ಸರ್ಕಾರದ ಡೇಂಜರಸ್ ನಿರ್ಲಕ್ಷ್ಯ: 1935ರ ಶಾಲೆಗೆ ಬೇಕಾಗಿದೆ ಮರುಜೀವ, ಕುಸಿದ ಶಾಲಾ ಕೊಠಡಿ ಪಕ್ಕದ ರೂಮಿನಲ್ಲಿ ವಿದ್ಯಾರ್ಥಿಗಳಿಗೆ ನಿತ್ಯ ಪಾಠ
Sangameshwarpet Government school: ಊರಲ್ಲಿ ದೇವಾಲಯಕ್ಕಿಂತ ಶಾಲೆ ಇರಬೇಕು ಎಂಬ ಮಾತಿದೆ. ಮಲೆನಾಡಿನ ಈ ಊರಲ್ಲಿ ವಿದ್ಯಾರ್ಥಿಗಳು ಇದ್ರೂ ಒಂದೊಳ್ಳೆ ಶಾಲೆಯ ಕಟ್ಟಡ ಕಟ್ಟಿಸದ ಸರ್ಕಾರ, ಜಿಲ್ಲಾಡಳಿತ ಮತ್ತು ಇಲ್ಲಿನ ಜನಪ್ರತಿನಿಧಿಗಳಿಗೆ ಅದೇನು ಹೇಳಬೇಕೊ ಗೊತ್ತಿಲ್ಲ.
ಮಲೆನಾಡು ಭಾಗದಲ್ಲಿ ವಿದ್ಯಾರ್ಥಿಗಳ ಕೊರತೆಯಿಂದ ಒಂದೊಂದಾಗಿ ಸರ್ಕಾರಿ ಶಾಲೆಗಳು ಬಾಗಿಲು ಮುಚ್ಚುತ್ತಿವೆ, ಕೆಲ ಶಾಲೆಗಳು ಬಾಗಿಲು ಹಾಕುವ ಸ್ಥಿತಿಯಲ್ಲಿವೆ. ಇಂತಹ ಸ್ಥಿತಿಯ ನಡುವೆ ಇಲ್ಲೊಂದು ಶಾಲೆಯಲ್ಲಿ 140 ವಿದ್ಯಾರ್ಥಿಗಳು ಕಲಿಯುತ್ತಿದ್ದು ಶಿಕ್ಷಕರ ಕೊರತೆಯೂ ಈ ಶಾಲೆಗಿಲ್ಲ, ಆದ್ರೆ ಶಿಕ್ಷಕರ ಜೊತೆ 140 ವಿದ್ಯಾರ್ಥಿಗಳು (Students) ಜೀವ ಭಯದಲ್ಲಿರುವ ಸ್ಥಿತಿ ಈ ಶಾಲೆಯದ್ದು. ಏನಾಗಿದೆ ಈ ಶಾಲೆಗೆ ಅಂತೀರಾ? ಈ ಸ್ಟೋರಿ ನೋಡಿ. ಈ ಶಾಲೆಯನ್ನ ಹೊರಗಿನಿಂದ ನೋಡಿದಾಗ ಅಂದವಾಗಿ ಸುಣ್ಣಬಣ್ಣ ಬಳೆದು ಚಂದವಾಗಿಯೇನೂ ಕಾಣುತ್ತದೆ. ಈ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ (Government school) ಇರೋದು ಚಿಕ್ಕಮಗಳೂರು ತಾಲೂಕಿನ ಶೃಂಗೇರಿ (Sringeri) ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿರುವ ಸಂಗಮೇಶ್ವರ ಪೇಟೆಯಲ್ಲಿ (Sangameshwarpet).
ಹೊರಗಿನಿಂದ ನೋಡಿದಾಗ ಆಹಾ ಎಷ್ಟೊಂದು ಸುಂದರವಾಗಿದೆ ಅನ್ನಿಸುತ್ತೆ. ಆದ್ರೆ ಒಳ ಹೋಗಿ ನೋಡಿದ್ರೆ ಗಾಬರಿ ಆಗೋದು ಖಂಡಿತ. ಹೌದು ಮೂರು ವರ್ಷ ಗಳಿಂದ ನಿರಂತರವಾಗಿ ಈ ಶಾಲೆ ಕುಸಿದು ಬಿಳುತ್ತಿದ್ದು, ಈ ಮಳೆಗಾಲದ ಮಳೆಗೆ ಸಂಪೂರ್ಣ ಶಾಲೆಯ ಮೂರು ರೂಮಿನ ಗೋಡೆ , ಮೇಲ್ಛಾವಣಿ ಬಿದ್ದು ಹೋಗಿದೆ. ಸತತವಾಗಿ ಮೂರು ವರ್ಷದಿಂದ ಶಾಲೆ ಶಿಥಿಲವಾಗುತ್ತಿದ್ದು, ಹೊಸ ಕಟ್ಟಡಕ್ಕಾಗಿ ಪೋಷಕರು ವಿದ್ಯಾರ್ಥಿಗಳು ಶಿಕ್ಷಕರು ಮನವಿ ಮಾಡಿದ್ರು ಪ್ರಯೋಜನ ಮಾತ್ರ ಆಗಿಲ್ಲ.
1935 ರಲ್ಲಿ ಪ್ರಾರಂಭವಾಗಿರುವ ಸಂಗಮೇಶ್ವರ ಪೇಟೆಯ ಕಿರಿಯ ಪ್ರಾಥಮಿಕ ಶಾಲೆಗೆ ಇಲ್ಲಿಯ ವರೆಗೂ ಹೊಸ ಕಟ್ಟಡ ಇರಲಿ ಶಿಥಿಲವಾದ ಶಾಲೆಯನ್ನ ಉಳಿಸುವ ಪ್ರಯತ್ನ ಕೂಡ ಆಗಿಲ್ಲ. ಸ್ವಾತಂತ್ರ ಪೂರ್ವದ ಇತಿಹಾಸ ಇರುವ ಶಾಲೆಯನ್ನ ಉಳಿಸುವ ಪ್ರಯತ್ನವು ನಡೆದಿಲ್ಲ. ಸತತವಾಗಿ ಮೂರು ವರ್ಷಗಳಿಂದ ಶಾಲೆಯ ಮೂರು ರೂಮುಗಳು ಸಂಪೂರ್ಣ ಕುಸಿದಿದ್ದು, ಕಳೆದ ನಾಲ್ಕು ದಿನದಿಂದ ಸುರಿದ ಮಳೆಗೆ ಶಾಲೆ ಸಂಪೂರ್ಣ ಕುಸಿಯುವ ಸ್ಥಿತಿ ತಲುಪಿದ್ದು. ಈ ಡೇಂಜರಸ್ ಶಾಲೆಯಲ್ಲೇ ಜೀವವನ್ನ ಕೈಯಲ್ಲಿ ಹಿಡಿದು ಮಲೆನಾಡು ಭಾಗದ 140 ಬಡ ಕೂಲಿ ಕಾರ್ಮಿಕರ ಮಕ್ಕಳು ಕಲಿಯುತ್ತಿದ್ದು ನಮ್ಮೂರಿನ ಶಾಲೆ ಉಳಿಸಿ ಅನ್ನುತ್ತಿದ್ದಾರೆ.
ಊರಲ್ಲಿ ದೇವಾಲಯಕ್ಕಿಂತ ಶಾಲೆ ಇರಬೇಕು ಎಂಬ ಮಾತಿದೆ. ಮಲೆನಾಡಲ್ಲಿ ವಿದ್ಯಾರ್ಥಿಗಳ ಕೊರತೆಯಿಂದ ಸರ್ಕಾರಿ ಶಾಲೆಗಳು ಬಾಗಿಲು ಹಾಕುತ್ತಿದ್ದು, ವಿದ್ಯಾರ್ಥಿಗಳು ಇದ್ರೂ ಒಂದೊಳ್ಳೆ ಶಾಲೆಯ ಕಟ್ಟಡ ಕಟ್ಟಿಸದ ಸರ್ಕಾರ, ಜಿಲ್ಲಾಡಳಿತ ಮತ್ತು ಇಲ್ಲಿನ ಜನಪ್ರತಿನಿಧಿಗಳಿಗೆ ಅದೇನು ಹೇಳಬೇಕು ಗೊತ್ತಿಲ್ಲ. ದಶಕಗಳ ಇತಿಹಾಸ ಇರುವ ಈ ಸರ್ಕಾರಿ ಶಾಲೆಯನ್ನ ಉಳಿಸುವ ಕೆಲಸ ಇನ್ನಾದ್ರೂ ಆಗುತ್ತಾ ಕಾದು ನೋಡಬೇಕಿದೆ.