ಸಕಲೇಶಪುರ: ಅರಣ್ಯ ಇಲಾಖೆ ಸಿಬ್ಬಂದಿ ಕಂಡು ರೌದ್ರಾವತಾರ ತಾಳಿ ಬೈಕ್ಗಳ ಮೆಟ್ಟಿ ಪುಡಿ ಮಾಡಿದ ಕಾಡಾನೆ! ವಿಡಿಯೋ ನೋಡಿ
ಸಕಲೇಶಪುರದ ಮತ್ತೂರು ಗ್ರಾಮದಲ್ಲಿ ಕಾಡಾನೆಗಳ ಮೇಲೆ ನಿಗಾ ಇರಿಸಿದ್ದ ಇಟಿಎಫ್ ಸಿಬ್ಬಂದಿ ಮೇಲೆ ಆನೆ ದಾಳಿ ನಡೆಸಿದೆ. ಸಿಬ್ಬಂದಿ ಪ್ರಾಣ ಉಳಿಸಿಕೊಳ್ಳಲು ಬೈಕ್ ಬಿಟ್ಟು ಪರಾರಿಯಾಗಿದ್ದು, ಆನೆ ಬೈಕ್‌ಗಳನ್ನು ಜಖಂಗೊಳಿಸಿದೆ. ಅರಣ್ಯ ಇಲಾಖೆಯ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ವಿಡಿಯೋ ಇಲ್ಲಿದೆ ನೋಡಿ.
ಹಾಸನ, ಏಪ್ರಿಲ್ 1: ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಮತ್ತೂರು ಗ್ರಾಮದಲ್ಲಿ ಕಾಡಾನೆಗಳ ಚಲನವಲನ ಗಮನಿಸುತ್ತಿದ್ದ ಅರಣ್ಯ ಇಲಾಖೆಯ ಎಲಿಫೆಂಟ್ ಟಾಸ್ಕ್ ಫೋರ್ಸ್ (ETF) ಸಿಬ್ಬಂದಿ ಮೇಲೆ ಕಾಡಾನೆಯೊಂದು ಭೀಕರವಾಗಿ ದಾಳಿ ಮಾಡಿದೆ. ಈ ವೇಳೆ ಸಿಬ್ಬಂದಿ ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಇಟಿಎಫ್ ಸಿಬ್ಬಂದಿಯಾದ ಪ್ರಸನ್ನ, ಯುವರಾಜ್ ಮತ್ತು ಧನಂಜಯ ಮತ್ತೂರು ಗ್ರಾಮದ ಬಳಿ ಕಾಡಾನೆಗಳ ಮೇಲೆ ನಿಗಾ ಇರಿಸಿದ್ದರು. ಈ ಸಂದರ್ಭದಲ್ಲಿ ಏಕಾಏಕಿ ಆನೆಯೊಂದು ಇವರತ್ತ ನುಗ್ಗಿ ಬಂದಿದೆ. ಆನೆ ದಾಳಿ ಮಾಡುತ್ತಿದ್ದಂತೆ ಗಾಬರಿಗೊಂಡ ಸಿಬ್ಬಂದಿ ತಮ್ಮ ಬೈಕ್‌ಗಳನ್ನು ಸ್ಥಳದಲ್ಲೇ ಬಿಟ್ಟು ಓಡಿ ಹೋಗಿ ಪ್ರಾಣ ಉಳಿಸಿಕೊಂಡಿದ್ದಾರೆ. ಸಿಬ್ಬಂದಿ ಹೋದ ನಂತರ ಆನೆಯು ಅಲ್ಲಿದ್ದ ಬೈಕ್‌ಗಳನ್ನು ಸಂಪೂರ್ಣವಾಗಿ ಜಖಂಗೊಳಿಸಿದೆ.
ಈ ಘಟನೆಯಿಂದ ರೊಚ್ಚಿಗೆದ್ದಿರುವ ಸ್ಥಳೀಯರು, ಕಾಡಾನೆಗಳನ್ನು ಓಡಿಸುವ ಅರಣ್ಯ ಇಲಾಖೆಯ ಸಿಬ್ಬಂದಿಗೇ ಸರಿಯಾದ ರಕ್ಷಣೆ ಇಲ್ಲದಂತಾಗಿದೆ. ಇನ್ನು ಸಾಮಾನ್ಯ ಜನರ ಕಥೆ ಏನು? ಎಂದು ಇಲಾಖೆಯ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
