World Tiger Day 2023: ಹೌದು ಹುಲಿಯಾ! ಕರ್ನಾಟಕಕ್ಕೆ ಒಬ್ಬರೇ ಹುಲಿ ಅದು ಸಿಎಂ ಸಿದ್ದರಾಮಯ್ಯ -ಬೆಂಬಲಿಗರ ಘೋಷಣೆ
Houdu huliya: ಕರ್ನಾಟಕದಲ್ಲಿ ಹುಲಿಗಳ ಸಂಖ್ಯೆ ಏರಿಕೆಯಾಗಿದೆ ಎಂದು ಗಮನ ಸೆಳೆದಾಗ ಸಿಎಂ ಸಿದ್ದರಾಮಯ್ಯ ಅವರು ಹೆಚ್ಚೇನೂ ಪ್ರತಿಕ್ರಿಯೆ ನೀಡಲಿಲ್ಲವಾದರೂ ಅವರ ಜೊತೆಗಿದ್ದವರು ಹೌದು ಹುಲಿಯಾ ಕರ್ನಾಟಕಕ್ಕೆ ಒಬ್ಬರೇ ಹುಲಿ- ಅದು ಸಿಎಂ ಸಿದ್ದರಾಮಯ್ಯ ಎಂದು ನಗೆಯಾಡಿದರು.
ಬೆಂಗಳೂರು: ನಿನ್ನೆ ಗುರುವಾರ (ಜುಲೈ 27) ಮಹತ್ವದ ಕಾಂಗ್ರೆಸ್ ಶಾಸಕಾಂಗ ಪಕ್ಷದ (CLP) ಸಭೆ ನಡೆಯಿತು. ಪಕ್ಷದ ಶಾಸಕರು ಪಕ್ಷದ ಒಳಗೆ ಮತ್ತು ಸರ್ಕಾರದ ಮಟ್ಟದಲ್ಲಿ ತಾವು ಎದುರಿಸುತ್ತಿರುವ ನಾನಾ ಸಮಸ್ಯೆಗಳನ್ನು ಸಭೆಯಲ್ಲಿ ಬಹಿರಂಗವಾಗಿ ಹೇಳಿಕೊಂಡಿದ್ದಾರೆ. ಆದರೆ ಶಾಸಕರಿಗೆ ಯಾವ ಅಸಮಾಧಾನವೂ ಇಲ್ಲ ಎಂದು ಸಿಎಂ ಸಿದ್ದರಾಮಯ್ಯ (Siddaramaiah) ಮತ್ತು ಡಿಸಿಎಂ ಡಿಕೆ ಶಿವಕುಮಾರ್ ಸಮರ್ಥನೆಯ ಧಾಟಿಯಲ್ಲಿ ಹೇಳಿದ್ದಾರೆ.
ಇನ್ನು ಸಭೆಯ ಬಳಿಕ ಸಿಎಂ ಸಿದ್ದರಾಮಯ್ಯ ಸುದ್ದಿಗಾರರೊಂದಿಗೆ ಮಾತನಾಡಿದರು. ಆ ವೇಳೆ ವರದಿಗಾರರು ರಾಜ್ಯದಲ್ಲಿ ಹುಲಿಗಳ ಸಂಖ್ಯೆ ಹೆಚ್ಚಾಗಿದೆ ಎಂದು ರಾಜ್ಯ ಅರಣ್ಯ ಸಚಿವ ಈಶ್ವರ್ ಖಂಡ್ರೆ ಅವರು ಕರ್ನಾಟಕದಲ್ಲಿ ಹುಲಿಗಳ ಸಂಖ್ಯೆಯಲ್ಲಿ ಏರಿಕೆಯಾಗಿದೆ ಎಂದು ತಿಳಿಸಿರುವುದಾಗಿ ಗಮನ ಸೆಳೆದರು. ಅದಕ್ಕೆ ಸಿಎಂ ಸಿದ್ದರಾಮಯ್ಯ ಅವರು ಹೆಚ್ಚೇನೂ ಪ್ರತಿಕ್ರಿಯೆ ನೀಡಲಿಲ್ಲವಾದರೂ ಅವರ ಜೊತೆಗಿದ್ದವರು ಹೌದು ಹುಲಿಯಾ (Houdu huliya) ಹುಲಿಗಳ ಸಂಖ್ಯೆ ಏರಿಕೆಯಾಗಿದೆಯಂತೆ. ಆದರೆ ಕರ್ನಾಟಕಕ್ಕೆ ಒಬ್ಬರೇ ಹುಲಿ- ಅದು ಸಿಎಂ ಸಿದ್ದರಾಮಯ್ಯ ಅವರು ನಗೆಯಾಡಿದರು. ಅಂದಹಾಗೆ ಅಂತಾರಾಷ್ಟ್ರೀಯ ಹುಲಿ ದಿನಕ್ಕೆ (International Tiger Day-2023) 2 ದಿನಗಳ ಮುನ್ನ ರಾಷ್ಟ್ರೀಯ ಪ್ರಾಣಿ ಹುಲಿ ಗಣತಿಯ ವಿವರಗಳನ್ನು ಅರಣ್ಯ ಸಚಿವ ಈಶ್ವರ್ ಖಂಡ್ರೆ ಅವರು ನಿನ್ನೆ (ಜುಲೈ 27) ಬಿಡುಗಡೆ ಮಾಡಿದ್ದಾರೆ.
ಹುಲಿಗಳ ಸಂರಕ್ಷಣೆಗಾಗಿ ಕೈಗೊಂಡ ವಿವಿಧ ಉಪಕ್ರಮಗಳಿಂದಾಗಿ ಅವುಗಳ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ್ ಖಂಡ್ರೆ (Eshwar Khandre) ಹೇಳಿದ್ದಾರೆ. ಅಂತಾರಾಷ್ಟ್ರೀಯ ಹುಲಿ ದಿನಕ್ಕೂ ಮುನ್ನ ರಾಷ್ಟ್ರೀಯ ಪ್ರಾಣಿ ಹುಲಿ ಗಣತಿಯ ವಿವರ ಬಿಡುಗಡೆ ಮಾಡಿದ ನಂತರ ಸಚಿವರು ಮಾತನಾಡಿದರು.
ರಾಷ್ಟ್ರೀಯ ಹುಲಿ ಪ್ರಾಧಿಕಾರ (NTCA) ಮಾರ್ಗಸೂಚಿ ಪ್ರಕಾರ ಪ್ರತಿ ನಾಲ್ಕು ವರ್ಷಗಳಿಗೆ ಒಮ್ಮೆ ಹುಲಿ ಗಣತಿ ಮಾಡಲಾಗುತ್ತದೆ. ಇದರ ಭಾಗವಾಗಿ ದೇಶಾದ್ಯಂತ ಆನೆ, ಮಾಂಸಹಾರಿ ಮತ್ತು ಸಸ್ಯಹಾರಿ ಪ್ರಾಣಿಗಳ ಗಣತಿಯನ್ನೂ ನಡೆಸಲಾಗುತ್ತದೆ ಎಂದು ಈಶ್ವರ್ ಖಂಡ್ರೆ ತಿಳಿಸಿದ್ದಾರೆ.
ಪಶ್ಚಿಮ ಘಟ್ಟದ ಹೆಚ್ಚಿನ ಭಾಗ ಹೊಂದಿರುವ ಕರ್ನಾಟಕವು ಹುಲಿಗಳ ಸಂರಕ್ಷಣೆಯಲ್ಲಿ ಚೂಣಿಯಲ್ಲಿದ್ದು, 2021-22ರ ಅವಧಿಯಲ್ಲಿ ಹುಲಿ ಗಣತಿಯನ್ನು ವೈಜ್ಞಾನಿಕವಾಗಿ ಹಾಗೂ ಸಮರ್ಪಕವಾಗಿ ನಡೆಸಲಾಗಿದೆ. ರಾಜ್ಯದ 5 ಹುಲಿ ಸಂರಕ್ಷಿತ ಪ್ರದೇಶಗಳಾದ ನಾಗರಹೊಳೆ, ಬಂಡೀಪುರ, ಭದ್ರಾ, ಬಿಳಿಗಿರಿರಂಗನಾಥಸ್ವಾಮಿ ದೇವಸ್ಥಾನ ಹಾಗೂ ಕಾಳಿ ಕಾನನ ಸೇರಿದಂತೆ 37 ವನ್ಯಜೀವಿ ಧಾಮಗಳಲ್ಲಿ ಒಟ್ಟು 37 ವಿಭಾಗದಲ್ಲಿ ನಡೆಸಲಾಗಿದೆ ಎಂದರು.