ಜ್ಞಾನ ದೇಗುಲ ಘೋಷ ವಾಕ್ಯದ ವಿವಾದ ಬೆನ್ನಲ್ಲೇ ವಿಡಿಯೋ ಬಿಡುಗಡೆ; ಶಿಕ್ಷಕರಾಗಿ ನ್ಯಾಯದ ಪಾಠ ಮಾಡಿದ H.C.ಮಹದೇವಪ್ಪ
ವಸತಿ ಶಾಲೆಗಳ ಘೋಷವಾಕ್ಯ ಬದಲಾವಣೆ ಆದಾಗ ಮಾತನಾಡಿದ್ದ ಸಚಿವ ಡಾ. ಎಚ್.ಸಿ. ಮಹದೇವಪ್ಪ ಅವರು ಈ ವಿಚಾರದಲ್ಲಿ ಯಾವುದೇ ಆದೇಶವನ್ನು ಹೊರಡಿಸಲಾಗಿಲ್ಲ. ಸರ್ಕಾರದ ವತಿಯಿಂದ ಈಗ ಪ್ರಸ್ತುತ ಇರುವ ಘೋಷವಾಕ್ಯವನ್ನು ತೆಗೆದುಹಾಕುವ ಯಾವುದೇ ಆದೇಶವನ್ನು ಹೊರಡಿಸಲಾಗಿಲ್ಲ. ಇದೊಂದು ವಿವಾದದ ಅಂಶವೇ ಅಲ್ಲ ಎಂದಿದ್ದರು. ಸದ್ಯ ಈಗ ಇದರ ಬೆನ್ನಲ್ಲೇ ಶಿಕ್ಷಕರು ತಪ್ಪು ಮಾಡಿದರೂ ಮಕ್ಕಳು ಪ್ರಶ್ನೆ ಮಾಡಬೇಕು ಎಂದು ಅರ್ಥ ನೀಡುವ ವಿಡಿಯೋ ಬಿಡುಗಡೆ ಮಾಡಲಾಗಿದೆ.
ಬೆಂಗಳೂರು, ಫೆ.21: ಜ್ಞಾನ ದೇಗುಲವಿದು, ಕೈ ಮುಗಿದು ಒಳಗೆ ಬಾ ಅನ್ನೋ ಘೋಷವಾಕ್ಯವನ್ನು ಬದಲಾಯಿಸಿ ಜ್ಞಾನ ದೇಗುಲವಿದು ಧೈರ್ಯವಾಗಿ ಪ್ರಶ್ನಿಸಿ ಅಂತ ಹಲವು ಜಿಲ್ಲೆಗಳ ವಸತಿ ಶಾಲೆಗಳಲ್ಲಿ ಬರೆಸಲಾಗಿತ್ತು. ಈ ವಿಚಾರ ಭಾರೀ ಚರ್ಚೆಗೆ ಕಾರಣವಾಗಿತ್ತು. ಇದರ ಬೆನ್ನಲ್ಲೆ ಈಗ ಸಮಾಜ ಕಲ್ಯಾಣ ಇಲಾಖೆ ಸಚಿವರಿಂದ ಕಿರುಚಿತ್ರದ ವಿಡಿಯೋ ಬಿಡುಗಡೆ ಮಾಡಲಾಗಿದೆ. ಪ್ರಶ್ನಿಸುವುದನ್ನು ಕಲಿಯಬೇಕು ಎಂಬ ಅರ್ಥದ ಕಿರುಚಿತ್ರದಲ್ಲಿ ಶಿಕ್ಷಕರ ಪಾತ್ರದಲ್ಲಿ H.C.ಮಹದೇವಪ್ಪ ಅಭಿನಯಿಸಿದ್ದಾರೆ.
ಜ್ಞಾನ ದೇಗುಲವಿದು, ಕೈ ಮುಗಿದು ಒಳಗೆ ಬಾ ಅನ್ನೋ ಘೋಷವಾಕ್ಯವನ್ನು ಬದಲಾಯಿಸಿ ಜ್ಞಾನ ದೇಗುಲವಿದು ಧೈರ್ಯವಾಗಿ ಪ್ರಶ್ನಿಸಿ ಅಂತ ಹಲವು ಜಿಲ್ಲೆಗಳ ವಸತಿ ಶಾಲೆಗಳಲ್ಲಿ ಬರೆಯಲಾಗಿತ್ತು. ರಾಷ್ಟ್ರಕವಿ ಕುವೆಂಪು ಅವರ ನುಡಿಯನ್ನ ರಾಜ್ಯ ಸರ್ಕಾರ ಬದಲಿಸಿದೆ ಅಂತ ವಿಪಕ್ಷಗಳು ಆಕ್ರೋಶ ಹೊರಹಾಕಿತ್ತು. ಆಗ ಜ್ಞಾನ ದೇಗುಲವಿದು ಬದಲಾಗಿ, ಧೈರ್ಯದಿಂದ ಪ್ರಶ್ನಿಸು ಎಂದು ಬದಲಿಸುವ ಆದೇಶವನ್ನು ಸರ್ಕಾರ ಅಧಿಕೃತವಾಗಿ ಮಾಡಿಲ್ಲ. ಬದಲಿಗೆ ಸಮಾಜ ಕಲ್ಯಾಣ ಇಲಾಖೆ ಪ್ರಧಾನ ಕಾರ್ಯದರ್ಶಿ ಮೇಜರ್ ಮಣಿವಣ್ಣನ್ ಜನವರಿ 18 ರಂದು ಟೆಲಿಗ್ರಾಂ ನಲ್ಲಿ ಘೋಷವಾಕ್ಯ ಬದಲಿಸುವಂತೆ ಸೂಚಿಸಿದ್ದಾರೆ ಎನ್ನಲಾಗಿತ್ತು. ಈ ಬಗ್ಗೆ ವಾದ-ವಿವಾದದ ಬಳಿಕ ವಸತಿ ಶಾಲೆಗಳಲ್ಲಿ ಮೊದಲು ಇದ್ದ ಕುವೆಂಪು ಅವರ ಘೋಷವಾಕ್ಯವನ್ನೇ ಬರೆಸಲಾಯಿತು. ಆದರೆ ಈಗ ಸಮಾಜ ಕಲ್ಯಾಣ ಇಲಾಖೆಯ ಸಚಿವರಿಂದ ಕಿರುಚಿತ್ರದ ವಿಡಿಯೋ ರಿಲೀಸ್ ಆಗಿದೆ.
ಕಿರುಚಿತ್ರದಲ್ಲಿ ಸಚಿವ ಮಹದೇವಪ್ಪನವರು ಶಿಕ್ಷಕರ ಪಾತ್ರದಲ್ಲಿ ನಟಿಸಿದ್ದಾರೆ. ಶಾಲೆಯಲ್ಲಿ ಶಿಕ್ಷಕರು ತಪ್ಪು ಮಾಡಿದರೂ ವಿದ್ಯಾರ್ಥಿಗಳು ಪ್ರಶ್ನೆ ಮಾಡಬೇಕು ಎಂಬ ಅರ್ಥದಲ್ಲಿ ಕಿರು ಚಿತ್ರ ನಿರ್ಮಾಣವಾಗಿದೆ. ಕಿರುಚಿತ್ರದಲ್ಲಿ ವಿದ್ಯಾರ್ಥಿಗಳೊಂದಿಗೆ ಸಚಿವರು ಸಂವಾದ ಮಾಡಿದ್ದಾರೆ. ಅನ್ಯಾಯವನ್ನ ಪ್ರಶ್ನೆ ಮಾಡಬೇಕು. ದೌರ್ಜನ್ಯಗಳ ವಿರುದ್ಧ ಪ್ರತಿಭಟಿಸಬೇಕು. ಅನ್ಯಾಯವಾದವರ ಪರವಾಗಿ ನಿಲ್ಲಬೇಕು. ಆಗ ನಮ್ಮ ಬದುಕಿಗೊಂದು ಅರ್ಥಬರಲಿದೆ. ಇದನ್ನೇ ನಮ್ಮ ದೇಶದ ಸಂವಿಧಾನ ಹೇಳಿದ್ದು ಎಂದು ವಿದ್ಯಾರ್ಥಿಗಳಿಗೆ ಸಚಿವ ಮಹದೇವಪ್ಪ ಪಾಠ ಮಾಡಿದ್ದಾರೆ.
ವಿಡಿಯೋ ಸುದ್ದಿಗಳನ್ನು ನೋಡಲು ಇದರ ಮೇಲೆ ಕ್ಲಿಕ್ ಮಾಡಿ