ಬಿಜೆಪಿ ಕಾರ್ಯಕರ್ತನಿಂದ ಅವರ ನಾಯಕರ ವಿರುದ್ಧವೇ ದೂರು ಕೊಡಿಸುವಷ್ಟು ಶಕ್ತಿ ನನ್ನಲ್ಲಿರೋದಾದ್ರೆ ನಿಜಕ್ಕೂ ನಾನು ಗ್ರೇಟ್! ಲಕ್ಷ್ಮಿ ಹೆಬ್ಬಾಳ್ಕರ್
ಅವರು ಮೋದಿಯ ಭಕ್ತ ಅಂತ ಅವರು ಹೇಳಿಕೊಂಡಿದ್ದಾರೆ, ಪರಿಸ್ಥಿತಿ ಹೀಗಿರುವಾಗ ಯಡಿಯೂರಪ್ಪ ಸಾಹೇಬರು ಮತ್ತು ಇತರ ಬಿಜೆಪಿ ನಾಯಕರು ಅವರಿಗೆ ಯಾಕೆ ಸಹಾಯ ಮಾಡಲಿಲ್ಲ ಎಂದು ಲಕ್ಷ್ಮಿಯವರು ಕೇಳಿದರು.
ಸಾವಿನ ಮನೆಯಲ್ಲಿ ರಾಜಕಾರಣ ಅನ್ನೋದನ್ನ ನಾವು ಆಗಾಗ ಕೇಳುತ್ತಿರುತ್ತೇವೆ. ರಾಜಕಾರಣ ಮಾಡೋರು ಯಾರು, ರಾಜಕಾರಣಿಗಳು ತಾನೆ? ಮಂಗಳವಾರದಂದು ಉಡುಪಿಯ (Udupi) ಲಾಡ್ಜೊಂದರಲ್ಲಿ ಅತ್ಮಹತ್ಯೆ ಮೂಲಕ ಸಾವನ್ನಪ್ಪಿರುವ ಸಂತೋಷ ಪಾಟೀಲ (Santosh Patil) ಅವರ ವಿಷಯದಲ್ಲೂ ನಮ್ಮ ರಾಜ್ಯದ ಎಲ್ಲ ಪಕ್ಷಗಳ ನಾಯಕರು ರಾಜಕಾರಣ ಮಡುತ್ತಿದ್ದಾರೆ ಮಾರಾಯ್ರೇ. ಬಿಜೆಪಿ ಶಾಸಕ ಎಂ ಪಿ ರೇಣುಕಾಚಾರ್ಯ (MP Renukacharya), ಕಾಂಗ್ರೆಸ್ ಪಕ್ಷದವರೇ ಸಂತೋಷ ಪಾಟೀಲ್ ಅವರಿಂದ ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರಿಗೆ ದೂರು ಕೊಡಿಸಿದರು ಅಂತ ಹೇಳಿ ಉರಿಯುತ್ತಿದ್ದ ಬೆಂಕಿಗೆ ಕೈಗೆಟುಕಲಾಗದಷ್ಟು ದುಬಾರಿಯಾಗಿರುವ ಪೆಟ್ರೋಲ್ ಸುರಿದಿದ್ದಾರೆ. ಬೆಳಗಾವಿ ಗ್ರಾಮೀಣ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಅವರನ್ನು ಬೆಳಗಾವಿಯ ಟಿವಿ ವರದಿಗಾರ ಸಹದೇವ ಮಾನೆ ಮಾತಾಡಿಸಿ ರೇಣುಕಾಚಾರ್ಯ ಹೇಳಿರುವುದನ್ನು ತಿಳಿಸಿದಾಗ ಅವರು, ಅಪಾರ ಬುದ್ಧಿವಂತ ರೇಣುಕಾಚಾರ್ಯ ರಾಜಕೀಯದಲ್ಲಿ ಇರಬಾರದಿತ್ತು ಎಂದರು.
ಅವರಲ್ಲಿ ಒಬ್ಬ ತನಿಖಾಧಿಕಾರಿಯ ಲಕ್ಷಣಗಳಿವೆ, ಅವರು ರಾಜಕಾರಣಿ ಬದಲು ಸಿಬಿಐ ನಿರ್ದೇಶಕರಾಗಬೇಕಿತ್ತು, ಅವರು ಬಹಳ ಬುದ್ಧಿವಂತರು ಎಂದು ಹೇಳಿದ ಶಾಸಕಿ, ಮುಖ್ಯವಾದ ಸಂಗತಿಯೆಂದರೆ, ಸಂತೋಷ್ ಬಿಜೆಪಿಯ ಕಾರ್ಯಕರ್ತರಾಗಿದ್ದರು, ತಮಗಾಗಿರುವ ಅನ್ಯಾಯದ ಬಗ್ಗೆ ಎಲ್ಲರಿಗೂ ವ್ಯಾಟ್ಸ್ಯಾಪ್ ಮೆಸೇಜು ಕಳಿಸಿದ್ದಾರೆ ಎಂದರು. ತನಗೂ ವಿಷಯ ತಿಳಿಸಿ, ಅಕ್ಕಾ ಹೀಗಾಗಿದೆ ಅಂತ ಹೇಳಿದ್ದರೆ ಸಹಾಯ ಮಾಡಬಹುದಿತ್ತು.
ಅವರು ಮೋದಿಯ ಭಕ್ತ ಅಂತ ಅವರು ಹೇಳಿಕೊಂಡಿದ್ದಾರೆ, ಪರಿಸ್ಥಿತಿ ಹೀಗಿರುವಾಗ ಯಡಿಯೂರಪ್ಪ ಸಾಹೇಬರು ಮತ್ತು ಇತರ ಬಿಜೆಪಿ ನಾಯಕರು ಅವರಿಗೆ ಯಾಕೆ ಸಹಾಯ ಮಾಡಲಿಲ್ಲ ಎಂದು ಲಕ್ಷ್ಮಿಯವರು ಕೇಳಿದರು.
ನೀವೇ ದೂರು ಕೊಡಿಸಿದ್ದು ಅಂತ ಮಾಡಿರುವ ಆರೋಪಕ್ಕೆ ಲಕ್ಷ್ಮಿಯವರು, ಹೌದಾ? ಒಬ್ಬ ಬಿಜೆಪಿ ಕಾರ್ಯಕರ್ತನನ್ನು ಕರೆದೊಯ್ದು ಅವರ ನಾಯಕರ ವಿರುದ್ಧವೇ ದೂರು ಕೊಡಿಸುವಷ್ಟು ಶಕ್ತಿ ನನ್ನಲಿದೆಯಾ? ಹಾಗಾದರೆ ನಾನೇ ಗ್ರೇಟ್ ಅಂತ ನಗುತ್ತಾ ಹೇಳಿ ಲಕ್ಷ್ಮಿಯವರು ಅಲ್ಲಿಂದ ಹೊರಟುಬಿಟ್ಟರು.
ಇದನ್ನೂ ಓದಿ: ಕಾಮಗಾರಿ ಮಾಡಿದ ಬಿಲ್ ಕೊಡಿಸುವಂತೆ ಸಚಿವ ಕೆಎಸ್ ಈಶ್ವರಪ್ಪ ವಿರುದ್ಧ ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದ ಸಂತೋಷ್ ಪಾಟೀಲ್