ಬಸ್ ಕಂಡಕ್ಟರ್ ವಿರುದ್ಧ ಉದ್ದೇಶಪೂರ್ವಕವಾಗಿ ಪೋಕ್ಸೋ ಕೇಸ್ ದಾಖಲಿಸಲಾಗಿದೆ ಅನಿಸುತ್ತಿದೆ: ಉಮಾಶ್ರೀ

Updated on: Feb 24, 2025 | 7:58 PM

ಕಂಡಕ್ಟರ್ ವಿರುದ್ಧ ಉದ್ದೇಶಪೂರ್ವಕವಾಗಿ ಪೋಕ್ಸೋ ಕೇಸನ್ನು ದಾಖಲಿಸಲಾಗಿದೆ ಅನ್ನೋದು ತನ್ನ ಸ್ವಂತ ಅಭಿಪ್ರಾಯ ಎಂದು ಹೇಳಿದ ಉಮಾಶ್ರೀ, ಕಂಡಕ್ಟರ್ ವಯಸ್ಸನ್ನು ಗಮನಿಸಿದರೆ ಅವರಿಂದ ಅಂತ ಪ್ರಮಾದ ಜರುಗಿಲ್ಲವೆನ್ನೋದು ಮೇಲ್ನೋಟಕ್ಕೆ ಗೊತ್ತಾಗುತ್ತದೆ, ಯಾರನ್ನೋ ಸಂತೋಷಡಿಸಲು ಕೇಸು ದಾಖಲಿಸಿರುವಂತಿದೆ, ಗೃಹ ಸಚಿವರು ತನಿಖೆ ನಡೆಸಿ ಪೊಲೀಸ್ ಅಧಿಕಾರಿ ತಪ್ಪು ನಡೆಸಿದ್ದು ಕಂಡು ಬಂದರೆ ಅವನನ್ನು ಅಮಾನತುಗೊಳಿಸಬೇಕು ಎಂದರು.

ಬೆಳಗಾವಿ: ಮೊನ್ನೆ ಕೆಎಸ್ಸಾರ್ಟಿಸಿ ಬಸ್ಸೊಂದರಲ್ಲಿ ಮರಾಠಿ ಭಾಷಿಕ ಪುಂಡರಿಂದ ಹಲ್ಲೆಗೊಳಗಾದ ಬಸ್ ಕಂಡಕ್ಟರನ್ನು ಆಸ್ಪತ್ರೆಯಲ್ಲಿ ಭೇಟಿಯಾದ ಬಳಿಕ ಮಾಧ್ಯಮಗಳೊಂದಿಗೆ ಮಾತಾಡಿದ ವಿಧಾನ ಪರಿಷತ್ ಸದಸ್ಯೆ ಉಮಾಶ್ರೀ, ಕನ್ನಡಿಗರಿಗೆ ತಮ್ಮ ಮಾತೃಭಾಷೆಯ ಮೇಲೆ ಗೌರವ, ಪ್ರೀತಿ ಇರುವಂತೆ ಮರಾಠಿ ಭಾಷಿಕರಿಗೂ ತಮ್ಮ ಮಾತೃಭಾಷೆಯ ಮೇಲೆ ಪ್ರೀತಿ ಇರಬಹುದು, ಅದರೆ ಅವರು ವಾಸಮಾಡುತ್ತಿರೋದು ಕರ್ನಾಟಕದಲ್ಲಿ ಮತ್ತು ಇಲ್ಲಿ ಕನ್ನಡವೇ ಆಡಳಿತ ಭಾಷೆ ಅನ್ನೋದನ್ನು ಮರೆಯಬಾರದು ಎಂದು ಹೇಳಿದರು. ನನಗೆ ಮರಾಠಿ ಬರಲ್ಲ, ಕನ್ನಡದಲ್ಲಿ ಮಾತಾಡಿ ಅಂತ ಕಂಡಕ್ಟರ್ ಹೇಳಿದ್ದರೆ ಅದರಲ್ಲಿ ತಪ್ಪೇನೂ ಇಲ್ಲ, ಅವರೊಬ್ಬ ಸರ್ಕಾರೀ ನೌಕರ, ಹಲ್ಲೆಕೋರರು ಮನೆಯಲ್ಲಿ ಯಾವ ಭಾಷೆಯನ್ನಾದರೂ ಮಾತಾಡಿಕೊಳ್ಳಲಿ, ಅದರೆ ಹೊರಗಡೆ ಬಂದಾಗ ಅವರು ಕನ್ನಡದಲ್ಲೇ ವ್ಯವಹರಿಸಬೇಕು, ಈ ದುಷ್ಕೃತ್ಯವನ್ನು ಕಠೋರವಾಗಿ ಖಂಡಿಸುತ್ತೇನೆ ಮತ್ತು ತಪ್ಪಿತಸ್ಥರಿಗೆ ತಮ್ಮ ಸರ್ಕಾರ ಸೂಕ್ತವಾದ ಶಿಕ್ಷೆಗೆ ಗುರಿ ಮಾಡುತ್ತದೆ ಎಂಬ ವಿಶ್ವಾಸ ತನಗಿದೆ ಎಂದು ಉಮಾಶ್ರೀ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ: ಮರಾಠಿ ಯುವಕರಿಂದ ಗೂಂಡಾಗಿರಿ: ಕನ್ನಡ ಮಾತನಾಡು ಅಂದಿದ್ದಕ್ಕೆ ಕಂಡಕ್ಟರ್​​ ಮೇಲೆ ಹಲ್ಲೆ

Published on: Feb 24, 2025 07:56 PM