ಪಂಚರಾಜ್ಯ ಚುನಾವಣೆ; ಹೈಕಮಾಂಡ್ ಸೂಚಿಸಿದರೆ ಪುನಃ ಟ್ರಬಲ್ ಶೂಟರ್ ಆಗಲು ಸಿದ್ಧ: ಡಿಕೆ ಶಿವಕುಮಾರ್

|

Updated on: Dec 01, 2023 | 2:57 PM

ಶಿವಕುಮಾರ್ ಅವರನ್ನು ಟ್ರಬಲ್ ಶೂಟರ್ ಅಂತ ಕರೆಯುತ್ತಾರೆ. ಸರ್ಕಾರ ಅಥವಾ ಪಕ್ಷ ಸಂಕಷ್ಟದಲ್ಲಿದ್ದಾಗ, ಪಾರುಮಾಡುವ ಹೊಣೆಗಾರಿಕೆಯನ್ನು ಅವರಿಗೆ ವಹಿಸಲಾಗುತ್ತದೆ. ಐದು ರಾಜ್ಯಗಳ ಫಲಿತಾಂಶ ಪ್ರಕಟವಾದ ಬಳಿಕ ಕಾಂಗ್ರೆಸ್ ಶಾಸಕರನ್ನು ಸೆಳೆಯುವ ಪಯತ್ನ ನಡೆದಲ್ಲಿ ಮತ್ತು ಅದನ್ನು ತಡೆಯಲು ಪಕ್ಷದ ಹೈಕಮಾಂಡ್ ತನಗೆ ಜವಾಬ್ದಾರಿ ವಹಿಸಿದಲ್ಲಿ ನಿಭಾಯಿಸುವುದಾಗಿ ಶಿವಕುಮಾರ್ ಹೇಳಿದರು.

ಬೆಂಗಳೂರು: ಮಧ್ಯಪ್ರದೇಶ, ರಾಜಸ್ಥಾನ, ಛತ್ತೀಸ್ ಗಢ್, ಮಿಜೋರಾಂ ಮತ್ತು ತೆಲಂಗಾಣ ರಾಜ್ಯಗಳಲ್ಲಿ ವಿಧಾನಸಭಾ ಚುನಾವಣೆಗಳು (Assembly Polls) ಕೊನೆಗೊಂಡು ಡಿಸೆಂಬರ್ 3ರಂದು ಮತಗಳ ಎಣಿಕೆ ಕಾರ್ಯ ನಡೆಯಲಿದೆ. ರಾಷ್ಟ್ರೀಯ ಚ್ಯಾನೆಲ್ ಗಳು ನಡೆಸಿರುವ ಚುನಾವಣೋತ್ತರ ಸಮೀಕ್ಷೆಗಳ (Exit Poll) ಪ್ರಕಾರ 4 ರಾಜ್ಯಗಳಲ್ಲಿ ಕಾಂಗ್ರೆಸ್ ಸ್ಥಿತಿ ಚೆನ್ನಾಗಿದೆ. ಇದೇ ಹಿನ್ನೆಲೆಯಲ್ಲಿ ನಗರದಲ್ಲಿಂದು ಮಾಧ್ಯಮ ಪ್ರತಿನಿಧಿಗಳಿಗೆ ಪ್ರತಿಕ್ರಿಯೆ ನೀಡಿದ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ (DCM DK Shivakumar), ಎಕ್ಸಿಟ್ ಪೋಲ್ ಗಳ ಬಗ್ಗೆ ತನಗೆ ಬೇರೆ ಅಭಿಪ್ರಾಯವಿದೆ, ಐದ್ಹತ್ತು ಸಾವಿರ ಜನರನ್ನು ಮಾತಾಡಿಸಿ ಚುನಾವಣಾ ಫಲಿತಾಂಶಗಳನ್ನು ಹೇಳಲಾಗದು ಎಂದರು. ಕರ್ನಾಟಕದಲ್ಲಿ ವಿಧಾನಸಭಾ ಚುನಾವಣೆ ನಡೆದಾಗ ತಾವು ಮಾಡಿಸಿದ ಸಮೀಕ್ಷೆಯಲ್ಲಿ ಪ್ರತಿ ಕ್ಷೇತ್ರದಿಂದ ಒಂದೊಂದು ಲಕ್ಷ ಜನರನ್ನು ಮಾತಾಡಿಸಿ ಅಭಿಪ್ರಾಯ ಸಂಗ್ರಹಿಸಲಾಗಿತ್ತು ಎಂದ ಅವರು, ಎಲ್ಲ ಐದು ರಾಜ್ಯಗಳಲ್ಲಿ ಕಾಂಗ್ರೆಸ್ ಪಕ್ಷವೇ ಗೆಲ್ಲಲಿ ಅಂತ ಆಶಿಸುವುದಾಗಿ ಹೇಳಿದರು.

 

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ