ಶ್ರೀರಂಗಪಟ್ಟಣದಲ್ಲಿ ಸಂಕೀರ್ತನ ಯಾತ್ರೆ: ಜಾಮಿಯಾ ಮಸೀದಿಗೆ ಸಾರ್ವಜನಿಕರ ಪ್ರವೇಶ ನಿರ್ಬಂಧ
ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದಲ್ಲಿ ಹನುಮ ಸಂಕೀರ್ತನ ಯಾತ್ರೆ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಶ್ರೀರಂಗಪಟ್ಟಣ ಕೇಸರಿ ಮಯವಾಗಿದ್ದು, ಪ್ರಮುಖ ರಸ್ತೆ, ಸರ್ಕಲ್ಗಳಲ್ಲಿ ಕೇಸರಿ ಬಾವುಟ, ಬಂಟಿಂಗ್ಸ್ ರಾರಾಜಿಸುತ್ತಿವೆ. ಹನುಮ ಮಾಲಾಧಾರಿಗಳ ಸಂಕೀರ್ತನಾ ಯಾತ್ರೆ ಜಾಮಿಯಾ ಮಸೀದಿ ಮುಂದೆ ಸಾಗಲಿದೆ. ಈ ಹಿನ್ನೆಲೆಯಲ್ಲಿ ಅಹಿತಕರ ಘಟನೆ ನಡೆಯದಂತೆ ಜಾಮಿಯಾ ಮಸೀದಿಗೆ ಸಾರ್ವಜನಿಕರ ಪ್ರವೇಶಕ್ಕೆ ನಿರ್ಬಂಧಿಸಲಾಗಿದೆ. ಯಾತ್ರೆ ಮುಗಿಯವರೆಗೂ ಜನರ ಪ್ರವೇಶಕ್ಕೆ ನಿರ್ಬಂಧಿಸಲಾಗಿದೆ.
ದಕ್ಷಿಣ ವಲಯ ಡಿಐಜಿ ನೇತೃತ್ವದಲ್ಲಿ ಭದ್ರತೆ ಮಾಡಿಕೊಳ್ಳಲಾಗಿದೆ. ಭದ್ರತೆಗೆ ಮೂವರು ಎಸ್ಪಿ ಸೇರಿ 1100 ಸಿಬ್ಬಂದಿ ನಿಯೋಜಿಸಲಾಗಿದೆ. ಶ್ರೀರಂಗಪಟ್ಟಣದಲ್ಲಿ 110 ಸಿಸಿ ಕ್ಯಾಮರಾಗಳನ್ನು ಅಳವಡಿಸಲಾಗಿದೆ. ಜಾಮಿಯಾ ಮಸೀದಿ ಸ್ಥಳಕ್ಕೆ ಪ್ರವಾಸಿಗರಿಗೆ ನಿರ್ಬಂಧ ವಿಧಿಸಿದ್ದೇವೆ. ಶ್ರೀರಂಗಪಟ್ಟಣದಲ್ಲಿ ಮದ್ಯಮಾರಾಟವನ್ನೂ ನಿಷೇಧ ಮಾಡಲಾಗಿದೆ ಎಂದು ಮಂಡ್ಯ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಹೇಳಿದರು.