ಹಾವೇರಿ: ಹಾಸಿಗೆ ಹಿಡಿದ ಮಗನ ಚಿಕಿತ್ಸೆಗೆ ಕುಮಾರಸ್ವಾಮಿ ಬಳಿ ಸಹಾಯ ಕೇಳಿದ ತಾಯಿ
ಹಾವೇರಿ ಜಿಲ್ಲೆಯ ರಾಣೇಬೆನ್ನೂರಿನಲ್ಲಿ ಅಪಘಾತಕ್ಕೀಡಾದ ಯುವಕ ಜಗದೀಶ್ ಸಜ್ಜನರ್ ಅವರ ಕುಟುಂಬಸ್ಥರು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿಯವರನ್ನು ಭೇಟಿ ಮಾಡಿ ಚಿಕಿತ್ಸೆಗೆ ಸಹಾಯ ಕೋರಿದರು. ಕುಮಾರಸ್ವಾಮಿಯವರು ಬೆಂಗಳೂರಿಗೆ ಬರಲು ಕುಟುಂಬಕ್ಕೆ ಸಲಹೆ ನೀಡಿ, ತಮ್ಮಿಂದಾದಷ್ಟು ವೈಯಕ್ತಿಕ ಸಹಾಯ ಮಾಡುವುದಾಗಿ ಭರವಸೆ ನೀಡಿದರು.
ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ರವಿವಾರ (ಫೆ.09) ಹಾವೇರಿ ಜಿಲ್ಲೆ ರಾಣೇಬೆನ್ನೂರಿಗೆ ಭೇಟಿ ನೀಡಿದ್ದಾರೆ. ಈ ವೇಳೆ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡು ಹಾಸಿಗೆ ಹಿಡಿದ ಯುವಕನ ಕುಟುಂಬಸ್ಥರು ಹೆಚ್ಡಿ ಕುಮಾರಸ್ವಾಮಿಯವರನ್ನು ಭೇಟಿ ಮಾಡಿ, ಚಿಕಿತ್ಸೆಗೆ ಸಹಾಯ ಕೇಳಿದರು. ಹಾವೇರಿ ತಾಲ್ಲೂಕಿನ ಸಂಗೂರು ಗ್ರಾಮದ ನಿವಾಸಿ ಜಗದೀಶ ಸಜ್ಜನರ್ (30) ಅಪಘಾತದಲ್ಲಿ ಗಾಯಗೊಂಡು ಹಾಸಿಗೆ ಹಿಡಿದಿದ್ದಾರೆ. ಇವರ ಕುಟುಂಬಸ್ಥರು ಹೆಚ್ಡಿ ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿ, ಕಣ್ಣೀರು ಹಾಕಿ, ಕಾಲಿಗೆ ನಮಸ್ಕರಿಸಿ ಚಿಕಿತ್ಸೆಗಾಗಿ ಸಹಾಯ ಮಾಡಿ ಎಂದು ಮನವಿ ಮಾಡಿಕೊಂಡರು.
ಯಾರನ್ನು ಭೇಟಿಯಾದರೂ ಸಹಾಯ ಆಗಿಲ್ಲ. ನೀವು ಶಾಶ್ವತ ಚಿಕಿತ್ಸೆಗೆ ಸಹಾಯ ಮಾಡಿ ಎಂದು ಕೇಳಿಕೊಂಡರು. ಈ ವೇಳೆ ಹೆಚ್ಡಿ ಕುಮಾರಸ್ವಾಮಿ ಮಾತನಾಡಿ, ಇಲ್ಲಿ ಏನೋ ಮಾಡೋಕೆ ಆಗುವುದಿಲ್ಲ. ಬೆಂಗಳೂರಿಗೆ ಬನ್ನಿ ನನ್ನ ಕೈಲಾದಷ್ಟು ಸಹಾಯ ಮಾಡುತ್ತೇನೆ. ರಾಜ್ಯದಲ್ಲಿ ನಮ್ಮ ಸರ್ಕಾರ ಇಲ್ಲ. ವೈಯುಕ್ತಿಕವಾಗಿ ಸಹಾಯ ಮಾಡುತ್ತೇನೆ ಎಂದರು.