ಸನ್ನಡತೆ ಆಧಾರದಲ್ಲಿ ಜೈಲಿಂದ ಬಿಡುಗಡೆ ಹೊಂದಿರುವ ಆನಂದ್ ಕಾಂಬ್ಳೆಯಿಂದ ಅಪರಾಧ ಕೃತ್ಯಗಳಲ್ಲಿ ತೊಡಗದಿರಲು ಸಲಹೆ

|

Updated on: Jul 10, 2024 | 12:43 PM

ಹದಿನಾರು ವರ್ಷಗಳ ಸೆರೆವಾಸ ಬದುಕಿನ ಅನುಭವ ಕಲಿಸಿದೆ ಎಂದು ಹೇಳುವ ಆನಂದ್ ಯಾರೊಬ್ಬರು ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಬಾರದೆಂದು ಹೇಳುತ್ತಾರೆ. ನಿಮ್ಮ ಮೇಲೆ ಹಲ್ಲೆ ನಡೆದರೂ ಸುಮ್ಮನಿದ್ದು ಕಾನೂನಿನ ನೆರವು ತೆಗೆದುಕೊಂಡು ಹೋರಾಟ ನಡೆಸಬೇಕೇ ಹೊರತು ವಾಪಸ್ಸು ಹಲ್ಲೆ ನಡೆಸಿ ಜೈಲು ಸೇರಬಾರದು, ಜೈಲು ಸಹವಾಸ ಬಹಳ ಕೆಟ್ಟದು ಎಂದು ಅವರು ಹೇಳುತ್ತಾರೆ

ಬೆಂಗಳೂರು: ಸನ್ನಡತೆಯ ಆಧಾರದಲ್ಲಿ ರಾಜ್ಯದ ನಾನಾ ಜೈಲುಗಳಿಂದ ಬಿಡುಗಡೆ ಹೊಂದುತ್ತಿರುವ 77 ಕೈದಿಗಳಲ್ಲಿ ಇಲ್ಲಿ ಕಾಣುತ್ತಿರುವ ವಿಜಯಪುರ ಜಿಲ್ಲೆ ಇಂಡಿ ತಾಲ್ಲೂಕಿನ ಹೊಂಚಟಗಿ ಗ್ರಾಮದ ಆನಂದ್ ಅಮೋಘಿ ಕಾಂಬ್ಳೆ ಸಹ ಒಬ್ಬರು. ಸೂಟುಧಾರಿಯಾಗಿರುವ ಆನಂದ್ ಅವರನ್ನು ನೋಡಿ ಇವರು ಜೈಲಲ್ಲಿದ್ದರೇ ಅಂತ ಸಂಶಯಪಡಬೇಡಿ. ನನ್ನಣ್ಣ 16 ವರ್ಷಗಳ ನಂತರ ಜೈಲಿಂದ ಹೊರಬರುತ್ತಿದ್ದಾನೆ ಅವರ ತಮ್ಮ ಸೂಟು ಹೊಲಿಸಿ ತಂದಿದ್ದಾರೆ. ಆನಂದ್ ಜೈಲಲ್ಲಿದ್ದುಕೊಂಡು ತನ್ನ ತಮ್ಮನಿಗೆ ಎಂಜಿನೀಯರಿಂಗ್ ಓದಿಸಿದ್ದಾರೆ! 1991 ರಲ್ಲಿ ಗ್ರಾಮ ಪಂಚಾಯಿತಿ ಚೇರ್ಮನ್ ಆಗಿದ್ದ ತಂದೆಯನ್ನು ಕೊಲೆ ಮಾಡಿದ ಹತ್ತು ಜನರನ್ನು ಅನಂದ್ ಮತ್ತು ಅವರ ಸಂಗಡಿಗರು ಒಂದೇ ಕೋಣೆಯಲ್ಲಿ ಕೂಡಿಹಾಕಿ ಬೆಂಕಿಹಚ್ಚಿ ಸಜೀವ ದಹನ ಮಾಡಿದ್ದರಂತೆ. ಆ ಪ್ರಕರಣದ ವಿಚಾರಣೆ ಕೆಳಹಂತದ ನ್ಯಾಯಾಲಯಗಳಲ್ಲಿ ನಡೆದು ಆನಂದ್ ಅವರ ಖುಲಾಸೆಯೂ ಅಗಿತ್ತಂತೆ. ಆದರೆ 2008ರಲ್ಲಿ ರಾಜ್ಯದ ಉಚ್ಛ ನ್ಯಾಯಾಲಯ ಇವರನ್ನು ದೋಷಿ ಎಂದು ತೀರ್ಪು ನೀಡಿ ಜೀವಾವಧಿ ಶಿಕ್ಷೆ ವಿಧಿಸಿತ್ತು. 16 ವರ್ಷಗಳ ಸೆರೆವಾಸ ಅನುಭವಿಸಿದ ಆನಂದ್ ಸನ್ನತೆಯ ಆಧಾರದಲ್ಲಿ ಈಗ ಬಿಡುಗಡೆ ಹೊಂದಿದ್ದಾರೆ. ಅವಿವಾಹಿತರಾಗಿರುವ 52-ವರ್ಷ ವಯಸ್ಸಿನ ಆನಂದ್ ಊರಿಗೆ ಹೋಗಿ ವೈವಾಹಿಕ ಬದುಕು ನಡೆಸುವ ಬಯಕೆ ಹೊಂದಿದ್ದಾರೆ. ಅವರಿಗೆ ಯೋಗ್ಯ ಸಂಗಾತಿ ಸಿಗಲಿ ಮತ್ತು ಬದುಕು ಹಸನಾಗಲಿ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಸನ್ನಡತೆ ಅಧಾರದ ಮೇಲೆ ಜೈಲಿನಿಂದ ಬಿಡುಗಡೆಯಾದ ಒಬ್ಬೊಬ್ಬ ಕೈದಿಯ ಒಂದೊಂದು ಕಣ್ಣೀರಿನ ಕಥೆ

Follow us on