ನೇಹಾ ಹಂತಕ ಫಯಾಜ್‌ನನ್ನ ಅಜ್ಞಾತ ಸ್ಥಳಕ್ಕೆ ಕರೆದೊಯ್ದ ಸಿಐಡಿ ಅಧಿಕಾರಿಗಳು

ನೇಹಾ ಹಂತಕ ಫಯಾಜ್‌ನನ್ನ ಅಜ್ಞಾತ ಸ್ಥಳಕ್ಕೆ ಕರೆದೊಯ್ದ ಸಿಐಡಿ ಅಧಿಕಾರಿಗಳು

ಕಿರಣ್ ಹನುಮಂತ್​ ಮಾದಾರ್
|

Updated on: Apr 24, 2024 | 9:35 PM

ಹುಬ್ಬಳ್ಳಿಯ ನೇಹಾ ಹಿರೇಮಠ ಕೊಲೆ ಪ್ರಕರಣದ ವಿಷಯದಲ್ಲಿ ಸಾಕಷ್ಟು ಆಕ್ರೋಶಗಳು ವ್ಯಕ್ತವಾದ ಹಿನ್ನೆಲೆಯಲ್ಲಿ ಇಡೀ ಪ್ರಕರಣವನ್ನು ಸರ್ಕಾರ ಸಿಐಡಿ ತನಿಖೆಗೊಳಪಡಿಸಿದೆ. ಈ ಹಿನ್ನೆಲೆಯಲ್ಲಿ ಆರೋಪಿ ಫಯಾಜ್​ನನ್ನು ಆರು ದಿನಗಳ ಕಾಲ ತನ್ನ ವಶಕ್ಕೆ ಪಡೆದಿರುವ ಸಿಐಡಿ ಅಧಿಕಾರಿಗಳು, ಕ್ರೈಂ ನಡೆದ ಸ್ಥಳಕ್ಕೆ ಫಯಾಜ್ ಕರೆತಂದು ಮಹಜರು ಮಾಡೋ ಮೂಲಕ ಪ್ರಕರಣದ ತನಿಖೆಗೆ ಫಿಲ್ಡ್ ಗಳಿದಿದ್ದಾರೆ. 

ಹುಬ್ಬಳ್ಳಿ, ಏ.24: ಬಿವಿಬಿ ಕಾಲೇಜ್​ನಲ್ಲಿ ವಿದ್ಯಾರ್ಥಿನಿ ನೇಹಾ ಹಿರೇಮಠಳನ್ನು ಆರೋಪಿ ಫಯಾಜ್(Fayaz) ಚಾಕುವಿನಿಂದ ಚುಚ್ಚಿ ಚುಚ್ಚಿ ಕೊಲೆ ಮಾಡಿದ್ದ ಪ್ರಕರಣ ಇಡೀ ದೇಶಾದ್ಯಂತ ಸದ್ದು ಮಾಡಿತ್ತು. ಆರೋಪಿ ಫಯಾಜ್ ವಿರುದ್ಧ ಸಾಕಷ್ಟು ಆಕ್ರೋಶಗಳು ವ್ಯಕ್ತವಾಗಿದ್ದವು. ಪೊಲೀಸರು ಆರೋಪಿಯನ್ನು ಬಂಧಿಸಿದ್ದರೂ ಈ ಪ್ರಕರಣ ರಾಜಕೀಯ ತಿರುವು ಪಡೆದುಕೊಂಡಿತ್ತು. ರಾಜ್ಯ ಸರ್ಕಾರದ ಮೇಲೆ ಬಿಜೆಪಿ ಹರಿಹಾಯ್ದಿದ್ದರು. ಈ ಹಿನ್ನೆಲೆ ಸರ್ಕಾರ ಇಡೀ ಪ್ರಕರಣವನ್ನು ಸಿಐಡಿಗೆ ವಹಿಸಿತ್ತು. ಅದರಂತೆ ಇಂದು (ಏ.24) ಸಿಐಡಿ ಅಧಿಕಾರಿಗಳು, ಆರೋಪಿ ಫಯಾಜ್​ನನ್ನು ನ್ಯಾಯಾಂಗ ಬಂಧನದಿಂದ ಆರು ದಿನಗಳ ಕಾಲ ತಮ್ಮ ವಶಕ್ಕೆ ತೆಗೆದುಕೊಂಡಿದ್ದು ತನಿಖೆ ಆರಂಭಿಸಿದ್ದಾರೆ.

ರಹಸ್ಯ ಸ್ಥಳದಲ್ಲಿಟ್ಟು ವಿಚಾರಣೆ

ಸಿಐಡಿ ಎಸ್ಪಿ ವೆಂಕಟೇಶ ಮತ್ತು ಡಿವೈಎಸ್ಪಿ ಎಂ.ಎಚ್. ಪೈಕ್ ನೇತೃತ್ವದಲ್ಲಿ ಧಾರವಾಡ ಕಾರಾಗೃಹಕ್ಕೆ ಬಂದ ಸಿಐಡಿ ಅಧಿಕಾರಿಗಳು, ಭಾರೀ ಭದ್ರತೆಯಲ್ಲಿ ಆರೋಪಿ ಫಯಾಜ್ ನನ್ನು ವಶಕ್ಕೆ ಪಡೆದುಕೊಂಡರು. ಜೈಲಿನೊಳಗೆ ತಮ್ಮ ವಾಹನ ತೆಗೆದುಕೊಂಡು ಹೋಗಿ, ಫಯಾಜ್​ನನ್ನು ಹೊರ ತಂದ ಸಿಐಡಿ ಅಧಿಕಾರಿಗಳು, ಪೊಲೀಸ್ ಹೆಡ್ ಕ್ವಾರ್ಟರ್ಸ್ ನಲ್ಲಿರೋ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಆರೋಗ್ಯ ತಪಾಸಣೆ ಮಾಡಿಸಿದರು. ಬಳಿಕ ಭಾರೀ ಭದ್ರತೆಯಲ್ಲಿ ಕೃತ್ಯ ನಡೆದಿದ್ದ ಬಿವಿಬಿ ಕ್ಯಾಂಪಸ್ಗೆ ಕರೆತಂದಾಗ, ಖುದ್ದು ಸ್ಥಳ ಮಹಜರು ಮಾಡುವುದಕ್ಕೆ ಸಿಐಡಿ ಎಡಿಜಿಪಿ ಬಿ.ಕೆ. ಸಿಂಗ್ ಅವರೇ ಬಂದಿದ್ದರು.  ಸದ್ಯ ಫಯಾಜ್ ನನ್ನು ರಹಸ್ಯ ಸ್ಥಳದಲ್ಲಿಟ್ಟು ವಿಚಾರಣೆಗೊಳಪಡಿಸಲಿರೋ ಸಿಐಡಿ, ನೇಹಾ ಕೊಲೆ ಮಾಡೋದಕ್ಕೆ ಫಯಾಜ್ ಹೇಗೆಲ್ಲ ಪ್ಲ್ಯಾನ್ ಮಾಡಿಕೊಂಡಿದ್ದ? ಎಷ್ಟು ದಿನಗಳಿಂದ ಸ್ಕೇಚ್ ಹಾಕಿದ್ದ? ಇದಕ್ಕೆ ಮತ್ತೆ ಯಾರಾದ್ರೂ ಈತನಿಗೆ ಸಾಥ್ ನೀಡಿದ್ರಾ? ಎಂಬುದು ಸೇರಿದಂತೆ ವಿವಿಧ ಆಯಾಮಗಳಲ್ಲಿ ಸಿಐಡಿ ತನಿಖೆ ನಡೆಸಲಿದೆ.

ರಾಜ್ಯದ ಮತ್ತಷ್ಟು ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್  ಮಾಡಿ