ಮತ್ತೆ ಮುನ್ನೆಲೆಗೆ ಬಂದ ಭೂಗತ ಪಾತಕಿ ಹೇಮಂತ್ ಪೂಜಾರಿ: ಕುಖ್ಯಾತನ ಹೆಸರಲ್ಲಿ ಕರಾವಳಿ ಉದ್ಯಮಿಗಳಿಗೆ ಬೆದರಿಕೆ ಕರೆ
ಉಡುಪಿ ಜಿಲ್ಲೆಯಲ್ಲಿ ಉದ್ಯಮಿಗಳಿಗೆ ಹಾಗೂ ಪ್ರತಿಷ್ಠಿತರಿಗೆ ಭೂಗತ ಪಾತಕಿ ಹೇಮಂತ್ ಪೂಜಾರಿ ಹೆಸರಿನಲ್ಲಿ ಬೆದರಿಕೆ ಕರೆಗಳು ಬರುತ್ತಿವೆ. ಇತ್ತೀಚೆಗೆ ಕೊಲೆಯಾದ ಡೇವಿಡ್ ಡಿಸೋಜಾ ಅವರ ಪುತ್ರನಿಗೆ 5 ಕೋಟಿ ರೂಪಾಯಿ ಬೇಡಿಕೆಯಿಟ್ಟು ಜೀವ ಬೆದರಿಕೆ ಹಾಕಲಾಗಿದೆ. ಹೇಮಂತ್ ಪೂಜಾರಿ ಜೀವಂತವಿದ್ದಾರೆಯೇ ಎಂಬ ಅನುಮಾನದೊಂದಿಗೆ ಪೊಲೀಸರು ತೀವ್ರ ತನಿಖೆ ನಡೆಸುತ್ತಿದ್ದಾರೆ.
ಉಡುಪಿ, ಅಕ್ಟೋಬರ್ 20: ಉಡುಪಿ ಜಿಲ್ಲೆಯಲ್ಲಿ ಭೂಗತ ಪಾತಕಿ ಹೇಮಂತ್ ಪೂಜಾರಿ ಹೆಸರಿನಲ್ಲಿ ಉದ್ಯಮಿಗಳು ಹಾಗೂ ಪ್ರತಿಷ್ಠಿತರಿಗೆ ಬೆದರಿಕೆ ಕರೆಗಳು ಬರಲಾರಂಭಿಸಿವೆ. ಇತ್ತೀಚೆಗೆ ಮುದುರಂಗಡಿಯಲ್ಲಿ ನಡೆದ ಡೇವಿಡ್ ಡಿಸೋಜಾ ಕೊಲೆ ಪ್ರಕರಣದ ನಂತರ ಈ ಕರೆಗಳು ಹೆಚ್ಚಾಗಿವೆ. ಕೊಲೆಯಾದ ಡೇವಿಡ್ ಡಿಸೋಜಾ ಅವರ ಪುತ್ರನಿಗೆ ವಾಟ್ಸಪ್ ಕರೆ ಮಾಡಿ, ನಿಮ್ಮ ತಂದೆಯಿಂದ ನನ್ನ ಸಹೋದರನಿಗೆ ಆದ ನಷ್ಟವನ್ನು ತುಂಬಲು 5 ಕೋಟಿ ರೂಪಾಯಿ ನೀಡಬೇಕು ಎಂದು ಹೇಮಂತ್ ಪೂಜಾರಿ ಹೆಸರಿನಲ್ಲಿ ಬೆದರಿಕೆ ಹಾಕಲಾಗಿದೆ. ಈ ಸಂಬಂಧ ಶಿರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲವು ವರ್ಷಗಳ ಹಿಂದೆ ಮುಂಬೈನಲ್ಲಿ ಹೇಮಂತ್ ಪೂಜಾರಿ ಅಪಘಾತದಲ್ಲಿ ಮೃತಪಟ್ಟಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದರು. ಆದರೆ, ಡೇವಿಡ್ ಡಿಸೋಜಾ ಕೊಲೆ ಪ್ರಕರಣದ ನಂತರ ಮತ್ತೆ ಆತನ ಹೆಸರು ಮುನ್ನೆಲೆಗೆ ಬಂದಿರುವುದರಿಂದ, ಹೇಮಂತ್ ಪೂಜಾರಿ ಜೀವಂತವಾಗಿದ್ದಾನೆಯೇ ಎಂಬ ಅನುಮಾನ ವ್ಯಕ್ತವಾಗಿದೆ. ಕರಾವಳಿ ಜಿಲ್ಲೆಯ ವಿವಿಧೆಡೆ ಇಂತಹ ಬೆದರಿಕೆ ಕರೆಗಳು ಬರುತ್ತಿದ್ದು, ಪೊಲೀಸರು ಈ ಬಗ್ಗೆ ತನಿಖೆ ಕೈಗೊಂಡಿದ್ದಾರೆ. ಈ ಕರೆಗಳ ಹಿಂದಿನ ನಿಜವಾದ ವ್ಯಕ್ತಿ ಯಾರೆಂದು ಪತ್ತೆ ಹಚ್ಚುವ ಕಾರ್ಯದಲ್ಲಿ ಪೊಲೀಸ್ ಇಲಾಖೆ ತೊಡಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
