾಡೆಮ್ಮೆ ಸಿಗುತ್ತಿಲ್ಲ. ಡ್ರೋಣ್ ಕ್ಯಾಮೆರಾದಿಂದ ಹುಡುಕಾಡಿದರೂ ಸಹ ಪತ್ತೆಯಾಗುತ್ತಿಲ್ಲ. ಇದರಿಂದ ಸ್ಥಳೀಯರಲ್ಲಿ ಆತಂಕ ಮುಂದುವರೆದಿದೆ.

Published on: Nov 28, 2025 07:43 PM