ಹುಬ್ಬಳ್ಳಿ ನೇಹಾ ಕೊಲೆ ಪ್ರಕರಣ: ತಂದೆ ಕೊಲೆಗೂ ಯತ್ನಿಸಿದ್ದ ಫಯಾಜ್, ಕ್ಷಮೆ ಬೇಡ ಗಲ್ಲಿಗೇರಿಸಿ ಎಂದ ನಿರಂಜನ ಹಿರೇಮಠ

|

Updated on: Apr 20, 2024 | 1:04 PM

‘ನಿಮ್ಮ ಮಗ ದಾರಿ ತಪ್ಪಿರುವ ಬಗ್ಗೆ ನಮಗೆ ಮಾಹಿತಿ ನೀಡಲಿಲ್ಲ. ನಮಗೆ ಎಚ್ಚರಿಕೆ ನೀಡುವ ಕೆಲಸವನ್ನು ಮಾಡಲಿಲ್ಲ. ಈಗ ಎಲ್ಲ ನಡೆದು ಹೋದ ಮೇಲೆ ಕ್ಷಮೆ ಕೇಳುತ್ತಿದ್ದೇವೆ ಎಂದರೆ ಏನು ಉಪಯೋಗ. ಆತನನ್ನು ಜಾಮೀನಿನ ಮೇಲೆ ಬಿಡಿಸಿ ಕರೆದುಕೊಂಡು ಬಂದು ಹತ್ಯೆ ಮಾಡಿ, ಇಲ್ಲವೇ ನೇಣಿಗೆ ಹಾಕಿ’ ಎಂದು ನಿರಂಜನ್ ಹಿರೇಮಠ ಆಗ್ರಹಿಸಿದ್ದಾರೆ.

ಹುಬ್ಬಳ್ಳಿ, ಏಪ್ರಿಲ್ 20: ಹುಬ್ಬಳ್ಳಿಯ (Hubballi) ಬಿವಿಬಿ ಕಾಲೇಜು ಆವರಣದಲ್ಲಿ ನಡೆದ ವಿದ್ಯಾರ್ಥಿನಿ ನೇಹಾ ಕೊಲೆ ಪ್ರಕರಣಕ್ಕೆ (Neha Hiremath Murder) ಸಂಬಂಧಪಟ್ಟಂತೆ ಆರೋಪಿ ಫಯಾಜ್ ತಾಯಿ ರಾಜ್ಯದ ಜನರ ಮತ್ತು ಸಂತ್ರಸ್ತೆಯ ಪೋಷಕರ ಕ್ಷಮೆ ಕೇಳಿದ್ದಾರೆ. ಆದರೆ ಫಯಾಜ್ ಕುಟುಂಬದವರ ವಿರುದ್ಧ ನೆಹಾ ತಂದೆ ನಿರಂಜನ ಹಿರೇಮಠ (Niranjan Hiremath) ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಫಯಾಜ್ ಆಸ್ತಿ ವಿಚಾರಕ್ಕೆ ಸಂಬಂಧಪಟ್ಟಂತೆ ಆತನ ತಂದೆಯನ್ನೇ ಕೊಲೆ ಮಾಡಲು ಯತ್ನಿಸಿದ್ದ ಎಂಬುದು ತಿಳಿದುಬಂದಿದೆ. ಈ ವಿಚಾರ ಹಾಗೂ ನೇಹಾಳನ್ನು ಪ್ರೀತಿಸುತ್ತಿದ್ದ ವಿಚಾರ ಮೊದಲೇ ತಿಳಿಸಬಹುದಿತ್ತಲ್ಲವೇ? ಒಂದು ವೇಳೆ ಮೊದಲೇ ಈ ವಿಷಯ ತಿಳಿಸಿದ್ದರೆ ನಾವು ಎಚ್ಚೆತ್ತುಕೊಂಡು ಮಗಳ ರಕ್ಷಣೆ ಮಾಡುತ್ತಿದ್ದೆವಲ್ಲವೇ? ಅದರ ಬದಲು ಈಗ ಕ್ಷಮೆ ಕೇಳುತ್ತಿದ್ದೇನೆ ಎಂದರೆ ಏನು ಪ್ರಯೋಜನ ಎಂದು ಹಿರೇಮಠ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮಗ ಹಲ್ಲೆ ಮಾಡಿದ್ದು ಮತ್ತು ಕೊಲೆ ಯತ್ನ ನಡೆಸಿದ ವಿಚಾರವಾಗಿ ಫಯಾಜ್ ತಂದೆಯೇ ಪೊಲೀಸರ ಮೊರೆ ಹೋಗಿದ್ದರು. ಆತನನ್ನು ಠಾಣೆಗೆ ಕರೆಸಿಕೊಂಡಿದ್ದ ಪೊಲೀಸರು, ಮತ್ತೆ ಹಲ್ಲೆ ಮಾಡಿದರೆ ಜೈಲಿಗೆ ಕಳುಹಿಸುವುದಾಗಿ ಎಚ್ಚರಿಕೆ ನೀಡಿ ಮುಚ್ಚಳಿಕೆ ಬಳಸಿಕೊಂಡು ಕಳುಹಿಸಿಕೊಟ್ಟಿದ್ದರು. ಆಗಲೇ ಆತನ ವಿರುದ್ಧ ಕ್ರಮ ಕೈಗೊಂಡಿದ್ದರೆ ಆತ ಇಷ್ಟು ಮುಂದುವರಿಯುತ್ತಿದ್ದನೇ? ಅಥವಾ ಈ ಬಗ್ಗೆ ನಮಗೆ ಮಾಹಿತಿ ನೀಡಿದ್ದರೆ ನಾವೇ ಮುನ್ನೆಚ್ಚರಿಕೆ ವಹಿಸುತ್ತಿದ್ದೆವಲ್ಲವೇ ಎಂದು ಹಿರೇಮಠ ಪ್ರಶ್ನಿಸಿದ್ದಾರೆ.

‘ಶಿಕ್ಷಣ ಕ್ಷೇತ್ರದಲ್ಲಿ ನೀವಿಬ್ಬರೂ ಇದ್ದರೂ ಕೂಡ ನಿಮ್ಮ ಮಗ ದಾರಿ ತಪ್ಪಿರುವ ಬಗ್ಗೆ ನಮಗೆ ಮಾಹಿತಿ ನೀಡಲಿಲ್ಲ. ನಮಗೆ ಎಚ್ಚರಿಕೆ ನೀಡುವ ಕೆಲಸವನ್ನು ಮಾಡಲಿಲ್ಲ. ಈಗ ಎಲ್ಲ ನಡೆದು ಹೋದ ಮೇಲೆ ಕ್ಷಮೆ ಕೇಳುತ್ತಿದ್ದೇವೆ ಎಂದರೆ ಏನು ಉಪಯೋಗ’ ಎಂದು ಹಿರೇಮಠ ಪ್ರಶ್ನಿಸಿದರು.

ಇದನ್ನೂ ಓದಿ: ನನ್ನ ಮಗನಿಗೆ ನೇಹಾ ಪ್ರಪೋಸ್​ ಮಾಡಿದ್ದಳು: ಆರೋಪಿ ಫಯಾಜ್ ತಾಯಿ, ವಿಡಿಯೋ ನೋಡಿ

ಕೇವಲ ಕ್ಷಮೆ ಕೇಳುವುದರಿಂದ ಏನೂ ಉಪಯೋಗವಿಲ್ಲ. ಫಯಾಜ್ ಅನ್ನು ಜಾಮೀನು ಕೊಡಿಸಿ ಕರೆದುಕೊಂಡು ಬಂದು ನಮ್ಮ ಮಗಳನ್ನು ಹತ್ಯೆ ಮಾಡಿದ ರೀತಿಯಲ್ಲಿ ಬರ್ಬರವಾಗಿ ಕೊಲೆ ಮಾಡಿ. ಅಲ್ಲವಾದಲ್ಲಿ ನೇಣಿಗೇರಿಸಿ. ಆಗ ಮಾತ್ರ ಮಗಳ ಆತ್ಮಕ್ಕೆ ಶಾಂತಿ ಸಿಗಲು ಸಾಧ್ಯ. ಅದು ಬಿಟ್ಟು ಕ್ಷಮೆ ಎಂದರೆ ಏನು ಉಪಯೋಗವಿಲ್ಲ ಎಂದು ಹಿರೇಮಠ ವಾಗ್ದಾಳಿ ನಡೆಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Follow us on