VIDEO: ಉಫ್… ಅತ್ಯದ್ಭುತ ಕ್ಯಾಚ್ ಹಿಡಿದು ಎಲ್ಲರನ್ನು ನಿಬ್ಬೆರಗಾಗಿಸಿದ ನಿತೀಶ್
India vs West Indies, 1st Test: ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ವೆಸ್ಟ್ ಇಂಡೀಸ್ ತಂಡವು ಪ್ರಥಮ ಇನಿಂಗ್ಸ್ನಲ್ಲಿ 162 ರನ್ಗಳಿಗೆ ಆಲೌಟ್ ಆಗಿದೆ. ಇದಕ್ಕುತ್ತರವಾಗಿ ಪ್ರಥಮ ಇನಿಂಗ್ಸ್ ಆಡಿದ ಟೀಮ್ ಇಂಡಿಯಾ 448 ರನ್ಗಳಿಸಿ ಡಿಕ್ಲೇರ್ ಘೋಷಿಸಿದೆ. ಇದೀಗ ದ್ವಿತೀಯ ಇನಿಂಗ್ಸ್ ಆರಂಭಿಸಿರುವ ವಿಂಡೀಸ್ ಪಡೆಗೆ ಆರಂಭಿಕ ಆಘಾತ ನೀಡುವಲ್ಲಿ ಭಾರತೀಯ ಬೌಲರ್ಗಳು ಯಶಸ್ವಿಯಾಗಿದ್ದಾರೆ.
ಅಹಮದಾಬಾದ್ನಲ್ಲಿ ನಡೆಯುತ್ತಿರುವ ಭಾರತದ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ 2ನೇ ಇನಿಂಗ್ಸ್ನಲ್ಲೂ ವೆಸ್ಟ್ ಇಂಡೀಸ್ ತಂಡ ಆರಂಭಿಕ ಆಘಾತಕ್ಕೆ ಒಳಗಾಗಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ವೆಸ್ಟ್ ಇಂಡೀಸ್ 162 ರನ್ಗಳಿಗೆ ಆಲೌಟ್ ಆಗಿತ್ತು. ಇದಕ್ಕುತ್ತರವಾಗಿ ಟೀಮ್ ಇಂಡಿಯಾ ಪ್ರಥಮ ಇನಿಂಗ್ಸ್ನಲ್ಲಿ 448 ರನ್ಗಳಿಸಿ ಡಿಕ್ಲೇರ್ ಘೋಷಿಸಿತು.
ಅದರಂತೆ ಮೂರನೇ ದಿನದಾಟದಲ್ಲಿ ದ್ವಿತೀಯ ಇನಿಂಗ್ಸ್ ಆರಂಭಿಸಿದ ವೆಸ್ಟ್ ಇಂಡೀಸ್ ತಂಡವು ಕೇವಲ 12 ರನ್ಗೆ ಮೊದಲ ವಿಕೆಟ್ ಕಳೆದುಕೊಂಡಿದೆ. ಹೀಗೆ ಟೀಮ್ ಇಂಡಿಯಾಗೆ ಮೊದಲ ಯಶಸ್ಸು ಸಿಗಲು ಮುಖ್ಯ ಕಾರಣ ನಿತೀಶ್ ಕುಮಾರ್ ರೆಡ್ಡಿ.
ಮೊಹಮ್ಮದ್ ಸಿರಾಜ್ ಎಸೆದ 8ನೇ ಓವರ್ನ ಎರಡನೇ ಎಸೆತದಲ್ಲಿ ತೇಜ್ನರೈನ್ ಚಂದ್ರಪಾಲ್ ಲೆಗ್ ಸೈಡ್ನತ್ತ ಬಾರಿಸಲು ಯತ್ನಿಸಿದ್ದರು. ಅತ್ತ ಸ್ಕ್ವೇರ್ ಲೆಗ್ನತ್ತ ಫೀಲ್ಡಿಂಗ್ನಲ್ಲಿದ್ದ ನಿತೀಶ್ ಕುಮಾರ್ ರೆಡ್ಡಿ ಕ್ಷಣಾರ್ಧದಲ್ಲೇ ಡೈವ್ ಹೊಡೆದು ಚೆಂಡನ್ನು ಹಿಡಿದಿದ್ದಾರೆ.
ಇದೀಗ ನಿತೀಶ್ ಕುಮಾರ್ ರೆಡ್ಡಿ ಗಾಳಿಯಲ್ಲಿ ಹಾರಿ ಹಿಡಿದ ಕ್ಯಾಚ್ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಕ್ರಿಕೆಟ್ ಪ್ರೇಮಿಗಳಿಂದ ಭಾರೀ ಮೆಚ್ಚುಗೆಗಳು ವ್ಯಕ್ತವಾಗುತ್ತಿದೆ.
ಇನ್ನು ಈ ಪಂದ್ಯದ ದ್ವಿತೀಯ ಇನಿಂಗ್ಸ್ನಲ್ಲಿ ಬ್ಯಾಟಿಂಗ್ ಮುಂದುವರೆಸಿರುವ ವೆಸ್ಟ್ ಇಂಡೀಸ್ 15 ಓವರ್ಗಳ ಮುಕ್ತಾಯದ ವೇಳೆಗೆ 2 ವಿಕೆಟ್ ಕಳೆದುಕೊಂಡು 30 ರನ್ ಕಲೆಹಾಕಿದೆ. ಟೀಮ್ ಇಂಡಿಯಾ ಪರ ಮೊಹಮ್ಮದ್ ಸಿರಾಜ್ ಹಾಗೂ ರವೀಂದ್ರ ಜಡೇಜಾ ತಲಾ ಒಂದೊಂದು ವಿಕೆಟ್ ಪಡೆದಿದ್ದಾರೆ.