6,6,6,4,6..! ಸತತ 2ನೇ ಪಂದ್ಯದಲ್ಲೂ ಹಾರ್ದಿಕ್ ಅಬ್ಬರ; ವಿಡಿಯೋ ನೋಡಿ

|

Updated on: Nov 29, 2024 | 3:16 PM

Hardik Pandya: ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಬರೋಡಾ ತಂಡದ ಪರ ಆಡುತ್ತಿರುವ ಹಾರ್ದಿಕ್ ಪಾಂಡ್ಯ ಅವರು ಅದ್ಭುತ ಪ್ರದರ್ಶನ ನೀಡುತ್ತಿದ್ದಾರೆ. ತ್ರಿಪುರಾ ವಿರುದ್ಧದ ಪಂದ್ಯದಲ್ಲಿ ಒಂದೇ ಓವರ್‌ನಲ್ಲಿ 28 ರನ್ ಗಳಿಸಿ ತಂಡವನ್ನು ಗೆಲುವಿನತ್ತ ಮುನ್ನಡೆಸಿದರು. ಇತ್ತೀಚೆಗೆ ತಮಿಳುನಾಡು ವಿರುದ್ಧದ ಪಂದ್ಯದಲ್ಲೂ ಅವರು ಅದ್ಭುತ ಬ್ಯಾಟಿಂಗ್ ಪ್ರದರ್ಶಿಸಿದ್ದರು.

ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಬರೋಡಾದ ಪರ ಆಡುತ್ತಿರುವ ಆಲ್ ಹಾರ್ದಿಕ್ ಪಾಂಡ್ಯ, ಅಣ್ಣನ ನಾಯಕತ್ವದಲ್ಲಿ ಅದ್ಭುತ ಪ್ರದರ್ಶನ ನೀಡುತ್ತಿದ್ದಾರೆ. ಕೇವಲ 2 ದಿನಗಳ ಹಿಂದೆ ತಮಿಳುನಾಡು ತಂಡದ ವಿರುದ್ಧದ ಪಂದ್ಯದಲ್ಲಿ ಹಾರ್ದಿಕ್ ಕೇವಲ 30 ಎಸೆತಗಳಲ್ಲಿ 4 ಬೌಂಡರಿ ಮತ್ತು 7 ಸಿಕ್ಸರ್ ಸಹಿತ 69 ರನ್ ಚಚ್ಚಿದ್ದರು. ಅದರಲ್ಲೂ ಬರೋಡಾದ ಇನ್ನಿಂಗ್ಸ್‌ನ 17 ನೇ ಓವರ್‌ನ ಮೊದಲ 3 ಎಸೆತಗಳಲ್ಲಿ ಪಾಂಡ್ಯ 3 ಸಿಕ್ಸರ್‌ಗಳನ್ನು ಬಾರಿಸುವುದರ ಜೊತೆಗೆ ಓವರ್​ನಲ್ಲಿ ಒಟ್ಟು 29 ರನ್ ಗಳಿಸಿದ್ದರು. ಇದೀಗ ಹಾರ್ದಿಕ್ ನವೆಂಬರ್ 29 ರಂದು ನಡೆದ ತ್ರಿಪುರಾ ವಿರುದ್ಧದ ಪಂದ್ಯದಲ್ಲೂ ಹಾರ್ದಿಕ್ ಪಾಂಡ್ಯ ಸ್ಫೋಟಕ ಬ್ಯಾಟಿಂಗ್ ಮಾಡಿದ್ದು, ಒಂದೇ ಓವರ್​ನಲ್ಲಿ 28 ರನ್ ಕಲೆಹಾಕಿದ್ದಾರೆ.

ಹಾರ್ದಿಕ್ ಪಾಂಡ್ಯ ಸಿಡಿಲಬ್ಬರ

ಹಾರ್ದಿಕ್ ಪಾಂಡ್ಯ ಬಹಳ ದಿನಗಳ ನಂತರ ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಆಡುತ್ತಿದ್ದಾರೆ. ಇಂದಿನ ತ್ರಿಪುರಾ ವಿರುದ್ಧದ ಪಂದ್ಯದಲ್ಲಿ ಹಾರ್ದಿಕ್ ಕೇವಲ 23 ಎಸೆತಗಳಲ್ಲಿ 47 ರನ್‌ಗಳ ಇನಿಂಗ್ಸ್‌ ಆಡಿದರು. ಇದರಲ್ಲಿ 3 ಬೌಂಡರಿ ಮತ್ತು 5 ಸಿಕ್ಸರ್‌ಗಳು ಸೇರಿದ್ದವು. ಈ ಅವಧಿಯಲ್ಲಿ ಪಾಂಡ್ಯ ಅವರ ಸ್ಟ್ರೈಕ್ ರೇಟ್ 204.35 ಆಗಿತ್ತು.

ಒಂದೇ ಓವರ್​ನಲ್ಲಿ 6,6,6,4,6

ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ತ್ರಿಪುರ ತಂಡ ನಿಗದಿತ 20 ಓವರ್​ಗಳಲ್ಲಿ 9 ವಿಕೆಟ್ ಕಳೆದುಕೊಂಡು 109 ರನ್ ಕಲೆಹಾಕಲಷ್ಟೇ ಶಕ್ತವಾಯಿತು. ಈ ಗುರಿ ಬೆನ್ನಟ್ಟಿದ ಬರೋಡಾ ತಂಡದ ಪರ ನಾಲ್ಕನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಹಾರ್ದಿಕ್ ಎಂದಿನಂತೆ ತಮ್ಮ ಸ್ಫೋಟಕ ಬ್ಯಾಟಿಂಗ್‌ ಮುಂದುವರೆಸಿದರು. ಈ ವೇಳೆ ಇನ್ನಿಂಗ್ಸ್​ನ 10 ನೇ ಓವರ್​ ಎಸೆಯಲು ಬಂದ ಎದುರಾಳಿ ತಂಡದ ಪರ್ವೇಜ್ ಸುಲ್ತಾನ್ ಅವರ ಓವರ್​ನಲ್ಲಿ ಹಾರ್ದಿಕ್ ಬರೋಬ್ಬರಿ 4 ಸಿಕ್ಸರ್ ಹಾಗೂ 1 ಬೌಂಡರಿ ಸಹಿತ 28 ರನ್ ಕಲೆಹಾಕಿದರು. ಇದರೊಂದಿಗೆ ತ್ರಿಪುರ ನೀಡಿದ 109 ರನ್​ಗಳ ಗುರಿಯನ್ನು ಬರೋಡಾ ತಂಡ 11.2ಓವರ್​ಗಳಲ್ಲಿ ಕೇವಲ 3 ವಿಕೆಟ್​ ಕಳೆದುಕೊಂಡು ಬೆನ್ನಟ್ಟವುಲ್ಲಿ ಪಾಂಡ್ಯ ಪ್ರಮುಖ ಪಾತ್ರವಹಿಸಿದರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ