ಇರಾನ್-ಅಮೆರಿಕ ಐತಿಹಾಸಿಕ ಒಪ್ಪಂದ: ಜಾಗತಿಕ ತೈಲ ಬೆಲೆ ಕುಸಿತ

Updated on: Jun 18, 2026 | 9:37 AM

ಅಮೆರಿಕ ಮತ್ತು ಇರಾನ್ ನಡುವಿನ ಐತಿಹಾಸಿಕ ಶಾಂತಿ ಒಪ್ಪಂದದ ನಂತರ ಹಾರ್ಮುಜ್ ಜಲಸಂಧಿಯಲ್ಲಿ ಹಡಗುಗಳ ಸಂಚಾರ ಬಿರುಸಾಗಿದೆ. ಕಚ್ಚಾತೈಲ, ಗ್ಯಾಸ್ ಟ್ಯಾಂಕರ್‌ಗಳು ಭಾರತದತ್ತ ಸಾಗುತ್ತಿದ್ದು, ಜಾಗತಿಕವಾಗಿ ತೈಲ ಬೆಲೆ ಇಳಿಕೆಯಾಗಿದೆ. ಪ್ರತಿ ಬ್ಯಾರಲ್ ಕಚ್ಚಾತೈಲ ದರ 78 ಡಾಲರ್​ಗೆ ಕುಸಿದಿದೆ. ಮುಂದಿನ ದಿನಗಳಲ್ಲಿ ಭಾರತದಲ್ಲಿ ಪೆಟ್ರೋಲ್, ಡೀಸೆಲ್ ಮತ್ತು ಸಿಎನ್‌ಜಿ ಬೆಲೆ ಇಳಿಯುವ ಸಾಧ್ಯತೆ ದಟ್ಟವಾಗಿದೆ.

ವಾಷಿಂಗ್ಟನ್, ಜೂನ್ 18: ಅಮೆರಿಕ ಮತ್ತು ಇರಾನ್ ನಡುವಿನ ದೀರ್ಘಾವಧಿಯ ಸಂಘರ್ಷಕ್ಕೆ ಅಂತ್ಯ ಹಾಡಿ, ಐತಿಹಾಸಿಕ ಶಾಂತಿ ಒಪ್ಪಂದಕ್ಕೆ ಸಹಿ ಹಾಕಲಾಗಿದೆ. ಒಪ್ಪಂದದ ನಂತರ ಹಾರ್ಮುಕ್ ಜಲಸಂಧಿಯಲ್ಲಿ ಹಡಗುಗಳ ಸಂಚಾರವು ಬಿರುಸಿನಿಂದ ಸಾಗುತ್ತಿದೆ. ಗ್ಯಾಸ್ ಮತ್ತು ಕಚ್ಚಾತೈಲ ಟ್ಯಾಂಕರ್‌ಗಳು ಭಾರತ ಸೇರಿದಂತೆ ವಿವಿಧ ರಾಷ್ಟ್ರಗಳತ್ತ ಪ್ರಯಾಣ ಬೆಳೆಸುತ್ತಿವೆ. ಅಮೆರಿಕವು ಇರಾನ್ ಮೇಲಿನ ದಿಗ್ಬಂಧನಗಳನ್ನು ತೆಗೆದುಹಾಕಿದ ತಕ್ಷಣ, ಹಡಗುಗಳ ಸಂಚಾರಕ್ಕೆ ಮುಕ್ತವಾಗಿದೆ.

ಹಾರ್ಮುಜ್ ಮೂಲಕ ಭಾರತಕ್ಕೆ 28 ಹಡಗುಗಳು ಬರುತ್ತಿದ್ದು, ಇದು ದೇಶದಲ್ಲಿ ಗ್ಯಾಸ್, ಡೀಸೆಲ್, ಪೆಟ್ರೋಲ್ ಮತ್ತು ಸಿಎನ್‌ಜಿ ಬೆಲೆಗಳಲ್ಲಿ ಗಮನಾರ್ಹ ಇಳಿಕೆಗೆ ಕಾರಣವಾಗಬಹುದು ಎಂದು ನಿರೀಕ್ಷಿಸಲಾಗಿದೆ. ಈಗಾಗಲೇ ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾತೈಲದ ದರವು ಪ್ರತಿ ಬ್ಯಾರೆಲ್‌ಗೆ 78 ಡಾಲರ್‌ಗೆ ಕುಸಿದಿದೆ. ಇದು ಕಳೆದ ಮೂರು ತಿಂಗಳಲ್ಲಿ ದಾಖಲಾದ ಕನಿಷ್ಠ ಮಟ್ಟವಾಗಿದೆ. ಅಮೆರಿಕದಲ್ಲಿ ಪ್ರತಿ ಗ್ಯಾಲನ್ ಅನಿಲದ ಬೆಲೆಯಲ್ಲಿ 4 ಡಾಲರ್‌ಗಳಷ್ಟು ಇಳಿಕೆಯಾಗಿದೆ. ಹಾರ್ಮುಜ್ ಜಲಸಂಧಿ ಸಂಪೂರ್ಣವಾಗಿ ಬಂದ್ ಆಗಿದ್ದಾಗ ಇಡೀ ವಿಶ್ವವೇ ಒಂದು ನಿರ್ಣಾಯಕ ಪರಿಸ್ಥಿತಿಯನ್ನು ಎದುರಿಸಿತ್ತು. ಈಗ ದಿಗ್ಬಂಧನಗಳು ತೆರವಾದ ನಂತರ ಹಡಗುಗಳ ಸಂಚಾರ ಮುಕ್ತವಾಗಿದ್ದು, ಭಾರತಕ್ಕೆ ತೈಲ ಪೂರೈಕೆ ಸುಗಮವಾಗಲಿದೆ.

ಈ ಒಪ್ಪಂದದ ಕುರಿತು ಮಾತನಾಡಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, 2015ರಲ್ಲಿ ಒಬಾಮಾ ಮಾಡಿಕೊಂಡಿದ್ದ ಒಪ್ಪಂದಕ್ಕಿಂತ ಇದು ಅತ್ಯಂತ ಉತ್ತಮವಾದ ಒಪ್ಪಂದ ಎಂದು ಹೇಳಿದ್ದಾರೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಇರಾನ್ ಅಧ್ಯಕ್ಷ ಮಸೂದ್ ಪೆಜಸ್ಕಿಯನ್ ಅವರು ಫ್ರಾನ್ಸ್‌ನಲ್ಲಿ ನಡೆದ ಜಿ7 ಶೃಂಗಸಭೆಯಲ್ಲಿ ಭಾಗವಹಿಸಿದ ಸಂದರ್ಭದಲ್ಲಿ ಈ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ. ಅಧಿಕೃತ ಸಹಿ ಕಾರ್ಯಕ್ರಮವು ನಾಳೆ ಸ್ವಿಟ್ಜರ್ಲೆಂಡ್‌ನ ಜಿನೇವಾದಲ್ಲಿ ನಡೆಯಲಿದೆ. ಕಳೆದ 109 ದಿನಗಳಿಂದ ನಡೆಯುತ್ತಿದ್ದ ಸಂಘರ್ಷ ಈಗ ಕೊನೆಗೊಂಡಿದೆ. ಹಾರ್ಮುಜ್ ಜಲಸಂಧಿಯಲ್ಲೂ ಯಾವುದೇ ರೀತಿಯ ಸಂಘರ್ಷವಿಲ್ಲ. ಇರಾನ್‌ನ 11 ಹಡಗುಗಳು ಈಗಾಗಲೇ ವಿವಿಧ ದೇಶಗಳಿಗೆ ಸಂಚರಿಸಿದ್ದು, ಇರಾನ್‌ಗೆ ಬರುವ ಹಡಗುಗಳು ನಿರಾತಂಕವಾಗಿ ಬಂದರುಗಳನ್ನು ತಲುಪಬಹುದಾಗಿದೆ.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published on: Jun 18, 2026 09:21 AM
Follow Us