Loading video

ವಿರಾಟ್ ಕೊಹ್ಲಿಯನ್ನು ಹೀಯಾಳಿಸಿದ ಬೆನ್ನಲ್ಲೇ ಕೆಎಲ್ ರಾಹುಲ್ ಔಟ್..!

Updated on: Jun 21, 2025 | 3:26 PM

India vs England Test: ಭಾರತ ಮತ್ತು ಇಂಗ್ಲೆಂಡ್ ನಡುವಣ ಮೊದಲ ಟೆಸ್ಟ್ ಪಂದ್ಯವು ಲೀಡ್ಸ್​ನಲ್ಲಿ ನಡೆಯುತ್ತಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾ ಮೊದಲ ದಿನದಾಟದ ಅಂತ್ಯಕ್ಕೆ 359 ರನ್​ ಕಲೆಹಾಕಿದೆ. ಸದ್ಯ ಕ್ರೀಸ್​ನಲ್ಲಿ ಶುಭ್​ಮನ್ ಗಿಲ್ ಹಾಗೂ ರಿಷಭ್ ಪಂತ್ ಬ್ಯಾಟಿಂಗ್ ಕಾಯ್ದುಕೊಂಡಿದ್ದು, ಅದರಂತೆ ದ್ವಿತೀಯ ದಿನದಾಟದಲ್ಲಿ ಇನಿಂಗ್ಸ್ ಆರಂಭಿಸಲಿದ್ದಾರೆ.

ಟೀಮ್ ಇಂಡಿಯಾದ ಮಾಜಿ ಆಟಗಾರ ಸಂಜಯ್ ಮಂಜ್ರೇಕರ್, ಭಾರತ ಮತ್ತು ಇಂಗ್ಲೆಂಡ್ ನಡುವಣ ಪಂದ್ಯದ ವೇಳೆ ವಿರಾಟ್ ಕೊಹ್ಲಿಯ ಬ್ಯಾಟಿಂಗ್​ ಅನ್ನು ಕುಹಕವಾಡಿದ್ದಾರೆ. ಲೀಡ್ಸ್​ನಲ್ಲಿ ನಡೆಯುತ್ತಿರುವ ಈ ಪಂದ್ಯದ ವೇಳೆ ಕಾಮೆಂಟೇಟರ್ ಆಗಿ ಕಾಣಿಸಿಕೊಂಡಿರುವ ಮಂಜ್ರೇಕರ್ ಭಾರತೀಯ ಬ್ಯಾಟರ್​ಗಳನ್ನು ಹೊಗಳುವ ಭರದಲ್ಲಿ ಪರೋಕ್ಷವಾಗಿ ಕೊಹ್ಲಿಯನ್ನು ಹೀಯಾಳಿಸಿದರು.

ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾ ಬ್ಯಾಟರ್​ಗಳು ಔಟ್ ಸೈಡ್ ಆಫ್​ನತ್ತ ಸಾಗುವ ಚೆಂಡುಗಳನ್ನು ಎದುರಿಸುವಲ್ಲಿ ತುಂಬಾ ಎಚ್ಚರಿಕೆವಹಿಸಿದ್ದರು. ಅದರಲ್ಲೂ ಆರಂಭದಲ್ಲೇ ಆಫ್ ಸೈಡ್​ನತ್ತ ಬಂದ ಚೆಂಡುಗಳನ್ನು ಮುಟ್ಟುವ ಯತ್ನವೇ ಮಾಡದೇ ಜವಾಬ್ದಾರಿಯುತ ಬ್ಯಾಟಿಂಗ್ ಪ್ರದರ್ಶಿಸಿದ್ದರು.

ಪರಿಣಾಮ ಇಂಗ್ಲೆಂಡ್ ಬೌಲರ್​ಗಳು ವಿಕೆಟ್ ಪಡೆಯಲು ಹರಸಾಹಸಪಡಬೇಕಾಯಿತು. ಇದರ ನಡುವೆ 21ನೇ ಓವರ್​ನಲ್ಲಿ ಬ್ರೈಡನ್ ಕಾರ್ಸೆ ಎಸೆದ ಆಫ್ ಸೈಡ್​ಚೆಂಡನ್ನು ಕೆಎಲ್ ರಾಹುಲ್ ಅಷ್ಟೇ ನಾಜೂಕಾಗಿ ಬಿಟ್ಟಿದ್ದರು. ಇದನ್ನು ಹೊಗಳುವ ಭರದಲ್ಲಿ ಸಂಜಯ್ ಮಂಜ್ರೇಕರ್ ವಿರಾಟ್ ಕೊಹ್ಲಿಯ ಬ್ಯಾಟಿಂಗ್ ಅನ್ನು ಪರೋಕ್ಷವಾಗಿ ವ್ಯಂಗ್ಯವಾಡಿದ್ದಾರೆ.

ಭಾರತದ ಪರ ಕಣಕ್ಕಿಳಿದಿರುವ ಇಬ್ಬರು ದಾಂಡಿಗರಿಗೆ ಚೆಂಡಿನ ಮೇಲೆ ಉತ್ತಮ ಗ್ರಹಿಕೆ ಇದೆ. ಹೀಗಾಗಿಯೇ ಇಬ್ಬರು ಚೆಂಡನ್ನು ಹಿಂಬಾಲಿಸುತ್ತಿಲ್ಲ. ಈ ಹಿಂದೆ ಆಫ್ ಸೈಡ್​ನತ್ತ ಸಾಗುವ ಚೆಂಡು ಹಿಂಬಾಲಿಸಿ ತೊಂದರೆಗೆ ಸಿಲುಕಿಸುತ್ತಿದ್ದ ಮಾಜಿ ಬ್ಯಾಟ್ಸ್‌ಮನ್ ಬಗ್ಗೆ ನಮಗೆ ತಿಳಿದಿದೆ. ಆದರೆ ಈ ಇಬ್ಬರು ಹಾಗಲ್ಲ, ಚೆಂಡನ್ನು ಚೆನ್ನಾಗಿ ನೋಡಿ ಆಡುತ್ತಿದ್ದಾರೆ ಎಂದಿದ್ದರು.

ಇಲ್ಲಿ ಸಂಜಯ್ ಮಂಜ್ರೇಕರ್ ಮಾಜಿ ಬ್ಯಾಟ್ಸ್​ಮನ್ ಎಂದಿರುವುದು ವಿರಾಟ್ ಕೊಹ್ಲಿ ಬಗ್ಗೆ. ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಔಟ್ ಸೈಡ್ ಆಫ್​​ನತ್ತ ಸಾಗಿ ಬಂದ ಚೆಂಡನ್ನು ಮುಟ್ಟಿ ಕೊಹ್ಲಿ ಹಲವು ಬಾರಿ ಕ್ಯಾಚ್ ನೀಡಿದ್ದರು. ಇದನ್ನೇ ಪರೋಕ್ಷವಾಗಿ ಪ್ರಸ್ತಾಪಿಸಿ ಸಂಜಯ್ ಮಂಜ್ರೇಕರ್ ಕೊಹ್ಲಿಯ ಬ್ಯಾಟಿಂಗ್ ಅನ್ನು ಕುಹಕವಾಡಿದ್ದಾರೆ.

ಇತ್ತ ಸಂಜಯ್ ಮಂಜ್ರೇಕರ್ ಅವರ ಈ ಹೊಗಳಿಕೆಯ ಬೆನ್ನಲ್ಲೇ, 25ನೇ ಓವರ್​ನಲ್ಲಿ ಕೆಎಲ್ ರಾಹುಲ್ ಔಟ್ ಸೈಡ್ ಆಫ್​ನತ್ತ ಬಂದ ಚೆಂಡನ್ನು ಮುಟ್ಟಿ ಸ್ಲಿಪ್​​ನಲ್ಲಿ ಕ್ಯಾಚ್ ನೀಡಿದ್ದರು. ಇದನ್ನೇ ಮುಂದಿಟ್ಟು ಇದೀಗ ಸಂಜಯ್ ಮಂಜ್ರೇಕರ್ ಅವರ ವಿರುದ್ಧ ಕೊಹ್ಲಿ ಅಭಿಮಾನಿಗಳು ಸೋಷಿಯಲ್ ಮೀಡಿಯಾದಲ್ಲಿ ಕಿಡಿಕಾರುತ್ತಿದ್ದಾರೆ. ಅದರಲ್ಲೂ ಕೆಲವರು ಮಂಜ್ರೇಕರ್ ಯಾರನ್ನು ಹೊಗಳಿದರೂ, ಅದು ಅಪಶಕುನ. ಏಕೆಂದರೆ ಅವರು ಹೊಗಳಿದ ಬಳಿಕ ವಿಕೆಟ್ ಬೀಳುವುದು ಸಾಮಾನ್ಯ ಎಂದು ಕೆಲವರು ಪ್ರತಿಕ್ರಿಯಿಸಿದ್ದಾರೆ.

 

 

 

Published on: Jun 21, 2025 02:10 PM