ಎಕ್ಸಿಟ್ ಪೋಲ್ ಸಮೀಕ್ಷೆಗಳಲ್ಲಿ ನಂಬಿಕೆಯಿಲ್ಲ, ಯುಪಿವೊಂದನ್ನು ಬಿಟ್ಟು ಉಳಿದ 4 ರಾಜ್ಯಗಳಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ: ಶಿವಕುಮಾರ

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Mar 08, 2022 | 4:08 PM

ಮಂಗಳವಾರ ಸಾಯಂಕಾಲ ತಾನು ಗೋವಾಗೆ ಹೋಗುತ್ತಿರುವುದಾಗಿ ಶಿವಕುಮಾರ ಹೇಳಿದರು. ಈ ಪುಟ್ಟ ರಾಜ್ಯದಲ್ಲಿ ಸರ್ಕಾರ ರಚಿಸುವ ಬಗ್ಗೆ ಕಾಂಗ್ರೆಸ್ ಪಕ್ಷಕ್ಕೆ ಅಷ್ಟೊಂದು ಆತ್ಮವಿಶ್ವಾಸ ಇದೆಯೇ? ಎಂಬ ಪ್ರಶ್ನೆ ನಮ್ಮ ಮನಸ್ಸಿನಲ್ಲಿ ಹುಟ್ಟುವುದು ಸಹಜವೇ.

ಸೋಮವಾರ ಬಿತ್ತರಗೊಂಡ ಎಕ್ಸಿಟ್ ಪೋಲ್ (Exit Poll) ಸಮೀಕ್ಷೆಗಳ ಪ್ರಕಾರ ಪಂಜಾಬ್ (Punjab) ಒಂದನ್ನು ಬಿಟ್ಟು ವಿಧಾನಸಭೆಗೆ ಚುನಾವಣೆಗಳು (Assembly Polls) ನಡೆದ ಉಳಿದ ನಾಲ್ಕು ರಾಜ್ಯಗಳಲ್ಲಿ ಬಿಜೆಪಿ ಅಧಿಕಾರ ಉಳಿಸಿಕೊಳ್ಳಲಿದೆ. ಹಲವಾರು ಸಮೀಕ್ಷೆಗಳು ಉತ್ತರ ಪ್ರದೇಶ, ಉತ್ತರಾಖಂಡ, ಮಣಿಪುರ ಮತ್ತು ಗೋವಾನಲ್ಲಿ ಬಿಜೆಪಿ ಮೇಲುಗೈ ಸಾಧಿಸಿಲಿದೆ ಎಂದು ಹೇಳಿವೆ ಮತ್ತು ಪಂಜಾಬನಲ್ಲಿ ಆಪ್ ಮೊದಲ ಬಾರಿಗೆ ಗದ್ದುಗೆ ಏರಲಿದೆ ಎಂದು ಹೇಳಿವೆ. ಓಕೆ, ಇತ್ತ ಕರ್ನಾಟಕದಲ್ಲಿ ಕಾಂಗ್ರೆಸ್ ನಾಯಕರ ನಂಬುಗೆ ಮತ್ತು ಅನಿಸಿಕೆ ಎಕ್ಸಿಟ್ ಪೋಲ್​ಗಳ ಸಮೀಕ್ಷೆಗೆ ತದ್ವಿರುದ್ಧವಾಗಿದೆ. ಮಂಗಳವಾರ ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತಾಡಿದ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಡಿಕೆ ಶಿವಕುಮಾರ ಅವರು ಉತ್ತರ ಪ್ರದೇಶವೊಂದನ್ನು ಬಿಟ್ಟು ಉಳಿದ 4 ರಾಜ್ಯಗಳಲ್ಲಿ ತಮ್ಮ ಪಕ್ಷ ಅಧಿಕಾರಕ್ಕೆ ಬರಲಿದೆ ಎಂದು ಹೇಳಿದರು.

ಪಕ್ಕದ ರಾಜ್ಯ ಗೋವಾನಲ್ಲಿ ಕರ್ನಾಟಕದ ಕಾಂಗ್ರೆಸ್ ನಾಯಕರು ಅತ್ಯಂತ ಬಿರುಸಿನ ಪ್ರಚಾರ ಮಾಡಿದ್ದಾರೆ, ತಾವು ಸಹ ಅಲ್ಲಿಗೆ ಪ್ರಚಾರಕ್ಕೆ ಹೋಗಿದ್ದಾಗಿ ಶಿವಕುಮಾರ ಹೇಳಿದರು. 5 ರಾಜ್ಯಗಳ ವಿಧಾನ ಸಭಾ ಚುನಾವಣೆ ಫಲಿತಾಂಶಗಳು ಮಾರ್ಚ್ 10 ರಂದು ಅಂದರೆ ಗುರುವಾರ ಘೋಷಣೆಯಾಗಲಿವೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಹೈಕಮಾಂಡ್ ಶಿವಕುಮಾರ ಅವರಿಗೆ ಗೋವಾಗೆ ತೆರಳಲು ಸೂಚನೆ ನೀಡಿದೆಯಂತೆ.

ಮಂಗಳವಾರ ಸಾಯಂಕಾಲ ತಾನು ಗೋವಾಗೆ ಹೋಗುತ್ತಿರುವುದಾಗಿ ಶಿವಕುಮಾರ ಹೇಳಿದರು. ಈ ಪುಟ್ಟ ರಾಜ್ಯದಲ್ಲಿ ಸರ್ಕಾರ ರಚಿಸುವ ಬಗ್ಗೆ ಕಾಂಗ್ರೆಸ್ ಪಕ್ಷಕ್ಕೆ ಅಷ್ಟೊಂದು ಆತ್ಮವಿಶ್ವಾಸ ಇದೆಯೇ? ಎಂಬ ಪ್ರಶ್ನೆ ನಮ್ಮ ಮನಸ್ಸಿನಲ್ಲಿ ಹುಟ್ಟುವುದು ಸಹಜವೇ. ಚುನಾವಣೆಗೆ ಮೊದಲು ಗೋವಾನಲ್ಲಿ ನಡೆದ ಕೆಲ ರಾಜಕೀಯ ಬೆಳವಣಿಗೆಗಳನ್ನು ನೋಡಿದರೆ, ಗೊಂದಲವಂತೂ ಮೂಡುತ್ತದೆ.

ಯಾಕೆಂದರೆ, ಟಿಕೆಟ್ ಸಿಗುತ್ತದೆಂಬ ನಿರೀಕ್ಷೆಯಲ್ಲಿದ್ದ ಹಲವು ನಾಯಕರು ಅದು ದೊರಕದೆ ಹೋದಾಗ ಎದುರಾಳಿ ಪಕ್ಷ ಸೇರಿ ಟಿಕೆಟ್ ಗಿಟ್ಟಿಸಿ ಸ್ಪರ್ಧಿಸಿದ್ದಾರೆ. ಹಾಗಾಗಿ, ಅಲ್ಲಿನ ಮತದಾರರೂ ಗೊಂದಲದಲ್ಲಿದ್ದರು.

ಇದನ್ನೂ ಓದಿ:   Exit Polls 2022: ಉತ್ತರ ಪ್ರದೇಶದಲ್ಲಿ ಮತ್ತೆ ಯೋಗಿ ದರ್ಬಾರ್, ಪಂಜಾಬ್​ನಲ್ಲಿ ಆಮ್ ಆದ್ಮಿ; ಪಂಚ ರಾಜ್ಯಗಳ ಚುನಾವಣೋತ್ತರ ಸಮೀಕ್ಷೆ ಹೀಗಿದೆ