WPL 2025: ಕೊನೆಯ ಓವರ್ನ 3 ಎಸೆತಗಳಲ್ಲಿ ಇತಿಹಾಸ ನಿರ್ಮಿಸಿದ ಗ್ರೇಸ್ ಹ್ಯಾರಿಸ್
WPL Hat-Trick Wickets: ವುಮೆನ್ಸ್ ಪ್ರೀಮಿಯರ್ ಲೀಗ್ನಲ್ಲಿ ಮೂವರು ಬೌಲರ್ಗಳು ಮಾತ್ರ ಹ್ಯಾಟ್ರಿಕ್ ವಿಕೆಟ್ ಕಬಳಿಸಿದ್ದಾರೆ. 2023 ರಲ್ಲಿ ಇಸ್ಸಿ ವಾಂಗ್ (ಮುಂಬೈ ಇಂಡಿಯನ್ಸ್), 2024 ರಲ್ಲಿ ದೀಪ್ತಿ ಶರ್ಮಾ (ಯುಪಿ ವಾರಿಯರ್ಸ್) ಈ ಸಾಧನೆ ಮಾಡಿದ್ದರು. ಇದೀಗ ಈ ಸಾಧಕರ ಪಟ್ಟಿಗೆ ಗ್ರೇಸ್ ಹ್ಯಾರಿಸ್ ಹೆಸರು ಕೂಡ ಸೇರ್ಪಡೆಯಾಗಿದೆ.
ವುಮೆನ್ಸ್ ಪ್ರೀಮಿಯರ್ ಲೀಗ್ ಇತಿಹಾಸದಲ್ಲಿ ಹ್ಯಾಟ್ರಿಕ್ ವಿಕೆಟ್ ಕಬಳಿಸಿರುವುದು ಕೇವಲ ಮೂವರು ಬೌಲರ್ಗಳು ಮಾತ್ರ. ಈ ಮೂವರಲ್ಲಿ ಕೊನೆಯವರು ಗ್ರೇಸ್ ಹ್ಯಾರಿಸ್. ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ ಗ್ರೇಸ್ ಹ್ಯಾರಿಸ್ ಹ್ಯಾಟ್ರಿಕ್ ವಿಕೆಟ್ ಕಬಳಿಸಿ ಮಿಂಚಿದ್ದಾರೆ.
ಈ ಪಂದ್ಯದಲ್ಲಿ ಟಾಸ್ ಗೆದ್ದ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಬೌಲಿಂಗ್ ಆಯ್ದುಕೊಂಡಿತು. ಅದರಂತೆ ಮೊದಲು ಬ್ಯಾಟ್ ಮಾಡಿದ ಯುಪಿ ವಾರಿಯರ್ಸ್ ಪರ ಶಿನೆಲ್ಲೆ ಹೆನ್ರಿ ಕೇವಲ 23 ಎಸೆತಗಳಲ್ಲಿ 8 ಸಿಕ್ಸ್ ಹಾಗೂ 2 ಫೋರ್ಗಳೊಂದಿಗೆ 62 ರನ್ ಚಚ್ಚಿದರು. ಈ ಅರ್ಧಶತಕದ ನೆರವಿನಿಂದ ಯುಪಿ ವಾರಿಯರ್ಸ್ ತಂಡ 20 ಓವರ್ಗಳಲ್ಲಿ 9 ವಿಕೆಟ್ ಕಳೆದುಕೊಂಡು 177 ರನ್ ಕಲೆಹಾಕಿತು.
178 ರನ್ಗಳ ಗುರಿ ಬೆನ್ನತ್ತಿದ ಡೆಲ್ಲಿ ಕ್ಯಾಪಿಟಲ್ಸ್ ತಂಡವು 19 ಓವರ್ಗಳ ಮುಕ್ತಾಯದ ವೇಳೆಗೆ 7 ವಿಕೆಟ್ ಕಳೆದುಕೊಂಡು 144 ರನ್ಗಳಿಸಲಷ್ಟೇ ಶಕ್ತರಾಗಿದ್ದರು. ಅದರಂತೆ ಕೊನೆಯ ಓವರ್ ಎಸೆಯಲು ಬಂದ ಗ್ರೇಸ್ ಹ್ಯಾರಿಸ್ 20ನೇ ಓವರ್ನ ಮೊದಲ ಎಸೆತದಲ್ಲೇ ನಿಕ್ಕಿ ಪ್ರಸಾದ್ (18) ವಿಕೆಟ್ ಪಡೆದರು. ಇನ್ನು 2ನೇ ಎಸೆತದಲ್ಲಿ ಆರುಂಧತಿ ರೆಡ್ಡಿ (0) ಔಟಾದರು. ಮೂರನೇ ಎಸೆತದಲ್ಲಿ ಮಿನ್ನು ಮಣಿ ನೀಡಿದ ನೇರ ಕ್ಯಾಚ್ ಹಿಡಿದ ಗ್ರೇಸ್ ಹ್ಯಾರಿಸ್ ಹ್ಯಾಟ್ರಿಕ್ ವಿಕೆಟ್ ಸಾಧನೆ ಮಾಡಿದರು.
ಈ ಮೂಲಕ ವುಮೆನ್ಸ್ ಪ್ರೀಮಿಯರ್ ಲೀಗ್ನಲ್ಲಿ ಹ್ಯಾಟ್ರಿಕ್ ವಿಕೆಟ್ ಕಬಳಿಸಿದ ಮೂರನೇ ಬೌಲರ್ ಎನಿಸಿಕೊಂಡರು. ಇದಕ್ಕೂ ಮುನ್ನ 2023 ರಲ್ಲಿ ಇಸ್ಸಿ ವಾಂಗ್ (ಮುಂಬೈ ಇಂಡಿಯನ್ಸ್), 2024 ರಲ್ಲಿ ದೀಪ್ತಿ ಶರ್ಮಾ (ಯುಪಿ ವಾರಿಯರ್ಸ್) ಈ ಸಾಧನೆ ಮಾಡಿದ್ದರು. ಇದೀಗ ಈ ಸಾಧಕರ ಪಟ್ಟಿಗೆ ಗ್ರೇಸ್ ಹ್ಯಾರಿಸ್ ಹೆಸರು ಕೂಡ ಸೇರ್ಪಡೆಯಾಗಿದೆ.