ಕಾರ್ತಿಕ ಮಾಸದಲ್ಲಿ ಬಿಲ್ವಾರ್ಚನೆ ಹೇಗೆ ಮಾಡಬೇಕು? ಮಹತ್ವ ಏನು? ಇಲ್ಲಿದೆ ವಿವರಣೆ

Updated on: Oct 30, 2025 | 6:56 AM

ಕಾರ್ತಿಕ ಮಾಸದಲ್ಲಿ ಶಿವನಿಗೆ ಬಿಲ್ವಪತ್ರೆ ಅರ್ಪಿಸುವುದು ಅತ್ಯಂತ ಶ್ರೇಷ್ಠ. ಇದು ಏಳು ಜನ್ಮಗಳ ಪಾಪಗಳನ್ನು ನಿವಾರಿಸಿ, ಆಸೆಗಳನ್ನು ಈಡೇರಿಸುತ್ತದೆ. ಬಿಲ್ವಪತ್ರೆಯನ್ನು ಶ್ರೀವೃಕ್ಷವೆಂದು ಕರೆಯಲಾಗಿದ್ದು, ಇದು ಬ್ರಹ್ಮ-ವಿಷ್ಣು-ಮಹೇಶ್ವರ ಹಾಗೂ ಮಹಾಲಕ್ಷ್ಮಿಯ ಆವಾಸಸ್ಥಾನವಾಗಿದೆ. ಸಕಲ ಸಮಸ್ಯೆಗಳ ನಿವಾರಣೆಗಾಗಿ ಈ ಮಾಸದಲ್ಲಿ ಬಿಲ್ವಾರ್ಚನೆ ಮಾಡುವುದು ಪುಣ್ಯಕರ.

ಕಾರ್ತಿಕ ಮಾಸವು ಧಾರ್ಮಿಕ ಆಚರಣೆಗಳಲ್ಲಿ ವಿಶೇಷ ಪ್ರಾಮುಖ್ಯತೆಯನ್ನು ಪಡೆದಿದೆ. ಈ ಪವಿತ್ರ ಮಾಸದಲ್ಲಿ ಶಿವನಿಗೆ ಬಿಲ್ವಪತ್ರೆಯನ್ನು ಅರ್ಪಿಸುವುದಕ್ಕೆ ಅಗಾಧವಾದ ಮಹತ್ವವಿದೆ. ಆ ಕುರಿತು ಖ್ಯಾತ ವಾಸ್ತು ತಜ್ಞ ಹಾಗೂ ಜ್ಯೋತಿಷಿ ಡಾ. ಬಸವರಾಜ ಗುರೂಜಿ ‘ಟಿವಿ9’ ಡಿಜಿಟಲ್​ನ ‘ನಿತ್ಯ ಭಕ್ತಿ’ ಕಾರ್ಯಕ್ರಮದಲ್ಲಿ ವಿವರಣೆ ನೀಡಿದ್ದಾರೆ. ಪೌರಾಣಿಕ ಗ್ರಂಥಗಳ ಪ್ರಕಾರ, ಕೇವಲ ಒಂದು ಬಿಲ್ವಪತ್ರೆಯನ್ನು ಭಕ್ತಿಯಿಂದ ಶಿವನಿಗೆ ಸಮರ್ಪಿಸಿದರೆ, ಏಳು ಜನ್ಮಗಳ ಪಾಪಗಳು ನಾಶವಾಗುತ್ತವೆ ಮತ್ತು ಸಮಸ್ತ ಆಸೆ-ಆಕಾಂಕ್ಷೆಗಳು ಈಡೇರುತ್ತವೆ. ಬಿಲ್ವಪತ್ರೆಯನ್ನು ಶ್ರೀವೃಕ್ಷ ಎಂದೂ ಕರೆಯಲಾಗುತ್ತದೆ. ಇದರ ತ್ರಿದಳವು (ಮೂರು ಎಲೆಗಳು) ಬ್ರಹ್ಮ, ವಿಷ್ಣು ಮತ್ತು ಮಹೇಶ್ವರರ ಸ್ವರೂಪವೆಂದು ನಂಬಲಾಗಿದೆ. ಹಾಗೆಯೇ, ಈ ಪತ್ರೆಯು ಶಿವನಿಗೆ ಪ್ರಿಯವಾದಷ್ಟೇ, ಮಹಾಲಕ್ಷ್ಮಿಗೂ ಅತ್ಯಂತ ಪ್ರಿಯವಾದುದು. ಕಾರ್ತಿಕ ಮಾಸದಲ್ಲಿ ಬಿಲ್ವಪತ್ರೆಗೆ ಗಂಧವನ್ನು ಲೇಪಿಸಿ, ಓಂ ಎಂದು ಬರೆದು ಶಿವಲಿಂಗಕ್ಕೆ ಅಥವಾ ಶಿವನ ಚಿತ್ರಕ್ಕೆ ಅರ್ಪಿಸುವುದರಿಂದ ಶಿವನ ಕೃಪೆಗೆ ಪಾತ್ರರಾಗಬಹುದು. ಇದು ಅಪಮೃತ್ಯುವಿನಿಂದ ರಕ್ಷಣೆ, ಉತ್ತಮ ಆರೋಗ್ಯ ಮತ್ತು ಯಶಸ್ಸನ್ನು ತರುತ್ತದೆ. ಬಿಲ್ವಪತ್ರೆ ಕಿತ್ತುವಿಕೆಗೂ ಕೆಲವು ನಿಯಮಗಳಿದ್ದು, ಅಮಾವಾಸ್ಯೆ, ಹುಣ್ಣಿಮೆ, ಮಕರ ಸಂಕ್ರಾಂತಿ ಮತ್ತು ಏಕಾದಶಿಯಂದು ಹಾಗೂ ರಾತ್ರಿ ಸಮಯದಲ್ಲಿ ಕಿತ್ತುವುದು ಸೂಕ್ತವಲ್ಲ. ಸೂರ್ಯೋದಯದ ಸಮಯದಲ್ಲಿ ಬಿಲ್ವಪತ್ರೆ ಕಿತ್ತುವುದು ಉತ್ತಮ ಎಂದು ಗುರೂಜಿ ತಿಳಿಸಿದ್ದಾರೆ.