ಮಗಳ ಮರ್ಯಾದಾ ಹತ್ಯೆ ಹೆತ್ತತಂದೆ ನಡೆಸಿದರೂ ಹೆತ್ತಮ್ಮನ ಕಣ್ಣಲ್ಲಿ ಒಂದೇಒಂದು ಹನಿ ನೀರಿಲ್ಲ!

Updated on: Aug 30, 2025 | 12:04 PM

ಫರಹತಾಬಾದ್ ಪೊಲೀಸರು ಸುವೋ ಮೊಟೋ ಕೇಸ್ ದಾಖಲಿಸಿಕೊಂಡು ಶಂಕರ್ ಮತ್ತು ಅವನ ಸಹಚರರನ್ನು ದಸ್ತಗಿರಿ ಮಾಡಿದ್ದಾರೆ. ಅದಿರಲಿ, ಕೊಲೆಯಾದ ಯುವತಿ ತಾಯಿಯ ನಿರುದ್ವಿಗ್ನತೆ, ಸಮಚಿತ್ತ, ಒಂದಿಷ್ಟೂ ನೋವು, ಯಾತನೆ, ದುಃಖವಿಲ್ಲದ ಮಾತು ಆಶ್ಚರ್ಯ ಹುಟ್ಟಿಸುತ್ತದೆ. ಪ್ರೀತಿಸುವುದು ಘೋರ ಅಪರಾಧವಾಗಿಬಿಟ್ಟಿತೇ? ನಮ್ಮ ಮಗಳನ್ನು ನಾವು ಕೊಂದಿದ್ದೇವೆ ಎಂದು ಆಕೆ ನಿರ್ವಿಕಾರ ಭಾವದಿಂದ ಹೇಳುತ್ತಾಳೆ!

ಕಲಬುರಗಿ, ಆಗಸ್ಟ್ 30: ಈ ಮಹಿಳೆಯ ಹೆಸರು ಮಲ್ಲಮ್ಮ ಮತ್ತು ಈಕೆಯ 18-ವರ್ಷದ ಮಗಳನ್ನು ಗಂಡನೇ ಕೊಂದು ದೇಹವನ್ನು ಸುಟ್ಟುಹಾಕಿದ್ದಾನೆ, ಆದರೆ ಮಲ್ಲಮ್ಮನ (Mallamma) ಕಣ್ಣಲ್ಲಿ ಒಂದೇಒಂದು ಹನಿ ನೀರಿಲ್ಲ ಮತ್ತು ನಮ್ಮ ಕಲಬುರಗಿ ವರದಿಗಾರನೊಂದಿಗೆ ಏನೂ ನಡೆದೇ ಇಲ್ಲವೆಂಬಂತೆ ಮಾತಾಡುತ್ತಾಳೆ! ಜಿಲ್ಲೆಯ ಫರಹತಾಬಾದ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬರುವ ಮೇಳಕುಂದಾ ಗ್ರಾಮದಲ್ಲಿ ಕವಿತಾ ಹೆಸರಿನ ಯುವತಿ ಅನ್ಯಜಾತಿಯ ಯುವಕನೊಬ್ಬನನ್ನು ಪ್ರೀತಿಸಿದ್ದಕ್ಕೆ ಆಕೆಯ ತಂದೆ ಶಂಕರ್ ಕೊಳ್ಳೂರ್ ಹೆಸರಿನ ವ್ಯಕ್ತಿ ಶರಣು ಮತ್ತು ದತ್ತಪ್ಪ ಎಂಬ ಇಬ್ಬರೊಂದಿಗೆ ಸೇರಿ ಹೆತ್ತಮಗಳನ್ನು ಕೊಂದಿದ್ದಾನೆ. ಮಲ್ಲಮ್ಮ ಹೇಳುವ ಪ್ರಕಾರ ಕೆಲಸಕ್ಕೆ ಹೋಗಲು ತ್ರಾಣವಿಲ್ಲದಂತಾಗಿರುವ ಕುಡುಕ ಶಂಕರ್​ಗೆ ಮಗಳನ್ನು ಕೊಲ್ಲಲು ಶಕ್ತಿ ಎಲ್ಲಿಂದ ಬಂತೋ? ಐದು ಹೆಣ್ಣುಮಕ್ಕಳ ತಂದೆಯಾಗಿರುವ ಅವನು ತನ್ನ ಆಸ್ತಿಯಲ್ಲಿ ಕವಿತಾಗೆ ಸೇರಬೇಕಾಗಿದ್ದನ್ನು ಕೊಟ್ಟು ಕೈತೊಳೆದುಕೊಂಡಿದ್ದರೆ ಪಾಪದ ಹುಡುಗಿ ತಾನು ಇಷ್ಟಪಟ್ಟವನೊಂದಿಗೆ ಹೋಗಿ ಜೀವನ ಮಾಡುತ್ತಿದ್ದಳು. ಮರ್ಯಾದಾ ಹತ್ಯೆ ನಡೆಸಿ ಜೈಲು ಪಾಲಾಗುವ ಅವಶ್ಯಕತೆಯಿರಲಿಲ್ಲ.

ಇದನ್ನೂ ಓದಿ:   ‘ಜಾತಿಗಾಗಿ ಮರ್ಯಾದಾ ಹತ್ಯೆ ನಡೆದರೆ ಅದು ಹಿಂಸೆ ಅಲ್ಲ’: ನಟನ ಶಾಕಿಂಗ್​ ಹೇಳಿಕೆ ವೈರಲ್​

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ