ಗಣೇಶ ಚತುರ್ಥಿಯಂದೇ ಗಜರಾಜನ ಎಂಟ್ರಿ: ಬೊಬ್ಬೆ ಹೊಡೆದ್ರೂ ಜಗ್ಗದ ಆನೆ, ಕಣ್ಣೀರಿಟ್ಟ ಅನ್ನದಾತ

Edited By:

Updated on: Sep 14, 2026 | 12:26 PM

ಚಾಮರಾಜನಗರದ ಗುಂಡ್ಲುಪೇಟೆ ಬಳಿ ರೈತ ಮಂಜುನಾಥ್ ಅವರ ಬೆಳೆಗಳನ್ನು ಕಾಡಾನೆ ನಾಶಪಡಿಸಿದೆ. ಸೆ.14ರಂದು ಬೆಟ್ಟದ ಮದಹಳ್ಳಿ ಗ್ರಾಮದಲ್ಲಿ ಒಂಟಿ ಸಲಗ ದಾಳಿ ನಡೆಸಿ ಅಪಾರ ನಷ್ಟ ಉಂಟುಮಾಡಿದೆ. ಬರಗಾಲದ ನಡುವೆ ಬೆಳೆ ಕಳೆದುಕೊಂಡ ರೈತ ಕಂಗಾಲಾಗಿದ್ದಾನೆ. ಅರಣ್ಯ ಇಲಾಖೆ ತಡೆಗೋಡೆ ನಿರ್ಮಿಸದೆ ನಿರ್ಲಕ್ಷ್ಯ ವಹಿಸಿದೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದು, ಸೂಕ್ತ ಪರಿಹಾರಕ್ಕೆ ಒತ್ತಾಯಿಸಿದ್ದಾರೆ.

ಗುಂಡ್ಲುಪೇಟೆ, ಸೆ.14: ಒಂದೆಡೆ ನಾಡಿನಾದ್ಯಂತ ವಿಘ್ನನಿವಾರಕ ಗಣೇಶ ಚತುರ್ಥಿಯ ಸಂಭ್ರಮ ಮನೆಮಾಡಿದ್ದರೆ, ಇನ್ನೊಂದೆಡೆ ಗಡಿ ಜಿಲ್ಲೆ ಚಾಮರಾಜನಗರದ ರೈತರೊಬ್ಬರು ಆನೆ ದಾಳಿಗೆ ಬೆಳೆ ಕಳೆದುಕೊಂಡು ಕಣ್ಣೀರಿಡುವಂತಾಗಿದೆ. ಇಂದು (ಸೆಪ್ಟೆಂಬರ್ 14) ಮುಂಜಾನೆ ಬಂಡೀಪುರ ಅರಣ್ಯ ಅಂಚಿನ ಗ್ರಾಮಕ್ಕೆ ನುಗ್ಗಿದ ಒಂಟಿ ಸಲಗವೊಂದು ರೈತನ ಜಮೀನಿನಲ್ಲಿದ್ದ ಬೆಳೆಗಳನ್ನು ತಿಂದು ತುಳಿದು ಅಪಾರ ಪ್ರಮಾಣದ ಹಾನಿ ಉಂಟುಮಾಡಿದೆ. ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲೂಕಿನ ಬೆಟ್ಟದ ಮದಹಳ್ಳಿ ಗ್ರಾಮದಲ್ಲಿ ಈ ದುರ್ಘಟನೆ ಸಂಭವಿಸಿದೆ. ಇಂದು ಮುಂಜಾನೆ ಸುಮಾರು 4:30 ರ ವೇಳೆಗೆ ಬೆಟ್ಟದ ಮದಹಳ್ಳಿ ಗ್ರಾಮದ ರೈತ ಮಂಜುನಾಥ್ ಎಂಬುವವರ ಕೃಷಿ ಜಮೀನಿಗೆ ಏಕಾಏಕಿ ನುಗ್ಗಿದ ಒಂಟಿ ಕಾಡಾನೆ, ಕಷ್ಟಪಟ್ಟು ಬೆಳೆಸಿದ್ದ ಬೆಳೆಗಳನ್ನು ತಿಂದು ತೇಗಿದೆ. ತೀವ್ರ ಬರದ ಪರಿಸ್ಥಿತಿಯ ನಡುವೆಯೂ ಕಷ್ಟಪಟ್ಟು ನೀರು ಹಾಯಿಸಿ ಬೆಳೆದು ನಿಲ್ಲಿಸಿದ್ದ ಬೆಳೆಯನ್ನು ಕಣ್ಣೆದುರೇ ಕಾಡಾನೆ ನಾಶಪಡಿಸಿದ್ದನ್ನು ಕಂಡು ಬಡ ರೈತ ಮಂಜುನಾಥ್ ಕಂಗೆಟ್ಟಿದ್ದಾರೆ. ಜಮೀನಿಗೆ ಆನೆ ನುಗ್ಗಿದ್ದನ್ನು ಕಂಡು ರೈತರು ಎಷ್ಟೇ ಕೂಗಾಡಿ, ಬೊಬ್ಬೆ ಹೊಡೆದು ಬೆದರಿಸಲು ಯತ್ನಿಸಿದರೂ ಗಜರಾಜ ಮಾತ್ರ ಒಂದಿಂಚೂ ಕದಲದೆ ನಿಂತಲ್ಲೇ ನಿಂತು ಬೆಳೆ ನಾಶ ಮಾಡಿದ್ದಾನೆ. ಸತತವಾಗಿ ಕಾಡಾನೆಗಳು ನಾಡಿಗೆ ನುಗ್ಗಿ ಕೃಷಿ ಭೂಮಿಯನ್ನು ನಾಶಪಡಿಸುತ್ತಿದ್ದರೂ ಅರಣ್ಯ ಇಲಾಖೆ ಸೂಕ್ತ ತಡೆಗೋಡೆ ಅಥವಾ ಸೋಲಾರ್ ಬೇಲಿ ವ್ಯವಸ್ಥೆ ಕಲ್ಪಿಸಿಲ್ಲ ಎಂದು ಗ್ರಾಮಸ್ಥರು ದೂರಿದ್ದಾರೆ. ಬಂಡೀಪುರ ಟೈಗರ್ ರಿಸರ್ವ್ ಫಾರೆಸ್ಟ್ (Bandipur Tiger Reserve) ಸಿಬ್ಬಂದಿಯ ನಿರ್ಲಕ್ಷ್ಯವೇ ಈ ಅನಾಹುತಕ್ಕೆ ಕಾರಣ ಎಂದು ಅನ್ನದಾತರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೂಡಲೇ ಸ್ಥಳಕ್ಕೆ ಅರಣ್ಯಾಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಬೇಕು ಹಾಗೂ ಬೆಳೆ ಕಳೆದುಕೊಂಡ ಬಡ ರೈತ ಮಂಜುನಾಥ್ ಅವರಿಗೆ ಸೂಕ್ತ ಪರಿಹಾರ ಧನ ವಿತರಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us