ಮತಕ್ಕಾಗಿ ಟೋಪಿ ಧರಿಸುವ ಅನಿವಾರ್ಯತೆ ಬಂದರೆ ತಲೆಯನ್ನೇ ಕತ್ತರಿಸಿಕೊಳ್ಳುತ್ತೇನೆ; ಕೇಂದ್ರ ಸಚಿವ ವಿವಾದಾತ್ಮಕ ಹೇಳಿಕೆ

Updated on: Nov 07, 2025 | 6:49 PM

ಒಂದುವೇಳೆ ಮತಕ್ಕಾಗಿ ಟೋಪಿ ಧರಿಸುವ ಅಗತ್ಯ ಬಂದರೆ ನಾನು ನನ್ನ ತಲೆಯನ್ನೇ ಕತ್ತರಿಸುತ್ತೇನೆ ಎಂಬ ಕೇಂದ್ರ ಸಚಿವ ಬಂಡಿ ಸಂಜಯ್ ಕುಮಾರ್ ಹೇಳಿಕೆ ವಿವಾದಕ್ಕೆ ಕಾರಣವಾಗಿದೆ. ಚುನಾವಣಾ ರ‍್ಯಾಲಿಯೊಂದರಲ್ಲಿ ಮಾತನಾಡಿದ ಕೇಂದ್ರ ಗೃಹ ವ್ಯವಹಾರಗಳ ರಾಜ್ಯ ಸಚಿವ ಬಂಡಿ ಸಂಜಯ್ ಕುಮಾರ್ ನೀಡಿದ ಹೇಳಿಕೆಯೊಂದು ತೆಲಂಗಾಣದಲ್ಲಿ ರಾಜಕೀಯ ಬಿರುಗಾಳಿ ಎಬ್ಬಿಸಿದೆ.

ಹೈದರಾಬಾದ್, ನವೆಂಬರ್ 7: ಚುನಾವಣಾ ರ‍್ಯಾಲಿಯೊಂದರಲ್ಲಿ ಮಾತನಾಡಿದ ಕೇಂದ್ರ ಗೃಹ ವ್ಯವಹಾರಗಳ ರಾಜ್ಯ ಸಚಿವ ಬಂಡಿ ಸಂಜಯ್ ಕುಮಾರ್ (Bandi Sanjay Kumar) ನೀಡಿದ ಹೇಳಿಕೆಯೊಂದು ತೆಲಂಗಾಣದಲ್ಲಿ (Telangana) ರಾಜಕೀಯ ಬಿರುಗಾಳಿ ಎಬ್ಬಿಸಿದೆ. ಬಿಜೆಪಿ ಸಂಸದರಾಗಿರುವ ಬಂಡಿ ಸಂಜಯ್ ಕುಮಾರ್, “ಒಂದು ವೇಳೆ ಮತಕ್ಕಾಗಿ ಮುಸ್ಲಿಮರ ಟೋಪಿ ಧರಿಸುವ ದಿನವೇನಾದರೂ ನನಗೆ ಬಂದರೆ ನಾನು ತಲೆಯನ್ನೇ ಕತ್ತರಿಸಿಕೊಳ್ಳುತ್ತೇನೆಯೇ ವಿನಃ ಟೋಪಿ ಧರಿಸುವುದಿಲ್ಲ” ಎಂದು ಹೇಳಿದ್ದು ವಿರೋಧ ಪಕ್ಷಗಳಿಂದ ತೀವ್ರ ಟೀಕೆಗೆ ಗುರಿಯಾಗಿದೆ.

“ಮತದಾನಕ್ಕಾಗಿ ನಾನು ತಲೆ ಟೋಪಿ ಧರಿಸಬೇಕಾದ ದಿನ ಬಂದರೆ, ಆಗ ನನ್ನ ತಲೆಯನ್ನು ಕತ್ತರಿಸಿಕೊಳ್ಳುವುದೇ ಉತ್ತಮ ಎಂದು ನಾನು ಭಾವಿಸುತ್ತೇನೆ. ನಾನು ಕಾಂಗ್ರೆಸ್​ನವರಂತೆ ನಕಲಿ ನಮಾಜ್ ಮಾಡುವ ಮೂಲಕ ಇತರ ಧರ್ಮಗಳನ್ನು ಅವಮಾನಿಸುವುದಿಲ್ಲ. ನಾನು ಹಿಂದೂ. ಹಿಂದೂವಾಗಿಯೇ ಇರುತ್ತೇನೆ. ಅಜರುದ್ದೀನ್ ಮತ್ತು ಎಂಐಎಂನಂತಹ ಮುಸ್ಲಿಂ ನಾಯಕರು ಸಹ ಟೋಪಿಯನ್ನು ಧರಿಸಲಿಲ್ಲ. ಆದರೆ ಮತಕ್ಕಾಗಿ ಸಿಎಂ ರೇವಂತ್ ರೆಡ್ಡಿ ಮತ್ತು ಕಾಂಗ್ರೆಸ್ ಅಭ್ಯರ್ಥಿ ಟೋಪಿಯನ್ನು ಧರಿಸಿ ಚುನಾವಣಾ ಪ್ರಚಾರದಲ್ಲಿ ಕಾಣಿಸಿಕೊಂಡಿದ್ದರು. ಹಾಗಿದ್ದರೆ ಸಿಎಂ ರೇವಂತ್ ರೆಡ್ಡಿಗೆ ಅಜರುದ್ದೀನ್ ಬಳಿ ವಕ್ರತುಂಡ ಮಹಾಕಾಯ ಪಠಿಸಲು ಹೇಳುವ ಧೈರ್ಯವಿದೆಯೇ? ಅಥವಾ ಓವೈಸಿಯನ್ನು ದೇವಸ್ಥಾನಕ್ಕೆ ಕರೆದೊಯ್ದು ಹಿಂದೂ ಮತಗಳನ್ನು ಗಳಿಸಲು ದೇವಿಯ ಸ್ತೋತ್ರ ಹಾಡುವಂತೆ ಮಾಡುತ್ತಾರಾ?” ಎಂದು ಅವರು ಟೀಕಾಪ್ರಹಾರ ನಡೆಸಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ