7 ಜನ ಕಾರ್ಮಿಕರನ್ನ ಬಲಿ ಪಡೆದ ಕಾಳಿ ನದಿ ಬ್ರಿಡ್ಜ್‌ನ ರೋಚಕ ಕಥೆ ಇಲ್ಲಿದೆ

|

Updated on: Aug 08, 2024 | 4:19 PM

ಸುಮಾರು 41 ವರ್ಷಗಳಿಂದ ಕಾರವಾರ-ಗೋವಾ ನಡುವೆ ಸಂಚಾರಕ್ಕೆ ಬಳಕೆಯಾಗುತ್ತಿದ್ದ ಕಾಳಿ ನದಿ ಸೇತುವೆ ರಾತ್ರಿ 1 ಗಂಟೆ ಸುಮಾರಿಗೆ ಏಕಾಏಕಿ ಕುಸಿದುಬಿದ್ದಿತ್ತು. ಈ ಕಾಳಿ ನದಿ ಸೇತುವೆ(Kali River Bridge)ಗೆ ರೋಚಕ ಕಥೆವೊಂದಿದ್ದು, ಈ ಸೇತುವೆ ಕಾಮಗಾರಿ ಮಾಡುವ ಸಂದರ್ಭದಲ್ಲಿ 7 ಕಾರ್ಮಿಕರು ಅಸುನೀಗಿದ್ದಾರೆ.

ಉತ್ತರ ಕನ್ನಡ, ಆ.08: ಶಿರೂರು ದುರಂತ ಮಾಸುವ ಮುನ್ನವೇ ಉತ್ತರ ಕನ್ನಡದಲ್ಲಿ ಇನ್ನೊಂದು ಅವಘಡ ನಡೆದಿದ್ದು, ಸುಮಾರು 41 ವರ್ಷಗಳಿಂದ ಕಾರವಾರ-ಗೋವಾ ನಡುವೆ ಸಂಚಾರಕ್ಕೆ ಬಳಕೆಯಾಗುತ್ತಿದ್ದ ಸೇತುವೆ ರಾತ್ರಿ 1 ಗಂಟೆ ಸುಮಾರಿಗೆ ಏಕಾಏಕಿ ಕುಸಿದುಬಿದ್ದಿತ್ತು. ಈ ಕಾಳಿ ನದಿ ಸೇತುವೆ(Kali River Bridge)ಗೆ ರೋಚಕ ಕಥೆವೊಂದಿದೆ. ಹೌದು, ‘ಈ ಕಾಳಿ ಸೇತುವೆ ನಿರ್ಮಾಣ ಸಂದರ್ಭದಲ್ಲೂ ಭಾರಿ ಅಡಚಣೆ ಉಂಟಾಗಿತ್ತು. ಅಂದು ಸೇತುವೆ ನಿರ್ಮಾಣಕ್ಕೆ 1965 ರಲ್ಲಿ ಮಂಜೂರಾತಿ ಸಿಕ್ಕು, ಅಂದಿನ ಸಿಎಂ ವೀರೇಂದ್ರ ಪಾಟೀಲ್ 1974 ರಲ್ಲಿ ಸೇತುವೆಗೆ ಅಡಿಗಲ್ಲು ಹಾಕಿದ್ದರು. ಸೇತುವೆ ಕಾಮಗಾರಿ ಆರಂಭದಲ್ಲಿ 1 ಕೋಟಿ ರೂ. ಮಂಜೂರಾತಿ ಸಿಕ್ಕಿತ್ತು. ಬಳಿಕ ಸುಮಾರು 4 ಕೋಟಿ ರೂಪಾಯಿ ವೆಚ್ಚದಲ್ಲಿ ಈ ಸೇತುವೆ ನಿರ್ಮಾಣ ಮಾಡಲಾಗಿತ್ತು.

ಸೇತುವೆ ಕಾಮಗಾರಿ ಮಾಡುವ ಸಂದರ್ಭದಲ್ಲಿ 7 ಕಾರ್ಮಿಕರು ಸಾವು

ಇನ್ನು 1974 ರಿಂದ 1983 ರ ವರೆಗೆ ಸೇತುವೆ ಕಾಮಗಾರಿ ಮಾಡಲಾಗಿತ್ತು. ಕಾಮಗಾರಿ ಮಾಡುವ ಸಂದರ್ಭದಲ್ಲಿ 7 ಕಾರ್ಮಿಕರು ಅಸುನೀಗಿದ್ದರು. 1984 ರಲ್ಲಿ ಅಂದಿನ ಲೋಕೋಪಯೋಗಿ ಸಚಿವರಾದ ಎಚ್ ಡಿ ದೇವೆಗೌಡರು ಸೇತುವೆ ಲೋಕಾರ್ಪಣೆಗೊಳಿಸಿದ್ದರು. ನಾಲ್ಕು ದಶಕಗಳ ಬಳಿಕ 2009 ರಲ್ಲಿ ಸೇತುವೆ ಬೆರಿಂಗ್ ಸಡಿಲ ಆಗಿರುವ ಸಂಶಯ ವ್ಯಕ್ತವಾಗಿತ್ತು. ಜೊತೆಗೆ 2010 ರಲ್ಲಿ ಸುಮಾರು 10 ದಿನಗಳ ಕಾಲ ಸೇತುವೆಯಲ್ಲಿ ಸಂಚಾರ ನಿರ್ಬಂಧ ಹೇರಲಾಗಿತ್ತು. 2010 ರಿಂದ ಇದುವರೆಗೂ ಯಾವುದೇ ಸಮಸ್ಯೆ ಕಂಡು ಬಂದಿರಲಿಲ್ಲ. ಆದರೆ, ಅಗಸ್ಟ್ 7 ರ ಮಧ್ಯರಾತ್ರಿ 1 ಗಂಟೆಗೆ ಸೇತುವೆ ಕುಸಿದಿದ್ದು, ಮೀನುಗಾರರು ಹಾಗೂ ಪೊಲೀಸರ ಕಾರ್ಯಾಚರಣೆಯಿಂದ ಲಾರಿ ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ.

ರಾಜ್ಯದ ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ