VIDEO: ಅದ್ಭುತ ಕ್ಯಾಚ್ ಹಿಡಿದು ಮ್ಯಾಚ್ ಗೆಲ್ಲಿಸಿದ ಚಾರ್ಲಿ
India Women Vs England Women 3rd T20I: ಭಾರತ ಮತ್ತು ಇಂಗ್ಲೆಂಡ್ ಮಹಿಳಾ ತಂಡಗಳ ನಡುವಿನ ಮೂರನೇ ಟ್ವೆಂಟಿ ಟ್ವೆಂಟಿ ಪಂದ್ಯದಲ್ಲಿ ಪಂದ್ಯದಲ್ಲಿ ಟೀಮ್ ಇಂಡಿಯಾ ಸೋಲನುಭವಿಸಿದೆ. ಇದಕ್ಕೂ ಮುನ್ನ ನಡೆದ ಮೊದಲೆರಡು ಮ್ಯಾಚ್ ಗಳಲ್ಲಿ ಭಾರತ ತಂಡವು ಭರ್ಜರಿ ಜಯ ಸಾಧಿಸಿತ್ತು. ಇದೀಗ ಮೂರನೇ ಪಂದ್ಯದ ಅಂತಿಮ ಓವರ್‌ನಲ್ಲಿ ಟೀಮ್ ಇಂಡಿಯಾ ಸೋಲೊಪ್ಪಿಕೊಂಡಿದೆ.
ಭಾರತ ಮಹಿಳಾ ತಂಡದ ವಿರುದ್ಧದ ಮೂರನೇ ಟಿ20 ಪಂದ್ಯದಲ್ಲಿ ಇಂಗ್ಲೆಂಡ್ ಮಹಿಳಾ ತಂಡ ಜಯ ಸಾಧಿಸಿದೆ. ಈ ಪಂದ್ಯದ ಗೆಲುವಿನ ರೂವಾರಿ ಚಾರ್ಲಿ ಡೀನ್. ಏಕೆಂದರೆ ನಿರ್ಣಾಯಕ ಹಂತದಲ್ಲಿ ಚಾರ್ಲಿ ಹಿಡಿದ ಅದ್ಭುತ ಕ್ಯಾಚ್ ಇಡೀ ಪಂದ್ಯದ ಚಿತ್ರಣ ಬದಲಿಸಿತು ಎಂದರೆ ತಪ್ಪಾಗಲಾರದು.
ಲಂಡನ್ನ ಕೆನ್ನಿಂಗ್ಟನ್ ಓವಲ್ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಇಂಗ್ಲೆಂಡ್ 20 ಓವರ್ಗಳಲ್ಲಿ 171 ರನ್ ಕಲೆಹಾಕಿತು. ಈ ಗುರಿಯನ್ನು ಬೆನ್ನತ್ತಿದ ಟೀಮ್ ಇಂಡಿಯಾ 18 ಓವರ್ಗಳ ಮುಕ್ತಾಯದ ವೇಳೆ 152 ರನ್ ಕಲೆಹಾಕಿದ್ದರು. ಅದರಂತೆ ಕೊನೆಯ 12 ಎಸೆತಗಳಲ್ಲಿ ಭಾರತ ತಂಡಕ್ಕೆ ಗೆಲ್ಲಲು 20 ರನ್ಗಳ ಅವಶ್ಯಕತೆಯಿತ್ತು.
ಇಸ್ಸಿ ವೊಂಗ್ ಎಸೆದ 19ನೇ ಓವರ್ನ ಮೊದಲೆರಡು ಎಸೆತಗಳಲ್ಲಿ ರಿಚಾ ಘೋಷ್ 2 ರನ್ ಕಲೆಹಾಕಿದರು. ಇನ್ನು ಮೂರನೇ ಎಸೆತದಲ್ಲಿ ರಿಚಾ ಲೆಗ್ ಸೈಡ್ನತ್ತ ಭರ್ಜರಿ ಹೊಡೆತ ಬಾರಿಸಿದ್ದರು. ಚೆಂಡು ಇನ್ನೇನು ಒಂದು ಪಿಚ್ ಆಗಿ ಬೌಂಡರಿ ಲೈನ್ ದಾಟಲಿದೆ ಅನ್ನುವಷ್ಟರಲ್ಲಿ ಓಡಿ ಬಂದ ಚಾರ್ಲಿ ಡೀನ್ ಅತ್ಯುತ್ತಮ ಡೈವಿಂಗ್ ಕ್ಯಾಚ್ ಹಿಡಿದರು. ಈ ಅದ್ಭುತ ಕ್ಯಾಚ್ನಿಂದಾಗಿ ರಿಚಾ ಘೋಷ್ ಹೊರನಡೆಯಬೇಕಾಯಿತು. ಪರಿಣಾಮ ಟೀಮ್ ಇಂಡಿಯಾ 20 ಓವರ್ಗಳಲ್ಲಿ 166 ರನ್ಗಳಿಸಿ 5 ವಿಕೆಟ್ಗಳಿಂದ ಸೋಲೊಪ್ಪಿಕೊಂಡಿತು. ಹೀಗೆ ನಿರ್ಣಾಯಕ ಹಂತದಲ್ಲಿ ಅತ್ಯುತ್ತಮ ಕ್ಯಾಚ್ ಹಿಡಿಯುವ ಮೂಲಕ ಚಾರ್ಲಿ ಡೀನ್ ಇಂಗ್ಲೆಂಡ್ ತಂಡದ ಗೆಲುವಿನ ರೂವಾರಿಗಳಲ್ಲಿ ಒಬ್ಬರೆನಿಸಿಕೊಂಡರು.