Monsoon 2023: ಆತಂಕ ದೂರವಾಗಿ ಖುಷಿಯ ವಿಚಾರ! ಒಂದು ವಾರ ಪರಿಸ್ಥಿತಿ ಹೀಗೆಯೇ ಮುಂದುವರೆದರೆ ಕೆಆರ್ಎಸ್ ಡ್ಯಾಂ ಭರ್ತಿಯಾಗಲಿದೆ! ಈಗ ಹೇಗಿದೆ?
ಮಂಡ್ಯ: ಒಂದು ತಿಂಗಳ ಹಿಂದೆಯಷ್ಟೇ ಖಾಲಿ ಖಾಲಿಯಾಗಿದ್ದ ಕೆಆರ್ಎಸ್ ಡ್ಯಾಂ ನಲ್ಲಿ ಈಗ ನೀರು ತುಂಬಲಾರಂಭಿಸಿರುವುದು ಡ್ಯಾಂ ತನ್ನ ಹಿಂದಿನ ವೈಭವವನ್ನ ಮರಳಿ ಪಡೆದುಕೊಳ್ಳಲಾರಂಭಿಸಿದೆ.
ಅದು ರಾಜಧಾನಿ ಬೆಂಗಳೂರು, ಸಾಂಸ್ಕೃತಿಕ ನಗರಿ ಮೈಸೂರು ಸೇರಿದಂತೆ ಹಲವು ಜಿಲ್ಲೆಗಳಿಗೆ ಕುಡಿಯುವ ನೀರನ್ನ ಪೂರೈಸುವ ಪ್ರಮುಖ ಜಲಾಶಯ. ಆದರೆ ಅದರಲ್ಲಿನ ನೀರಿನ ಮಟ್ಟ ದಿನೇ ದಿನೇ ಕಡಿಮೆಯಾಗುತ್ತಿತ್ತು. ಡ್ಯಾಂ ನಲ್ಲಿದ್ದ ನೀರು ಸಹಾ ಕುಡಿಯಲು ಸಾಕಾಗುತ್ತೊ ಇಲ್ಲವೋ ಎಂಬ ಭಯವೂ ಇತ್ತು. ಆ ಸಂದರ್ಭದಲ್ಲಿ ಮಳೆಯಾಗದಿದ್ದರೆ ಮುಂದೆ ಏನು ಅನ್ನೋ ಆತಂಕದಲ್ಲಿರುವಾಗಲೇ, ವರುಣದೇವ ಕರುಣೆ ತೋರಿದ ಪರಿಣಾಮ ಜಲಾಶಯಕ್ಕೆ ಹೆಚ್ಚಿನ ಪ್ರಮಾಣದ ನೀರು ಹರಿದು ಬರುತ್ತಿದ್ದು, ಕೆಲವೇ ಕೆಲವು ದಿನಗಳ ಹಿಂದೆ ಖಾಲಿ ಖಾಲಿಯಾಗಿದ್ದ ಡ್ಯಾಂ ಈಗ ನಿಧಾನವಾಗಿ ಮೈದುಂಬಿಕೊಳ್ಳಲಾರಂಭಿಸಿದೆ.
ಕೆಆರ್ ಎಸ್ ಜಲಾಶಯದ ಜಲಾನಯನ ಪ್ರದೇಶದಲ್ಲಿ ಧಾರಕಾರ ಮಳೆ ಹಿನ್ನೆಲೆಯಲ್ಲಿ ನೂರು ಅಡಿಗೆ ತಲುಪಿದ ಕೆಆರ್ ಎಸ್ ನೀರಿನ ಮಟ್ಟ
ಹೌದು, ಕೆಆರ್ ಎಸ್ ಜಲಾಶಯದ ಜಲಾನಯನ ಪ್ರದೇಶದಲ್ಲಿ ಧಾರಕಾರ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಕೆಆರ್ ಎಸ್ ಜಲಾಶಯದ ನೀರಿನ ಮಟ್ಟ ನೂರು ಅಡಿಗೆ ತಲುಪಿದೆ. ಅಂದಹಾಗೆ ಮಂಡ್ಯ ಜಿಲ್ಲೆಯ ರೈತರ ಜೀವನಾಡಿ, ರಾಜಧಾನಿ ಬೆಂಗಳೂರು ಸೇರಿದಂತೆ ಮೈಸೂರು, ಮಂಡ್ಯ ಹಾಗೂ ರಾಮನಗರ ಸೇರಿದಂತೆ ಹಲವು ಜಿಲ್ಲೆಗಳಿಗೆ ಕುಡಿಯುವ ನೀರು ಪೂರೈಸಬೇಕಾದ ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನ ಕೆ ಆರ್ ಎಸ್ ಡ್ಯಾಂ ನಲ್ಲಿನ ನೀರಿನ ಪ್ರಮಾಣ ದಿನೇ ದಿನೇ ಕಡಿಮೆಯಾಗಲಾರಂಭಿಸಿತ್ತು. 124.80 ಅಡಿ ಗರಿಷ್ಠ ಮಟ್ಟದ ಸಾಮಾರ್ಥ್ಯ ಹೊಂದಿರುವ ಡ್ಯಾಂ ನಲ್ಲಿ ಕೆಲವು ದಿನಗಳ ಹಿಂದೆ 75 ಅಡಿಗೆ ನೀರಿನ ಮಟ್ಟ ಕುಸಿದಿತ್ತು.
ಅಂತಹ ಸಂದರ್ಭದಲ್ಲಿ ಮುಂಗಾರು ಮಳೆ ಕೈ ಕೊಟ್ಟೇ ಬಿಡ್ತು, ಮುಂದಿನ ದಿನಗಳಲ್ಲಿ ಕುಡಿಯುವ ನೀರಿಗೂ ಹಾಹಾಕಾರವಾಗಲಿದೆ ಎಂಬಂತಹ ಸ್ಥಿತಿ ನಿರ್ಮಾಣವಾಗಿತ್ತು. ಆದರೆ ಇದೀಗ ವರುಣದೇವ ನಿಧಾನವಾಗಿಯಾದರೂ ಕೃಪೆ ತೋರಿದ್ದು, ಕಾವೇರಿ ಜಲಾನಯನ ಪ್ರದೇಶದಲ್ಲಿ ಹೆಚ್ಚು ಮಳೆ ಸುರಿಯುತ್ತಿರುವುದರಿಂದ ಕೆ ಆರ್ ಎಸ್ ಡ್ಯಾಂ ಗೆ ಅಪಾರ ಪ್ರಮಾಣದ ನೀರು ಹರಿದು ಬರುತ್ತಿದೆ. ಇದರಿಂದಾಗಿ ಡ್ಯಾಂ ನ ನೀರಿನಮಟ್ಟ 100 ಅಡಿಗೆ ಮುಟ್ಟಿದ್ದು, ಡ್ಯಾಂ ಗೆ 50 ಸಾವಿರ ಕ್ಯೂಸೆಕ್ ನಷ್ಟು ನೀರು ಪ್ರತಿನಿತ್ಯ ಹರಿದು ಬರ್ತಿದೆ. ಇಷ್ಟೇ ಪ್ರಮಾಣದಲ್ಲಿ ನೀರು ಹರಿದು ಬಂದಿದ್ದೇ ಆದರೆ ಮುಂದಿನ ಕೆಲವೇ ದಿನಗಳಲ್ಲಿ ಡ್ಯಾಂ ಭರ್ತಿಯಾಗಲಿದೆ.ಇದು ಸ್ಥಳೀಯರ ಸಂತಸಕ್ಕೂ ಕೂಡ ಕಾರಣಣವಾಗಿದೆ.
ಅಂದಹಾಗೆ 124.80 ಅಡಿ ಗರಿಷ್ಠ ನೀರಿನ ಮಟ್ಟವನ್ನ ಹೊಂದಿರೊ ಕೆಆರ್ ಎಸ್ ಡ್ಯಾಂ ನಲ್ಲಿ ಇಂದು 100 ಅಡಿ ನೀರು ಸಂಗ್ರಹ ಇದೆ. ನೆನ್ನೆ ಒಂದೇ ದಿನ 50 ಸಾವಿರ ಕ್ಯೂಸೆಕ್ ನಷ್ಟು ನೀರು ಹರಿದು ಬಂದಿದ್ದು, 5 ಸಾವಿರ ಕ್ಯೂಸೆಕ್ ನಷ್ಟು ಹೊರ ಹರಿವಿದೆ. ಇನ್ನ ಟಿಎಂ ಸಿಯಲ್ಲಿ ಹೇಳುವುದಾದ್ರೆ 49 ಟಿಎಂಸಿ ಅಡಿ ನೀರನ್ನ ಹೊಂದಿರೊ ಡ್ಯಾಂ ನಲ್ಲಿ ಇಂದು 22 ಟಿಎಂಸಿ ಸಾಮಾರ್ಥ್ಯವನ್ನ ಹೊಂದಿದ್ದು, ಡ್ಯಾಂ ಭರ್ತಿಗೆ ಇನ್ನೂ 27 ಟಿಎಂಸಿಯಷ್ಟು ನೀರು ಬೇಕಿದೆ. ಸದ್ಯ ಡ್ಯಾಂ ಗೆ 50 ಸಾವಿರ ಕ್ಯೂಸೆಕ್ ನೀರು ಒಳಹರಿವು ಇರುವುರಿಂದ ಜಲಾಶಯ ಕೆಲವೇ ದಿನಗಳಲ್ಲಿ ಭರ್ತಿಯಾಗೊ ಸಾಧ್ಯತೆ ಇದ್ದು, ಅಧಿಕಾರಿಗಳು ಡ್ಯಾಂ ನ ಗೇಟ್ ಗಳನ್ನ ಭದ್ರಪಡಿಸುವಂತಹ ಕೆಲಸದಲ್ಲಿ ನಿರತರಾಗಿದ್ದಾರೆ. 100 ಅಡಿ ನೀರು ಈಗ ಡ್ಯಾಂ ಸಮೀಪ ಬರ್ತಿದ್ದು ಕೆ ಆರ್ ಎಸ್ ನಿಧಾನವಾಗಿ ಮೈದುಂಬಿಕೊಳ್ತಿದೆ.
ಒಟ್ಟಾರೆ ಒಂದು ತಿಂಗಳ ಹಿಂದೆಯಷ್ಟೇ ಖಾಲಿ ಖಾಲಿಯಾಗಿದ್ದ ಡ್ಯಾಂ ನಲ್ಲಿ ಈಗ ನೀರು ತುಂಬಲಾರಂಭಿಸಿರುವುದು ಡ್ಯಾಂ ತನ್ನ ಹಿಂದಿನ ವೈಭವವನ್ನ ಮರಳಿ ಪಡೆದುಕೊಳ್ಳಲಾರಂಭಿಸಿದೆ. ಮುಂದಿನ ಒಂದು ವಾರ ಇದೇ ಪರಿಸ್ಥಿತಿ ಮುಂದುವರೆದರೆ ಡ್ಯಾಂ ಸಂಪೂರ್ಣ ಭರ್ತಿಯಾಗಲಿದೆ ಅನ್ನೋದೇ ಖುಷಿಯ ವಿಚಾರ.
ವರದಿ: ಪ್ರಶಾಂತ್ ಹುಲಿಕೆರೆ, ಟಿವಿ9, ಮಂಡ್ಯ