ಬೆಳಗಾವಿ ಅಧಿವೇಶನ: ಕುಮಾರಸ್ವಾಮಿಯ ಎಡವಟ್ಟಿನಿಂದ ಅವರಣ್ಣ ರೇವಣ್ಣ ತೀವ್ರ ನೊಂದುಕೊಂಡರು!
ಅಸಲಿಗೆ, ಕುಮಾರಸ್ವಾಮಿ ಹಿಂದೆ ತಮ್ಮ ಪಕ್ಷದವರಾಗಿದ್ದ ಶಿವಲಿಂಗೇಗೌಡರನ್ನು ಟೀಕಿಸುವ ಭರದಲ್ಲಿ ರೇವಣ್ಣರನ್ನೂ ಸೇರಿಸಿಬಿಡುತ್ತಾರೆ, ಅದು ಅವರಿಂದಾದ ಅಚಾತುರ್ಯ. ಆದರೆ, ಯಾರದ್ದು ಅಸಲಿ ಹೋರಾಟ ಯಾರದ್ದು ಕೃತ್ರಿಮ ಅಂತ ಕುಮಾರಸ್ವಾಮಿ ಹೇಗೆ ನಿರ್ಧರಿಸುತ್ತಾರೆ? ಸದನದಲ್ಲಿ ಅವರು ನ್ಯಾಯಾಧೀಶರೇ? ಅವರಿಬ್ಬರು ರೈತರ ಪರವಾಗಿ ಹೋರಾಡುತ್ತಿದ್ದಾರೆ, ಅವರ ಬೆಂಬಲಕ್ಕೆ ನಿಲ್ಲುವ ಬದಲು ಹೀಗೆ ಟೀಕಿಸಿದರೆ ಅದು ಎರಡು ಬಾರಿ ರಾಜ್ಯದ ಮುಖ್ಯಮಂತ್ರಿಯಾಗಿದ್ದ ಕುಮಾರಸ್ವಾಮಿಗೆ ಶೋಭೆ ನೀಡದು.
ಬೆಳಗಾವಿ: ತೆಂಗು ಬೆಳೆಗಾರ ಪರ ಮಾತಾಡಲು ವಿಧಾನಸಭಾ ಅಧಿವೇಶನದಲ್ಲಿ (Belagavi Assembly Session) ಮಾತಾಡಲು ಎದ್ದು ನಿಂತ ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ (HD Kumaraswamy) ಮಾತಿನಲ್ಲಿ ಎಡವಟ್ಟು ಮಾಡಿದ್ದರಿಂದ ತಮ್ಮ ಸಹೋದರ ಹೆಚ್ ಡಿ ರೇವಣ್ಣರಿಂದಲೇ (HD Revanna) ಟೀಕೆಗೊಳಗಾದರು. ಹಿಂದೆ ಮಾರುಕಟ್ಟೆಯಲ್ಲಿ ಕೊಬ್ಬರಿ ಬೆಳೆ ಕ್ವಿಂಟಾಲ್ ಗೆ ರೂ. 18,000 ಇದ್ದಿದ್ದು ಈಗ ರೂ, 7,000 ಗಳಿಗ ಕುಸಿದಿದೆ ಅಂತ ಮಾತಿಗಾರಂಭಿಸುವ ಕುಮಾರಸ್ವಾಮಿ ಹಿಂದಿನ ಅಧಿವೇಶನದಲ್ಲೂ ಕೊಬ್ಬರಿಗೆ ಬೆಂಬಲ ಬೆಲೆ ಕೊಡಿಸುವ ರೇಸ್ ನಲ್ಲಿ ರೇವಣ್ಣ ಮತ್ತು ಕೆಎಂ ಶಿವಲಿಂಗೇಗೌಡರ (KM Shivalinge Gowda) ನಡುವೆ ಪೈಪೋಟಿ ಇತ್ತು; ಯಾಕೆಂದರೆ ಇವರಿಗೆ ತಮ್ಮ ಕ್ಷೇತ್ರಗಳ ತೆಂಗು ಬೆಳೆಗಾರರಿಗೆ ನಿಮ್ಮ ಪರ ಸದನದಲ್ಲಿ ಹೋರಾಟ ನಡೆಸುತ್ತಿದ್ದೇವೆ ಅಂತ ತೋರಿಸಿಕೊಳ್ಳುವ ಉಮೇದಿ, ಹಪಾಹಪಿ ಅಂತ ಹೇಳಿದಾಗ, ರೇವಣ್ಣನಿಗೆ ರೇಗುತ್ತದೆ. ಕೂಡಲೇ ಎದ್ದು ನಿಂತು, ಕುಮಾರಸ್ವಾಮಿ ಆಡುವ ಮಾತು ಜನರಿಗೆ ತಪ್ಪು ಸಂದೇಶ ರವಾನಿಸುತ್ತದೆ, ತಾನು ಸದನದ ಹೊರಗಡೆ ಪ್ರತಿಭಟನೆ ನಡೆಸುವುದೇ ಲೇಸು ಎನ್ನುತ್ತಾರೆ. ಆಗ ಕುಮಾರಸ್ವಾಮಿಗೆ ತಮ್ಮ ತಪ್ಪಿನ ಅರಿವಾಗುತ್ತದೆ. ಸಹೋದರನಿಗೆ ಏನೇನೋ ಸಮಜಾಯಿಷಿ ನೀಡಲು ಹೊಗುತ್ತಾರೆ ಆದರೆ, ರೇವಣ್ಣ ಕುಮಾರಸ್ವಾಮಿ ಮಾತಿನಿಂದ ಬಹಳ ನೊಂದಿಕೊಂಡಿದ್ದು ಸ್ಪಷ್ಟವಾಗಿ ಗೊತ್ತಾಗುತ್ತದೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ