ಪತ್ನಿಗೆ ಗೃಹಲಕ್ಷ್ಮಿ ಹಣ ಬಂದಿಲ್ಲ: ಕೊಪ್ಪಳದಲ್ಲಿ ಸಿಎಂಗೆ ಪತ್ರ ಬರೆದು ಪತಿ ಏಕಾಂಗಿ ಧರಣಿ
ಕೊಪ್ಪಳದಲ್ಲಿ ಗೃಹಲಕ್ಷ್ಮಿ ಯೋಜನೆ ಹಣ ಸಿಗದ ಕಾರಣ ಪತಿಯೊಬ್ಬರು ಪ್ರತಿಭಟನೆ ನಡೆಸಿದ್ದಾರೆ. ಕುಷ್ಟಗಿಯ ಶರಣಪ್ಪ ಭೋವಿ ಅವರ ಪತ್ನಿ ಶಿಲ್ಪಾ ಅವರಿಗೆ ಮೂರು ವರ್ಷಗಳಿಂದ ತಾಂತ್ರಿಕ ಕಾರಣಗಳಿಂದ ಹಣ ತಲುಪಿಲ್ಲ. ಅರ್ಜಿ ಸಲ್ಲಿಸಲು ಮತ್ತು ದೋಷ ಸರಿಪಡಿಸಲು 25,000 ರೂ. ಖರ್ಚು ಮಾಡಿದ್ದರೂ, ಯೋಜನೆಯ ಲಾಭ ಸಿಗದೇ ಬೇಸತ್ತಿದ್ದಾರೆ. ಜಿಲ್ಲಾಡಳಿತ ಭವನದ ಮುಂದೆ ಏಕಾಂಗಿ ಧರಣಿ ನಡೆಸಿ ಗಮನ ಸೆಳೆದಿದ್ದಾರೆ.
ಕೊಪ್ಪಳ ಜು 22: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ‘ಗೃಹಲಕ್ಷ್ಮಿ’ ಯೋಜನೆಯ ಹಣ ಪತ್ನಿಗೆ ತಲುಪಿಲ್ಲ ಎಂದು ಆಕ್ರೋಶಗೊಂಡ ಪತಿಯೊಬ್ಬರು ಕೊಪ್ಪಳದ ಜಿಲ್ಲಾಡಳಿತ ಭವನದ ಮುಂಭಾಗದಲ್ಲಿ ಏಕಾಂಗಿಯಾಗಿ ಪ್ರತಿಭಟನೆಗೆ ಕುಳಿತ ಅಪರೂಪದ ಘಟನೆ ನಡೆದಿದೆ. ಕೊಪ್ಪಳ ಜಿಲ್ಲೆ ಕುಷ್ಟಗಿ ತಾಲೂಕಿನ ಹಾಬಲಕಟ್ಟಿ ಗ್ರಾಮದ ಶರಣಪ್ಪ ಭೋವಿ ಎಂಬುವರೇ ತಮ್ಮ ಪತ್ನಿ ಶಿಲ್ಪಾ ಭೋವಿ ಅವರಿಗೆ ಗೃಹಲಕ್ಷ್ಮಿ ಹಣ ಸಿಗದಿದ್ದಕ್ಕೆ ಧರಣಿ ಕುಳಿತಿರುವ ವ್ಯಕ್ತಿಯಾಗಿದ್ದಾರೆ. ಶರಣಪ್ಪ ಅವರ ಪತ್ನಿ ಶಿಲ್ಪಾ ಭೋವಿ ಅವರು ಸರ್ಕಾರಿ ಶಾಲೆಯಲ್ಲಿ ಅತಿಥಿ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕಳೆದ ಮೂರು ವರ್ಷಗಳಿಂದ ಗೃಹಲಕ್ಷ್ಮಿ ಯೋಜನೆಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಶರಣಪ್ಪ ಅವರು ಅಲೆದಾಡುತ್ತಿದ್ದಾರೆ. ಆದರೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿಗಳು ಪ್ರತಿ ಬಾರಿಯೂ ‘ತಾಂತ್ರಿಕ ಕಾರಣ’ ನೆಪವೊಡ್ಡಿ ಹಣ ತಡೆಹಿಡಿದಿದ್ದಾರೆ ಎಂದು ಆರೋಪಿಸಲಾಗಿದೆ. ಅರ್ಜಿ ಸಲ್ಲಿಸಲು, ಅಧಿಕಾರಿಗಳ ಕಚೇರಿಗೆ ಅಲೆಯಲು ಮತ್ತು ತಾಂತ್ರಿಕ ದೋಷ ಸರಿಪಡಿಸಲು ಶರಣಪ್ಪ ಭೋವಿ ಅವರು ಇದುವರೆಗೆ ಬರೋಬ್ಬರಿ 25,000 ರೂಪಾಯಿ ಖರ್ಚು ಮಾಡಿಕೊಂಡಿದ್ದಾರೆ.
ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ