ಝೀರೋಗೆ ಆಲೌಟಾಗಿ ಪಂದ್ಯ ಸೋತ ಟೀಮ್ ಇಂಡಿಯಾ

Updated on: Nov 22, 2025 | 9:35 AM

Bangladesh A vs India A, 1st Semi-Final; ಈ ಸುಲಭ ಗುರಿಯನ್ನು ಬೆನ್ನತ್ತಲು ಬಂದ ಬಾಂಗ್ಲಾ ಬ್ಯಾಟರ್ ಯಾಸಿರ್ ಅಲಿ ಮೊದಲ ಎಸೆತದಲ್ಲೇ ಔಟಾಗಿದ್ದರು. ಆದರೆ ಸುಯಶ್ ಶರ್ಮಾ ಎಸೆದ ದ್ವಿತೀಯ ಎಸೆತವು ವೈಡ್ ಆಯಿತು. ಈ ವೈಡ್​ ರನ್​​ನೊಂದಿಗೆ ಗೆದ್ದ ಬಾಂಗ್ಲಾದೇಶ್ ತಂಡವು ರೈಸಿಂಗ್ ಸ್ಟಾರ್ಸ್ ಏಷ್ಯಾಕಪ್ ಟೂರ್ನಿಯಲ್ಲಿ ಫೈನಲ್​ಗೇರಿದೆ. ಇತ್ತ ಬಲಿಷ್ಠ ಪಡೆಯಾಗಿ ಗುರುತಿಸಿಕೊಂಡಿದ್ದ ಟೀಮ್ ಇಂಡಿಯಾ ಸೂಪರ್ ಓವರ್​ನಲ್ಲಿ ಯಾವುದೇ ರನ್​ಗಳಿಸದೇ ಟೂರ್ನಿಯಿಂದಲೇ ಹೊರಬಿದ್ದಿದೆ.

ರೈಸಿಂಗ್ ಸ್ಟಾರ್ಸ್ ಏಷ್ಯಾಕಪ್ ಟೂರ್ನಿಯಲ್ಲಿನ ಭಾರತ ಎ ತಂಡದ ಅಭಿಯಾನ ಅಂತ್ಯಗೊಂಡಿದೆ. ದೋಹಾದಲ್ಲಿ ನಡೆಯುತ್ತಿರುವ ಈ ಟೂರ್ನಿಯ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಮುಗ್ಗರಿಸುವ ಮೂಲಕ ಟೀಮ್ ಇಂಡಿಯಾ ಪಂದ್ಯಾವಳಿಯಿಂದ ಹೊರಬಿದ್ದಿದೆ. ಈಸ್ಟ್​​ ಎಂಡ್​ ಪಾರ್ಕ್​ನಲ್ಲಿ ನಡೆದ ಸೆಮಿಫೈನಲ್ ಪಂದ್ಯದಲ್ಲಿ ಭಾರತ ಎ ಮತ್ತು ಬಾಂಗ್ಲಾದೇಶ್ ಎ ತಂಡಗಳು ಮುಖಾಮುಖಿಯಾಗಿದ್ದವು.

ಈ ನಿರ್ಣಾಯಕ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಬಾಂಗ್ಲಾದೇಶ್ ಎ ತಂಡವು 20 ಓವರ್​ಗಳಲ್ಲಿ 6 ವಿಕೆಟ್ ಕಳೆದುಕೊಂಡು 194 ರನ್​ ಕಲೆಹಾಕಿತು. ಈ ಗುರಿಯನ್ನು ಬೆನ್ನತ್ತಿದ ಭಾರತ ಎ ತಂಡವು 20 ಓವರ್​ಗಳಲ್ಲಿ 194 ರನ್​ಗಳಿಸಿ ಪಂದ್ಯವನ್ನು ಟೈ ಮಾಡಿಕೊಂಡಿದ್ದರು.

ಪಂದ್ಯ ಟೈ ಆದ ಹಿನ್ನಲೆ ಫಲಿತಾಂಶಕ್ಕಾಗಿ ಸೂಪರ್ ಓವರ್ ಆಡಿಸಲಾಯಿತು. ಸೂಪರ್​ ಓವರ್​ನ ಮೊದಲ ಎಸೆತದಲ್ಲೇ ಜಿತೇಶ್ ಶರ್ಮಾ (0) ಕ್ಲೀನ್ ಬೌಲ್ಡ್ ಆದರು. ಇನ್ನು ಮರು ಎಸೆತದಲ್ಲಿ ಅಶುತೋಷ್ ಶರ್ಮಾ (0) ಕೂಡ ಕ್ಯಾಚ್ ನೀಡಿ ಔಟಾದರು. ಸೂಪರ್ ಓವರ್​ನಲ್ಲಿ ಶೂನ್ಯಕ್ಕೆ ಆಲೌಟ್​ ಆಗುವ ಮೂಲಕ ಟೀಮ್ ಇಂಡಿಯಾ ಬಾಂಗ್ಲಾದೇಶ್ ಎ ತಂಡಕ್ಕೆ 1 ರನ್​ಗಳ ಗುರಿ ನೀಡಿದರು.

ಈ ಸುಲಭ ಗುರಿಯನ್ನು ಬೆನ್ನತ್ತಲು ಬಂದ ಬಾಂಗ್ಲಾ ಬ್ಯಾಟರ್ ಯಾಸಿರ್ ಅಲಿ ಮೊದಲ ಎಸೆತದಲ್ಲೇ ಔಟಾಗಿದ್ದರು. ಆದರೆ ಸುಯಶ್ ಶರ್ಮಾ ಎಸೆದ ದ್ವಿತೀಯ ಎಸೆತವು ವೈಡ್ ಆಯಿತು. ಈ ವೈಡ್​ ರನ್​​ನೊಂದಿಗೆ ಗೆದ್ದ ಬಾಂಗ್ಲಾದೇಶ್ ತಂಡವು ರೈಸಿಂಗ್ ಸ್ಟಾರ್ಸ್ ಏಷ್ಯಾಕಪ್ ಟೂರ್ನಿಯಲ್ಲಿ ಫೈನಲ್​ಗೇರಿದೆ. ಇತ್ತ ಬಲಿಷ್ಠ ಪಡೆಯಾಗಿ ಗುರುತಿಸಿಕೊಂಡಿದ್ದ ಟೀಮ್ ಇಂಡಿಯಾ ಸೂಪರ್ ಓವರ್​ನಲ್ಲಿ ಯಾವುದೇ ರನ್​ಗಳಿಸದೇ ಟೂರ್ನಿಯಿಂದಲೇ ಹೊರಬಿದ್ದಿದೆ.

Follow Us
Zahir Yusuf

ಟಿವಿ9 ಡಿಜಿಟಲ್ ಮುಖ್ಯ ಉಪ ಸಂಪಾದಕ. 10 ವರ್ಷಗಳಿಂದ ಕನ್ನಡ ಡಿಜಿಟಲ್​ ಮಾಧ್ಯಮದಲ್ಲಿ ಪತ್ರಿಕಾ ವೃತ್ತಿ. ಕ್ರೀಡಾ ಸುದ್ದಿ, ದೀರ್ಘ ಲೇಖನ, ವಿಶ್ಲೇಷಣೆ, ಹೀಗೆ ಎಲ್ಲ ತರಹದ ಬರಹದಲ್ಲೂ ಅನುಭವ. ಪ್ರಸ್ತುತ ವಿದ್ಯಮಾನಗಳ ವ್ಯಾಖ್ಯಾನ, ಚರ್ಚೆಯಲ್ಲಿ ನೈಪುಣ್ಯ. ಈ ಹಿಂದೆ ಉದಯವಾಣಿ, ನ್ಯೂಸ್ 18 ಕನ್ನಡ ಡಿಜಿಟಲ್​​ನಲ್ಲಿ ಕೆಲಸ ಮಾಡಿದ ಅನುಭವ. ಆಸಕ್ತಿದಾಯಕ ವಿಷಯ ಕ್ರೀಡೆ, ಸಿನಿಮಾ ಮತ್ತು ರಾಜಕೀಯ.

Read More