ರವಿ ಡಿ ಚೆನ್ನಣ್ಣವರ್ ವಿರುದ್ಧ ಮಾಡಲಾಗಿರುವ ಅರೋಪಗಳ ಬಗ್ಗೆ ಸಮಂಜಸ ಉತ್ತರ ನೀಡಲಿಲ್ಲ ಗೃಹ ಸಚಿವ ಅರಗ ಜ್ಞಾನೇಂದ್ರ
ಪೊಲೀಸ್ ಇಲಾಖೆಯಲ್ಲಿ ನಿಯುಕ್ತಿ ಮತ್ತು ಮುಂಬಡ್ತಿ ಅನುಪಾತದ ಬಗ್ಗೆ ಮಾಧ್ಯಮದವರು ಪ್ರಶ್ನೆ ಕೇಳಿದಾಗ ಸರಿಯಾದ ಉತ್ತರ ನೀಡಿ, ಪೊಲೀಸ್ ಇಲಾಖೆಗೆ ಬಿಸಿರಕ್ತ ಬೇಕು ಎಂದು ಹೇಳುವ ಸಚಿವರು ರವಿ ಚೆನ್ನಣ್ಣವರ್ ಕುರಿತು ಕೇಳಿದಾಗ ತಣ್ಣನೆಯ ಪ್ರತಿಕ್ರಿಯೆ ನೀಡುತ್ತಾರೆ.
ಭ್ರಷ್ಟಾಚಾರದ ಆರೋಪದಲ್ಲಿ ಸಿಲುಕಿ ಸುದ್ದಿಯಲ್ಲಿರುವ ಹಿರಿಯ ಐಪಿಎಸ್ ಅಧಿಕಾರಿ ರವಿ ಡಿ ಚೆನ್ನಣ್ಣವರ್ (Ravi D Channannavar) ಅವರನ್ನು ರಾಜ್ಯ ಗೃಹ ಇಲಾಖೆಎ ಸಿಐಡಿ ವಿಭಾಗದಿಂದ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ಮಂಡಳಿಯ ವ್ಯವಸ್ಥಾಪಕ ನಿರ್ದೇಶಕರಾಗಿ (managing director) ವರ್ಗ ಮಾಡಿದ್ದು ಮತ್ತು ಸರ್ಕಾರ ವರ್ಗಾವಣೆ ಆದೇಶವನ್ನು ತಡೆಹಿಡಿದಿದ್ದು ಹಳೆಯ ವಿಚಾರ. ಆದರೆ ಗೃಹ ಸಚಿವ ಅರಗ ಜ್ಞಾನೇಂದ್ರ (Araga Jnanendra) ಮಾತ್ರ ರವಿ ಅವರ ಬಗ್ಗೆ ಮಾಧ್ಯಮವರು ಪ್ರಶ್ನೆ ಕೇಳಿದರೆ ಸಮಂಜಸ ಉತ್ತರ ನೀಡದೆ ನುಣುಚಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ. ಗೃಹ ಇಲಾಖೆಯ (home department) ಅದೇಶವನ್ನು ಸರ್ಕಾರ ತಡೆಹಿಡಿದಿರುವ ಅಂಶವನ್ನು ಸ್ವಲ್ಪ ಗಹನವಾಗಿ ಯೋಚಿಸಿ ನೋಡಿ. ಇದು ಸಾಮಾನ್ಯ ಸಂಗತಿಯಲ್ಲ. ಇಲ್ಲಿ ಉದ್ಭವಿಸುವ ಪ್ರಶ್ನೆಯೇನೆಂದರೆ, ಗೃಹ ಇಲಾಖೆಯು ರವಿ ಚೆನ್ನಣ್ಣವರ್ ಅವರ ವರ್ಗಾವಣೆ ಆದೇಶವನ್ನು ಸರ್ಕಾರದ ಗಮನಕ್ಕೆ ತಾರದೆ ಹೊರಡಿಸಿತೇ? ಅಥವಾ ರವಿಯವರ ವರ್ಗಾವಣೆ ನಂತರ ಮಾಧ್ಯಮ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಯಾಗಲಾರಂಭಿಸಿದ ಕಾರಣ ಮತ್ತಷ್ಟು ಮುಜುಗರಕ್ಕೆ ಒಳಗಾಗುವುದು ಬೇಡ ಅಂತ ಸರ್ಕಾರ ಆದೇಶವನ್ನು ತಡೆಯಿತೇ?
ಮೈಸೂರಲ್ಲಿ ಬುಧವಾರ ಗೃಹ ಸಚಿವ ಅರಗ ಜ್ಞಾನೇಂದ್ರ ಅವರು ರವಿ ಚೆನ್ನಣ್ಣವರ್ ಬಗ್ಗೆ ಕೇಳಿದ ಪ್ರಶ್ನೆಗಳಿಗೆ ಹಾರಿಕೆಯ ಉತ್ತರ ನೀಡಿದರು. ಪೊಲೀಸ್ ಇಲಾಖೆಯಲ್ಲಿ ನಿಯುಕ್ತಿ ಮತ್ತು ಮುಂಬಡ್ತಿ ಅನುಪಾತದ ಬಗ್ಗೆ ಮಾಧ್ಯಮದವರು ಪ್ರಶ್ನೆ ಕೇಳಿದಾಗ ಸರಿಯಾದ ಉತ್ತರ ನೀಡಿ, ಪೊಲೀಸ್ ಇಲಾಖೆಗೆ ಬಿಸಿರಕ್ತ ಬೇಕು ಎಂದು ಹೇಳುವ ಸಚಿವರು ರವಿ ಚೆನ್ನಣ್ಣವರ್ ಕುರಿತು ಕೇಳಿದಾಗ ತಣ್ಣನೆಯ ಪ್ರತಿಕ್ರಿಯೆ ನೀಡುತ್ತಾರೆ.
ಅಧಿಕಾರಿಗಳ ಕೆಲ ಸಲ ಉದ್ದೇಶಪೂರ್ವಕವಾಗಿ ಅರೋಪಗಳನ್ನು ಮಾಡಲಾಗುತ್ತದೆ. ರವಿ ಚೆನ್ನಣ್ಣವರ್ ಅವರ ವಿರುದ್ಧ ಮಾಡಿರುವ ಆರೋಪಗಳ ತನಿಖೆಯಾದ ನಂತರವೇ ಸತ್ಯ ಹೊರಬರಬೇಕು ಎಂದು ಅವರು ಹೇಳುತ್ತಾರೆ.
ಹಾಗಾದರೆ, ತನಿಖೆ ಶುರುವಾಗುವ ಮೊದಲೇ ಅವರನ್ನು ವರ್ಗಾವಣೆ ಮಾಡುವ ಅವಶ್ಯಕತೆ ಏನಿತ್ತು? ಎಂಬ ಪ್ರಶ್ನೆ ಕನ್ನಡಿಗರಲ್ಲಿ ಉದ್ಭವಿಸೋದು ಸಹಜ ತಾನೇ?