IND vs AUS: ‘ಹೊಗಳಿದ್ರೂ ರೇಗ್ತಾನೆ’; ಸಿರಾಜ್ ಜೊತೆಗಿನ ಜಗಳದ ಬಗ್ಗೆ ಮೌನ ಮುರಿದ ಹೆಡ್

IND vs AUS: ‘ಹೊಗಳಿದ್ರೂ ರೇಗ್ತಾನೆ’; ಸಿರಾಜ್ ಜೊತೆಗಿನ ಜಗಳದ ಬಗ್ಗೆ ಮೌನ ಮುರಿದ ಹೆಡ್

ಪೃಥ್ವಿಶಂಕರ
|

Updated on:Dec 07, 2024 | 10:07 PM

IND vs AUS: ಆಸ್ಟ್ರೇಲಿಯಾ ಮತ್ತು ಭಾರತ ನಡುವಿನ ಎರಡನೇ ಟೆಸ್ಟ್ ಪಂದ್ಯದ ಎರಡನೇ ದಿನ ಆಸೀಸ್ ತಂಡದ ಪ್ರಾಬಲ್ಯಕ್ಕೆ ಸಾಕ್ಷಿಯಾಯಿತು. ಟ್ರಾವಿಸ್ ಹೆಡ್ 140 ರನ್ ಗಳಿಸಿ ಅದ್ಭುತ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಈ ನಡುವೆ ಮೊಹಮ್ಮದ್ ಸಿರಾಜ್ ಮತ್ತು ಹೆಡ್ ನಡುವೆ ನಡೆದ ಜಗಳವೂ ಸಾಕಷ್ಟು ಸುದ್ದಿಯಾಗಿದ್ದು, ಇದೀಗ ಅದರ ಬಗ್ಗೆ ಟ್ರಾವಿಸ್ ಹೆಡ್ ಮೌನ ಮುರಿದಿದ್ದಾರೆ.

ಆಸ್ಟ್ರೇಲಿಯಾ ಮತ್ತು ಭಾರತ ನಡುವಿನ ಎರಡನೇ ಟೆಸ್ಟ್ ಪಂದ್ಯದ ಎರಡನೇ ದಿನವೂ ಆತಿಥೇಯರ ಹೆಸರಿನಲ್ಲಿತ್ತು. ಟೀಂ ಇಂಡಿಯಾದ 180 ರನ್‌ಗಳಿಗೆ ಉತ್ತರವಾಗಿ ಆಸ್ಟ್ರೇಲಿಯಾ ಮೊದಲ ಇನ್ನಿಂಗ್ಸ್‌ನಲ್ಲಿ 337 ರನ್ ಗಳಿಸಿದೆ. ಇದರೊಂದಿಗೆ ಆಸ್ಟ್ರೇಲಿಯಾ 157 ರನ್‌ಗಳ ನಿರ್ಣಾಯಕ ಮುನ್ನಡೆ ಸಾಧಿಸಿದೆ. ಇತ್ತ ಎರಡನೇ ಇನ್ನಿಂಗ್ಸ್ ಆರಂಭಿಸಿರುವ ಭಾರತ ಎರಡನೇ ದಿನದಾಟದ ಅಂತ್ಯಕ್ಕೆ 5 ವಿಕೆಟ್ ನಷ್ಟಕ್ಕೆ 128 ರನ್ ಗಳಿಸಿದೆ. ಈ ನಡುವೆ ಆಸೀಸ್ ಮೊದಲ ಇನ್ನಿಂಗ್ಸ್ ವೇಳೆ ಆಸ್ಟ್ರೇಲಿಯಾದ ಸ್ಫೋಟಕ ಬ್ಯಾಟ್ಸ್‌ಮನ್ ಟ್ರಾವಿಸ್ ಹೆಡ್ ಹಾಗೂ ಟೀಂ ಇಂಡಿಯಾ ವೇಗಿ ಮೊಹಮ್ಮದ್ ಸಿರಾಜ್ ನಡುವೆ ನಡೆದ ಮಾತಿನ ಚಕಮಕಿಯ ಬಗ್ಗೆ ಎಲ್ಲೆಡೆ ಚರ್ಚೆ ನಡೆಯುತ್ತಿದೆ. ಇದೀಗ ದಿನದಾಟ ಮುಗಿದ ಬಳಿಕ ಸ್ವತಃ ಟ್ರಾವಿಸ್ ಹೆಡ್ ಅವರೇ ಆ ಸಂದರ್ಭದಲ್ಲಿ ಏನು ನಡೆಯಿತು ಎಂಬುದನ್ನು ವಿವರಿಸಿದ್ದಾರೆ.

ವೆಲ್ ಬೌಲ್ಡ್ ಎಂದು ಹೇಳಿದೆ

ಹೆಡ್ ಮೊದಲ ಇನಿಂಗ್ಸ್‌ನಲ್ಲಿ 141 ಎಸೆತಗಳಲ್ಲಿ 17 ಬೌಂಡರಿ ಮತ್ತು 4 ಸಿಕ್ಸರ್‌ಗಳ ಸಹಾಯದಿಂದ 140 ರನ್ ಗಳಿಸಿದರು. ಅಂತಿಮವಾಗಿ ವೇಗಿ ಮೊಹಮ್ಮದ್ ಸಿರಾಜ್, ಟ್ರಾವಿಸ್ ಹೆಡ್ ಅವರನ್ನು ಕ್ಲೀನ್ ಬೌಲ್ಡ್ ಮಾಡಿದರು. ಇದೇ ವೇಳೆ ಸಿರಾಜ್ ಹಾಗೂ ಹೆಡ್ ನಡುವೆ ಮಾತಿನ ಚಕಮಕಿ ನಡೆಯಿತು. ಆದರೆ ಅಲ್ಲಿ ಏನು ನಡೆಯಿತು ಎಂಬುದು ಯಾರಿಗೂ ತಿಳಿದಿರಲಿಲ್ಲ. ಇದೀಗ ಅದರ ಬಗ್ಗೆ ಮಾತನಾಡಿರುವ ಹೆಡ್, ‘ನಾನು ಸಿರಾಜ್​ಗೆ ವೆಲ್ ಬೌಲ್ಡ್ (ಉತ್ತಮ ಎಸೆತ) ಎಂದು ಹೇಳಿದೆ. ಆದರೆ ಆ ಸಂದರ್ಭದಲ್ಲಿ ಸಿರಾಜ್ ಅದನ್ನು ತಪ್ಪಾಗಿ ಅರ್ಥೈಸಿಕೊಂಡರು. ನಾನು ಸಿರಾಜ್​ಗೆ ಬೇರೇ ಏನನ್ನೋ ಹೇಳಿದ್ದೇನೆ ಎಂದು ತಿಳಿದುಕೊಂಡು ನನ್ನನ್ನು ಪೆವಿಲಿಯನ್​ಗೆ ಹೋಗು ಎಂದು ಆಕ್ರೋಶದಿಂದ ಹೇಳಿದರು. ಅಲ್ಲಿ ಏನಾಯಿತು ಎಂಬುದರ ಬಗ್ಗೆ ನನಗೆ ಬೇಸರ ತರಿಸಿದೆ. ಅದು ಎಲ್ಲರ ಮುಂದೆ ನಡೆದದ್ದು. ಸಿರಾಜ್ ತನ್ನ ಇಮೇಜ್ ಅನ್ನು ಹಾಗೆಯೇ ಉಳಿಸಿಕೊಳ್ಳಲು ಬಯಸಿದರೆ, ಅವನಿಗೆ ಒಳ್ಳೇಯದಾಗಲಿ ಎಂದು ಹೆಡ್ ಹೇಳಿದ್ದಾರೆ.

ರನ್​ಗಳಿಸಿದ್ದು ಖುಷಿಕೊಟ್ಟಿದೆ

ಉಳಿದಂತೆ ಆಟದ ಬಗ್ಗೆ ಮಾತನಾಡಿದ ಹೆಡ್, ‘ಎರಡನೇ ಟೆಸ್ಟ್​ನಲ್ಲಿ ರನ್​ಗಳಿಸಿದ್ದು ಖುಷಿಕೊಟ್ಟಿದೆ. ನಾನು ರಿಸ್ಕ್ ತೆಗೆದುಕೊಂಡೆ. ಟೀಂ ಇಂಡಿಯಾ ಕೂಡ ಉತ್ತಮವಾಗಿ ಬೌಲಿಂಗ್ ಮಾಡಿದೆ. ಇದು ಬ್ಯಾಟಿಂಗ್‌ಗೆ ಸವಾಲಿನ ಪಿಚ್‌ ಆಗಿತ್ತು. ಕೆಲವು ಸಂಗತಿಗಳು ನಮ್ಮ ಪರವಾಗಿ ನಡೆದರೆ, ನಾವು ಎದುರಾಳಿ ತಂಡದ ಮೇಲೆ ಮೇಲುಗೈ ಸಾಧಿಸಬಹುದು. ಉಭಯ ತಂಡಗಳು ಪರಸ್ಪರ ಮೇಲುಗೈ ಸಾಧಿಸುವ ಗುರಿಯೊಂದಿಗೆ ಮೈದಾನಕ್ಕಿಳಿದಿವೆ. ನಾವು ಭಾರತದ ವಿರುದ್ಧ ಪ್ರಾಬಲ್ಯ ಸಾಧಿಸಿದ್ದೇವೆ ಎಂದು ನಾನು ಹೇಳುತ್ತಿಲ್ಲ, ಆದರೆ ನಾವು ಉತ್ತಮ ಸ್ಥಿತಿಯಲ್ಲಿದ್ದೇವೆ ಎಂದು ಹೆಡ್ ಹೇಳಿದರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published on: Dec 07, 2024 10:03 PM