AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸರ್ಕಾರಿ ಆಸ್ಪತ್ರೆಯ ರೆಸ್ಟ್ ರೂಮಿನಲ್ಲೇ ರಾಶಿ ರಾಶಿ ಮದ್ಯದ ಬಾಟಲಿ ಪತ್ತೆ; ಕುಡಿದ ಮತ್ತಿನಲ್ಲಿ ಆ್ಯಂಬುಲೆನ್ಸ್ ಓಡಿಸುವ ಚಾಲಕ

ಸರ್ಕಾರಿ ಆಸ್ಪತ್ರೆಯ ರೆಸ್ಟ್ ರೂಮಿನಲ್ಲೇ ರಾಶಿ ರಾಶಿ ಮದ್ಯದ ಬಾಟಲಿ ಪತ್ತೆ; ಕುಡಿದ ಮತ್ತಿನಲ್ಲಿ ಆ್ಯಂಬುಲೆನ್ಸ್ ಓಡಿಸುವ ಚಾಲಕ

ಬಸವರಾಜ್​ ಯರಗಣವಿ
| Edited By: |

Updated on: Nov 15, 2026 | 10:22 PM

Share

ಹೊಸನಗರ ತಾಲೂಕು ಸರ್ಕಾರಿ ಆಸ್ಪತ್ರೆಯ ಆ್ಯಂಬುಲೆನ್ಸ್ ಚಾಲಕ ಗಿರೀಶ್ ಕಂಠಪೂರ್ತಿ ಮದ್ಯ ಸೇವಿಸಿ ಕರ್ತವ್ಯ ನಿರ್ವಹಿಸುತ್ತಿರುವುದು ಬೆಳಕಿಗೆ ಬಂದಿದೆ. ಆಸ್ಪತ್ರೆಯ ವಿಶ್ರಾಂತಿ ಕೊಠಡಿಯಲ್ಲೇ ಖಾಲಿ ಮದ್ಯದ ಬಾಟಲಿಗಳು ಪತ್ತೆಯಾಗಿವೆ. ಕುಡಿದ ಚಾಲಕನಿಂದ ರೋಗಿಗಳ ಜೀವಕ್ಕೆ ಅಪಾಯ ಎದುರಾಗಿದ್ದು, ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಧಿಕಾರಿಗಳ ನಿರ್ಲಕ್ಷ್ಯ ಖಂಡಿಸಿ, ಚಾಲಕನ ವಜಾಗೆ ಒತ್ತಾಯ ಕೇಳಿಬಂದಿದೆ.

ಹೊಸನಗರ, ನ.15: ತುರ್ತು ಸಂದರ್ಭದಲ್ಲಿ ರೋಗಿಗಳನ್ನು ಆಸ್ಪತ್ರೆಗೆ ಕರೆತಂದು ಜೀವ ಉಳಿಸಬೇಕಾದ ಸರ್ಕಾರಿ ಆ್ಯಂಬುಲೆನ್ಸ್ ಚಾಲಕನೇ, ಕರ್ತವ್ಯದ ವೇಳೆ ಕಂಠಪೂರ್ತಿ ಮದ್ಯ ಸೇವಿಸಿ ರೋಗಿಗಳ ಪ್ರಾಣದ ಜೊತೆ ಚೆಲ್ಲಾಟವಾಡುತ್ತಿರುವ ಆಘಾತಕಾರಿ ಘಟನೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ಬೆಳಕಿಗೆ ಬಂದಿದೆ. ಆಸ್ಪತ್ರೆಯ ವಿಶ್ರಾಂತಿ ಕೊಠಡಿಯಲ್ಲೇ ರಾಶಿ ರಾಶಿ ಖಾಲಿ ಮದ್ಯದ ಬಾಟಲಿಗಳು ಪತ್ತೆಯಾಗಿದ್ದು, ಸಾರ್ವಜನಿಕರು ಹಾಗೂ ರೋಗಿಗಳ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಹೊಸನಗರ ತಾಲೂಕು ಆಸ್ಪತ್ರೆಯ ಆ್ಯಂಬುಲೆನ್ಸ್ ಚಾಲಕ ಗಿರೀಶ್ ವಿರುದ್ಧ ಈ ಗಂಭೀರ ಆರೋಪ ಕೇಳಿಬಂದಿದೆ. ಆಸ್ಪತ್ರೆಯ ಆವರಣದ ವಿಶ್ರಾಂತಿ ಕೊಠಡಿಯನ್ನೇ ಮದ್ಯಪಾನದ ಅಡ್ಡೆಯನ್ನಾಗಿ (ಬಾರ್) ಮಾಡಿಕೊಂಡಿರುವ ದೃಶ್ಯಗಳು ಸೆರೆಯಾಗಿದ್ದು, ಕೊಠಡಿಯೊಳಗೆ ರಾಶಿ ರಾಶಿ ಖಾಲಿ ಮದ್ಯದ ಬಾಟಲಿಗಳು ಪತ್ತೆಯಾಗಿವೆ. ಚಾಲಕ ಗಿರೀಶ್ ಯಾವಾಗಲೂ ಕಂಠಪೂರ್ತಿ ಮದ್ಯ ಸೇವಿಸಿ, ಮತ್ತಿನಲ್ಲೇ ಆ್ಯಂಬುಲೆನ್ಸ್ ಚಾಲನೆ ಮಾಡುತ್ತಿದ್ದಾನೆ ಎಂದು ಸ್ಥಳೀಯರು ದೂರಿದ್ದಾರೆ. ತುರ್ತು ಚಿಕಿತ್ಸೆಗೆಂದು ಆ್ಯಂಬುಲೆನ್ಸ್ ಏರುವ ರೋಗಿಗಳು ಹಾಗೂ ಅವರ ಕುಟುಂಬಸ್ಥರು ಚಾಲಕನ ಈ ಬೇಜವಾಬ್ದಾರಿ ವರ್ತನೆಯಿಂದ ಜೀವಭಯದಲ್ಲಿ ಪ್ರಯಾಣಿಸುವಂತಾಗಿದೆ. ಸರ್ಕಾರಿ ಆಸ್ಪತ್ರೆಯ ಆವರಣದಲ್ಲೇ ರಾಜಾರೋಷವಾಗಿ ಮದ್ಯ ಸೇವನೆ ನಡೆಯುತ್ತಿದ್ದರೂ, ಆಸ್ಪತ್ರೆ ಆಡಳಿತ ಮಂಡಳಿ ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಕಣ್ಮುಚ್ಚಿ ಕುಳಿತಿರುವುದು ಸಾರ್ವಜನಿಕರ ಆಕ್ರೋಶವನ್ನು ಮತ್ತಷ್ಟು ಹೆಚ್ಚಿಸಿದೆ. ಇದು ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಹಿಡಿದ ಕೈಗನ್ನಡಿಯಾಗಿದೆ ಎಂದು ಸ್ಥಳೀಯರು ಕಿಡಿಕಾರಿದ್ದಾರೆ. ಅಮಾಯಕ ರೋಗಿಗಳ ಜೀವದ ಜೊತೆ ಚೆಲ್ಲಾಟವಾಡುತ್ತಿರುವ ಕುಡುಕ ಚಾಲಕ ಗಿರೀಶ್‌ನನ್ನು ತಕ್ಷಣವೇ ಸೇವೆಯಿಂದ ವಜಾಗೊಳಿಸಬೇಕು ಎಂದು ರೋಗಿಗಳು ಹಾಗೂ ಸ್ಥಳೀಯರು ಒತ್ತಾಯಿಸಿದ್ದಾರೆ. ಇನ್ನಾದರೂ ತಾಲೂಕು ವೈದ್ಯಾಧಿಕಾರಿಗಳು ಎಚ್ಚೆತ್ತುಕೊಂಡು ಚಾಲಕನ ವಿರುದ್ಧ ಯಾವ ಕಠಿಣ ಕ್ರಮ ಕೈಗೊಳ್ಳುತ್ತಾರೆ ಎಂಬುದನ್ನು ಕಾದುನೋಡಬೇಕಿದೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಬಸವರಾಜ್​ ಯರಗಣವಿ
ಬಸವರಾಜ್​ ಯರಗಣವಿ

ಬಸವರಾಜ್ ಯರಗಣವಿಯವರು ಮೂಲತಃ ಧಾರವಾಡ ಜಿಲ್ಲೆಯವರು. ಇವರು ಟಿವಿ9 ಕನ್ನಡ ಸುದ್ದಿ ವಾಹಿನಿಯಲ್ಲಿ ವರದಿಗಾರರಾಗಿ 2008ರ ಏಪ್ರಿಲ್ ನಿಂದ ವೃತ್ತಿ ಆರಂಭಿಸಿದ್ದಾರೆ. ಉಡುಪಿ ಜಿಲ್ಲೆಯಲ್ಲಿ 3 ವರ್ಷ, ನಂತರ ಹಾವೇರಿ ಜಿಲ್ಲೆಯಲ್ಲಿ 3 ವರ್ಷ ವರದಿಗಾರಿಕೆಯ ಕೆಲಸ ನಿರ್ವಹಿಸಿದ್ದಾರೆ. ಸಧ್ಯ ಶಿವಮೊಗ್ಗ ಜಿಲ್ಲೆಯಲ್ಲಿ ಟಿವಿ9 ಕನ್ನಡ ಸುದ್ದಿ ವಾಹಿನಿಯ ಹಿರಿಯ ವರದಿಗಾರರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಜಿಲ್ಲೆಯ ರಾಜಕೀಯ, ಅಪರಾಧ, ಮಹತ್ವದ ಬೆಳವಣಿಗೆ ಹಾಗೂ ಮಾನವೀಯ ಸುದ್ದಿಗಳನ್ನು ವರದಿ ಮಾಡಿರುವ ಅನುಭವವಿದೆ.

Read More