VIDEO: ಕ್ರೀಸ್​ ಒಳಗೆ ಬ್ಯಾಟ್​ ಇಟ್ಟರೂ ರನೌಟ್ ಆದ ಪಾಕ್ ಆಟಗಾರ್ತಿ..!

Updated on: Oct 06, 2025 | 7:09 AM

Muneeba Ali run out controversy: ಮೊದಲಿಗೆ ಬ್ಯಾಟ್ ಕ್ರೀಸ್​ನಲ್ಲಿಟ್ಟ ಕಾರಣ ಅಂಪೈರ್ ನಾಟೌಟ್ ಎಂದು ತೀರ್ಪು ನೀಡಿದ್ದರು. ಆದರೆ ಮರು ಪರಿಶೀಲನೆ ವೇಳೆ ಚೆಂಡು ತಗುಲಿದಾಗ ಅವರು ಬ್ಯಾಟ್ ಮೇಲೆತ್ತಿರುವುದು ಗೋಚರಿಸಿತು. ಹೀಗಾಗಿ ಮೂರನೇ ಅಂಪೈರ್ ತನ್ನ ತೀರ್ಪು ಬದಲಿಸಿ ಔಟ್ ಎಂದರು. ಅಂದರೆ ಮುನೀಬಾ ಅಲಿ ಕ್ರೀಸ್​ನಲ್ಲಿ ಬ್ಯಾಟ್ ಇಟ್ಟರೂ, ರನೌಟ್ ಆಗಿ ಹೊರ ನಡೆಯಬೇಕಾಯಿತು. 

ಮಹಿಳಾ ಏಕದಿನ ವಿಶ್ವಕಪ್​ನ 6ನೇ ಪಂದ್ಯದಲ್ಲಿ ಭಾರತ ಮತ್ತು ಪಾಕಿಸ್ತಾನ್ ತಂಡಗಳು ಮುಖಾಮುಖಿಯಾಗಿದ್ದವು. ಕೊಲಂಬೊದ ಆರ್​. ಪ್ರೇಮದಾಸ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾ 50 ಓವರ್​ಗಳಲ್ಲಿ 247 ರನ್ ಕಲೆಹಾಕಿದ್ದರು. ಈ ಗುರಿ ಬೆನ್ನತ್ತಲು ಆಗಮಿಸಿದ ಪಾಕಿಸ್ತಾನ್ ತಂಡವು 4 ಓವರ್​ನಲ್ಲಿ ಮೊದಲ ವಿಕೆಟ್ ಕಳೆದುಕೊಂಡಿತು. ಅದು ಕೂಡ ರನೌಟ್ ರೂಪದಲ್ಲಿ ಎಂಬುದು ವಿಶೇಷ.

ಹೀಗೆ ರನೌಟ್ ಆಗಿದ್ದು ಆರಂಭಿಕ ಆಟಗಾರ್ತಿ ಮುನೀಬಾ ಅಲಿ. ನಾಲ್ಕನೇ ಓವರ್​ನ ಕೊನೆಯ ಎಸೆತದಲ್ಲಿ ಚೆಂಡು ಮುನೀಬಾ ಪ್ಯಾಡ್ ಸವರಿ ಸಾಗಿತು. ಇತ್ತ ಟೀಮ್ ಇಂಡಿಯಾ ಆಟಗಾರ್ತಿಯರು ಎಲ್​ಬಿಡಬ್ಲ್ಯೂಗೆ ಮನವಿ ಮಾಡಿದ್ದರು. ಆದರೆ ಅಂಪೈರ್ ಔಟ್ ನೀಡಿರಲಿಲ್ಲ.

ಇದರ ನಡುವೆ ದೀಪ್ತಿ ಶರ್ಮಾ ಚೆಂಡನ್ನು ವಿಕೆಟ್​ಗೆ ಎಸೆದರು. ಚೆಂಡು ವಿಕೆಟ್​ಗೆ ತಾಗುವ ಮುನ್ನವೇ ಮುನೀಬಾ ಅಲಿ ಕ್ರೀಸ್​ಗೆ ಒಳಗೆ ಬ್ಯಾಟ್ ಇಟ್ಟಿದ್ದರು. ಆದರೆ ಚೆಂಡು ವಿಕೆಟ್​ಗೆ ತಗುಲಿದಾಗ ಮುನೀಬಾ ಕ್ರೀಸ್​ ಹೊರಗಿದ್ದರು. ಅಲ್ಲದೆ ಕ್ರೀಸ್​ನಲ್ಲಿಟ್ಟ ಬ್ಯಾಟ್ ಅನ್ನು ಮೇಲೆಕ್ಕೆತ್ತಿದ್ದರು.

ಮೊದಲಿಗೆ ಬ್ಯಾಟ್ ಕ್ರೀಸ್​ನಲ್ಲಿಟ್ಟ ಕಾರಣ ಅಂಪೈರ್ ನಾಟೌಟ್ ಎಂದು ತೀರ್ಪು ನೀಡಿದ್ದರು. ಆದರೆ ಮರು ಪರಿಶೀಲನೆ ವೇಳೆ ಚೆಂಡು ತಗುಲಿದಾಗ ಅವರು ಬ್ಯಾಟ್ ಮೇಲೆತ್ತಿರುವುದು ಗೋಚರಿಸಿತು. ಹೀಗಾಗಿ ಮೂರನೇ ಅಂಪೈರ್ ತನ್ನ ತೀರ್ಪು ಬದಲಿಸಿ ಔಟ್ ಎಂದರು. ಅಂದರೆ ಮುನೀಬಾ ಅಲಿ ಕ್ರೀಸ್​ನಲ್ಲಿ ಬ್ಯಾಟ್ ಇಟ್ಟರೂ, ರನೌಟ್ ಆಗಿ ಹೊರ ನಡೆಯಬೇಕಾಯಿತು.

ಇದಕ್ಕೆ ಮುಖ್ಯ ಕಾರಣ ಐಸಿಸಿ ನಿಯಮ. ರನೌಟ್ ನಿಯಮದ ಪ್ರಕಾರ, ಬ್ಯಾಟರ್‌ನ ದೇಹದ ಅಥವಾ ಬ್ಯಾಟ್‌ನ ಕೆಲವು ಭಾಗವು ಪಾಪಿಂಗ್ ಕ್ರೀಸ್‌ನ ಹಿಂದೆಯಿದ್ದರೆ, ಅವರನ್ನು ಕ್ರೀಸ್​ನಿಂದ ಹೊರಗಿದ್ದಾರೆಂದು ಪರಿಗಣಿಸಲಾಗುತ್ತದೆ.

ಅದಾಗ್ಯೂ, ಒಬ್ಬ ಬ್ಯಾಟರ್ ತನ್ನ ಮೈದಾನದ ಕಡೆಗೆ ಮತ್ತು ಅದರಾಚೆಗೆ ಓಡುವಾಗ ಅಥವಾ ಡೈವಿಂಗ್ ಮಾಡುವಾಗ ಮತ್ತು ಅವನ/ಅವಳ ದೇಹದ ಅಥವಾ ಬ್ಯಾಟ್‌ನ ಕೆಲವು ಭಾಗವನ್ನು ಪಾಪಿಂಗ್ ಕ್ರೀಸ್‌ನ ಆಚೆಗೆ ನೆಲಕ್ಕೆ ತಾಗಿ ಆ ಬಳಿಕ ಅವನ/ಅವಳ ದೇಹದ ಅಥವಾ ಬ್ಯಾಟ್‌ನ ಯಾವುದೇ ಭಾಗದ ನಡುವೆ ಸಂಪರ್ಕ ತಪ್ಪಿದರೆ, ಅವರನ್ನು ಕ್ರೀಸ್​ನಿಂದ ಹೊರಗೆ ಎಂದು ಎಂದು ಪರಿಗಣಿಸಲಾಗುವುದಿಲ್ಲ.

ಅಂದರೆ ರನ್ ಓಡುವಾಗ ಬ್ಯಾಟರ್​ನ ಬ್ಯಾಟ್​ನ ಅಥವಾ ದೇಹದ ಭಾಗ ಕ್ರೀಸ್​ ಒಳಗೆ ಒಮ್ಮೆ ತಲುಪಿ ಆ ಬಳಿಕ ಬ್ಯಾಟ್ ಅಥವಾ ದೇಹವು ಗಾಳಿಯಲ್ಲಿದ್ದರೂ ಅಥವಾ ಕ್ರೀಸ್​ನಿಂದ ಹೊರಗೆ ಬಿದ್ದರೂ ಅವರನ್ನು ಕ್ರೀಸ್​ಗೆ ತಲುಪಿದ್ದಾರೆ ಎಂದು ಪರಿಗಣಿಸಲಾಗುತ್ತದೆ.

ಆದರೆ ಮುನೀಬಾ ವಿಷಯದಲ್ಲಿ, ಅವರು ರನ್ ಓಡುತ್ತಿರಲಿಲ್ಲ. ಬದಲಾಗಿ ಸ್ಟ್ರೈಕ್​ನಲ್ಲಿ ನಿಂತು ಬ್ಯಾಟ್ ಒಳಕ್ಕೆ ಒಟ್ಟು ಮತ್ತೆ ಮೇಲೆಕ್ಕೆ ತೆಗೆದುಕೊಂಡಿದ್ದಾರೆ. ಅತ್ತ ಚೆಂಡು ಕೂಡ ಡೆಡ್ ಆಗಿರಲಿಲ್ಲ. ಇತ್ತ ಬ್ಯಾಟ್ ಕ್ರೀಸ್​ನಿಂದ ಮೇಲಿದ್ದ ಕಾರಣ ಅದನ್ನು ರನೌಟ್ ಎಂದು ಪರಿಗಣಿಸಿದ್ದಾರೆ. ಅದರಂತೆ ಮುನೀಬಾ ಅಲಿ ಕ್ರೀಸ್​ನಲ್ಲಿ ಬ್ಯಾಟ್ ಇಟ್ಟರೂ, ಆ ಮೇಲೆ ಮೈಮರೆತು ವಿಚಿತ್ರವಾಗಿ ರನೌಟ್ ಆಗಿದ್ದಾರೆ.

ಇನ್ನು ಈ ಪಂದ್ಯದಲ್ಲಿ ಟೀಮ್ ಇಂಡಿಯಾ ನೀಡಿದ 248 ರನ್​ಗಳ ಗುರಿಯನ್ನು ಬೆನ್ನತ್ತಿದ ಪಾಕಿಸ್ತಾನ್ ತಂಡವು 43 ಓವರ್​ಗಳಲ್ಲಿ 159 ರನ್​ಗಳಿಗೆ ಆಲೌಟ್ ಆಗುವ ಮೂಲಕ 88 ರನ್​ಗಳಿಂದ ಸೋಲೊಪ್ಪಿಕೊಂಡಿದೆ.