ಚೊಚ್ಚಲ ಪಂದ್ಯದಲ್ಲೇ ಅಬ್ಬರಿಸಿದ ಯುವ ದಾಂಡಿಗ: ಪಾಕ್​ ತಂಡಕ್ಕೆ ಭರ್ಜರಿ ಜಯ

Updated on: Aug 09, 2025 | 12:34 PM

Hasan Nawaz: ಈ ಪಂದ್ಯದಲ್ಲಿ 54 ಎಸೆತಗಳನ್ನು ಎದುರಿಸಿದ 22 ವರ್ಷದ ಹಸನ್ ನವಾಝ್ 3 ಭರ್ಜರಿ ಸಿಕ್ಸ್ ಹಾಗೂ 5 ಫೋರ್​ಗಳೊಂದಿಗೆ ಅಜೇಯ 63 ರನ್ ಬಾರಿಸಿದರು. ಈ ಮೂಲಕ ಪಾಕಿಸ್ತಾನ್ ತಂಡವನ್ನು 48.5 ಓವರ್​ಗಳಲ್ಲಿ ಗುರಿ ಮುಟ್ಟಿಸಿ 5 ವಿಕೆಟ್​​ಗಳ ಜಯ ತಂದುಕೊಟ್ಟರು. ಈ ಗೆಲುವಿನೊಂದಿಗೆ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಪಾಕಿಸ್ತಾನ್ ತಂಡ 1-0 ಅಂತರದಿಂದ ಮುನ್ನಡೆ ಸಾಧಿಸಿದೆ.

ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಪಾಕಿಸ್ತಾನ್ ತಂಡ ಭರ್ಜರಿ ಜಯ ಸಾಧಿಸಿದೆ. ಟ್ರಿನಿಡಾಡ್​ನ ಬ್ರಿಯಾನ್ ಲಾರಾ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ಪಾಕಿಸ್ತಾನ್ ತಂಡದ ನಾಯಕ ಮೊಹಮ್ಮದ್ ರಿಝ್ವಾನ್ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ವೆಸ್ಟ್ ಇಂಡೀಸ್ ಪರ ಎವಿನ್ ಲೂಯಿಸ್ (60) ಹಾಗೂ ಶಾಯ್ ಹೋಪ್ (55) ಆಕರ್ಷಕ ಅರ್ಧಶತಕ ಬಾರಿಸಿದರು. ಇನ್ನು ಕೆಳ ಕ್ರಮಾಂಕದಲ್ಲಿ ಕಣಕ್ಕಿಳಿದ ರೋಸ್ಟನ್ ಚೇಸ್ 53 ರನ್​ಗಳ ಕೊಡುಗೆ ನೀಡಿದರು. ಈ ಮೂಲಕ ವೆಸ್ಟ್ ಇಂಡೀಸ್ ತಂಡವು 49 ಓವರ್​ಗಳಲ್ಲಿ 280 ರನ್​ಗಳಿಸಿ ಆಲೌಟ್ ಆಯಿತು.

281 ರನ್​ಗಳ ಗುರಿ ಬೆನ್ನತ್ತಿದ ಪಾಕಿಸ್ತಾನ್ ತಂಡ ಉತ್ತಮ ಆರಂಭ ಪಡೆದಿರಲಿಲ್ಲ. ಇದಾಗ್ಯೂ ಮಧ್ಯಮ ಕ್ರಮಾಂಕದಲ್ಲಿ ಬಾಬರ್ ಆಝಂ 47 ರನ್ ಬಾರಿಸಿದರೆ, ಮೊಹಮ್ಮದ್ ರಿಝ್ವಾನ್ 53 ರನ್​ಗಳಿಸಿದರು. ಆ ಬಳಿಕ ಬಂದ ಯುವ ದಾಂಡಿಗ ಹಸನ್ ನವಾಝ್ ಭರ್ಜರಿ ಬ್ಯಾಟಿಂಗ್​ನೊಂದಿಗೆ ಪಾಕ್ ತಂಡವನ್ನು ಗೆಲುವಿನತ್ತ ಕೊಂಡೊಯ್ದರು.

ಚೊಚ್ಚಲ ಪಂದ್ಯದಲ್ಲಿ 54 ಎಸೆತಗಳನ್ನು ಎದುರಿಸಿದ 22 ವರ್ಷದ ಹಸನ್ ನವಾಝ್ 3 ಭರ್ಜರಿ ಸಿಕ್ಸ್ ಹಾಗೂ 5 ಫೋರ್​ಗಳೊಂದಿಗೆ ಅಜೇಯ 63 ರನ್ ಬಾರಿಸಿದರು. ಈ ಮೂಲಕ ಪಾಕಿಸ್ತಾನ್ ತಂಡವನ್ನು 48.5 ಓವರ್​ಗಳಲ್ಲಿ ಗುರಿ ಮುಟ್ಟಿಸಿ 5 ವಿಕೆಟ್​​ಗಳ ಜಯ ತಂದುಕೊಟ್ಟರು. ಈ ಗೆಲುವಿನೊಂದಿಗೆ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಪಾಕಿಸ್ತಾನ್ ತಂಡ 1-0 ಅಂತರದಿಂದ ಮುನ್ನಡೆ ಸಾಧಿಸಿದೆ.

Published on: Aug 09, 2025 12:30 PM