ನಗುನಗುತ್ತಲೆ ಪಾಕಿಸ್ತಾನದ ಪ್ರಜೆಗೆ ಆಟೋಗ್ರಾಫ್ ನೀಡಿದ ಕೊಹ್ಲಿ, ರೋಹಿತ್; ವಿಡಿಯೋ ವೈರಲ್
Virat Kohli, Rohit Sharma Autograph Controversy: ಭಾರತ-ಆಸ್ಟ್ರೇಲಿಯಾ ಏಕದಿನ ಸರಣಿಗೆ ಭಾರತ ತಂಡ ಆಸ್ಟ್ರೇಲಿಯಾ ತಲುಪಿದ್ದು, ಅಭ್ಯಾಸ ಆರಂಭಿಸಿದೆ. ಏಳು ತಿಂಗಳ ನಂತರ ಕ್ರೀಡಾಂಗಣಕ್ಕೆ ಮರಳಿದ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ನೆಟ್ಸ್‌ನಲ್ಲಿ ಬೆವರು ಹರಿಸುತ್ತಿದ್ದಾರೆ. ಈ ನಡುವೆ, ಆಸ್ಟ್ರೇಲಿಯಾದಲ್ಲಿ ಇಬ್ಬರೂ ಆಟಗಾರರು ಪಾಕಿಸ್ತಾನದ ಅಭಿಮಾನಿಯೊಬ್ಬರಿಗೆ ಅರಿವಿಲ್ಲದೆಯೇ ಆಟೋಗ್ರಾಫ್ ನೀಡಿದ್ದಾರೆ. ಈ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ರಾಜಕೀಯ ಉದ್ವಿಗ್ನತೆಯ ನಡುವೆ ಈ ಘಟನೆ ಕುತೂಹಲ ಮೂಡಿಸಿದೆ.
ಸೆಪ್ಟೆಂಬರ್ 19 ರಂದು ಆರಂಭವಾಗಲಿರುವ ಭಾರತ-ಆಸ್ಟ್ರೇಲಿಯಾ ಏಕದಿನ ಸರಣಿಗಾಗಿ ಭಾರತೀಯ ಕ್ರಿಕೆಟ್ ತಂಡ ಆಸ್ಟ್ರೇಲಿಯಾಕ್ಕೆ ತೆರಳಿದೆ. ನಿನ್ನೆಯಷ್ಟೇ ಆಸ್ಟ್ರೇಲಿಯಾಕ್ಕೆ ಒಟ್ಟಾಗಿ ವಿಮಾನ ಹತ್ತಿದ ಟೀಂ ಇಂಡಿಯಾ, ಇಂದಿನಿಂದ ಆಸ್ಟ್ರೇಲಿಯಾ ನೆಲದಲ್ಲಿ ಅಭ್ಯಾಸ ಆರಂಭಿಸಿದೆ. ಚಾಂಪಿಯನ್ಸ್ ಟ್ರೋಫಿ ಬಳಿಕ ಕ್ರಿಕೆಟ್ನಿಂದ ದೂರ ಉಳಿದಿದ್ದ ಮಾಜಿ ನಾಯಕರಾದ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ನೆಟ್ಸ್‌ನಲ್ಲಿ ಬೆವರು ಹರಿಸುತ್ತಿದ್ದಾರೆ. ಸುಮಾರು ಏಳು ತಿಂಗಳ ನಂತರ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಮರಳಿರುವ ಈ ಜೋಡಿ ಕಾಂಗರೂಗಳ ನಾಡಲ್ಲಿ ಯಾವ ರೀತಿಯ ಪ್ರದರ್ಶನ ನೀಡಲಿದೆ ಎಂಬುದನ್ನು ನೋಡಲು ಎಲ್ಲರೂ ಕಾತುರದಿಂದ ಕಾಯುತ್ತಿದ್ದಾರೆ. ಆದಾಗ್ಯೂ ಸರಣಿ ಆರಂಭಕ್ಕೂ ಮುನ್ನ ರೋಹಿತ್ ಮತ್ತು ವಿರಾಟ್ ತಮಗೆ ಅರಿವಿಲ್ಲದೆಯೇ ಪಾಕಿಸ್ತಾನದ ಪ್ರಜೆಗೆ ಆಟೋಗ್ರಾಫ್ ನೀಡಿದ್ದು, ಇದೀಗ ಅದರ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗುತ್ತಿದೆ.
ವಾಸ್ತವವಾಗಿ ಪಹಲ್ಗಾಮ್ ದಾಳಿಯ ಬಳಿಕ ಉಭಯ ದೇಶಗಳ ನಡುವೆ ಉದ್ವಿಗ್ನತೆ ಮತ್ತಷ್ಟು ಹೆಚ್ಚಾಗಿದೆ. ಇದರ ಪರಿಣಾಮವಾಗಿ ಇತ್ತಿಚೆಗಷ್ಟೇ ಮುಗಿದ ಏಷ್ಯಾಕಪ್‌ನಲ್ಲೂ ಉಭಯ ದೇಶಗಳ ಆಟಗಾರರು ಅಂತರ ಕಾಯ್ದುಕೊಂಡಿದ್ದರು. ಒಬ್ಬರಿಗೊಬ್ಬರು ಹಸ್ತಲಾಘವ ಮಾಡುವುದಿರಲಿ, ಕಣ್ಣೆತ್ತಿ ಸಹ ನೋಡಿರಲಿಲ್ಲ. ಹಾಗೆಯೇ ಒಂದೇ ಒಂದು ಮಾತು ಕೂಡ ಆಡಿರಲಿಲ್ಲ. ಇದೆಲ್ಲದರ ಜೊತೆಗೆ ಏಷ್ಯಾಕಪ್ ಗೆದ್ದ ಭಾರತ ತಂಡ ಪಿಸಿಬಿ ಅಧ್ಯಕ್ಷರಾಗಿರುವ ಮೊಹ್ಸಿನ್ ನಖ್ವಿ ಅವರಿಂದ ಟ್ರೋಫಿ ಸ್ವೀಕರಿಸಲು ಸಹ ನಿರಾಕರಿಸಿತ್ತು. ಉಭಯ ತಂಡಗಳ ಆಟಗಾರರ ಈ ನಡೆಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಕೆಲವರು ಆಟವನ್ನು ರಾಜಕೀಯದಿಂದ ದೂರವಿಡಬೇಕು ಎಂಬ ಅಭಿಪ್ರಾಯ ಹಂಚಿಕೊಂಡಿದ್ದರು. ಇನ್ನು ಕೆಲವರು ಟೀಂ ಇಂಡಿಯಾ ನಡೆದುಕೊಂಡ ರೀತಿ ಸರಿ ಇತ್ತು ಎಂದಿದ್ದರು.
ಇದೀಗ ಇದೆಲ್ಲದರ ನಡುವೆ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಪಾಕಿಸ್ತಾನದ ಪ್ರಜೆಗೆ ಆಟೋಗ್ರಾಫ್ ನೀಡುವ ಮೂಲಕ ವಿವಾದಕ್ಕೆ ನಾಂದಿ ಹಾಡಿದ್ದಾರೆ ಎನ್ನಲಾಗುತ್ತಿದೆ. ಆದರಿಲ್ಲಿ ಗಮನಿಸಬೇಕಾದ ಸಂಗತಿಯೆಂದರೆ ವಿರಾಟ್ ಹಾಗೂ ರೋಹಿತ್ಗೆ ಆಟೋಗ್ರಾಫ್ ಪಡೆಯುತ್ತಿರುವ ವ್ಯಕ್ತಿ ಎಲ್ಲಿಯವನ್ನು ಎಂಬುದು ಗೊತ್ತಿರಲಿಲ್ಲ. ಸಾಮಾನ್ಯ ಅಭಿಮಾನಿಯೊಬ್ಬನ ಕೋರಿಕೆಯ ಮೇರೆಗೆ ಇವರಿಬ್ಬರು ಆಟೋಗ್ರಾಫ್ ನೀಡಿದ್ದಾರೆ ಅಷ್ಟೆ. ಇದೀಗ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಆಸ್ಟ್ರೇಲಿಯಾ ತಲುಪಿರುವ ಭಾರತ ತಂಡ ಅಭ್ಯಾಸಕ್ಕಾಗಿ ಹೋಟೆಲ್ನಿಂದ ಹೊರಟಾಗ ಅಲ್ಲಿದ್ದ ಅಭಿಮಾನಿಯೊಬ್ಬ ತಂಡದ ಬಸ್ ಬಳಿ ನಿಂತಿದ್ದ. ಮೊದಲು ತಂಡದ ಬಸ್ ಹತ್ತಲು ಬಂದ ವಿರಾಟ್ ಕೊಹ್ಲಿಯ ಬಳಿ ಆತ ತಮ್ಮ ಆರ್‌ಸಿಬಿ ಜೆರ್ಸಿಗೆ ಆಟೋಗ್ರಾಫ್ ನೀಡುವಂತೆ ಕೇಳಿಕೊಂಡಿದ್ದಾನೆ. ವಿರಾಟ್ ನಗುವಿನೊಂದಿಗೆ ಅಭಿಮಾನಿಯ ಆಸೆಯನ್ನು ಪೂರೈಸಿ ಆಟೋಗ್ರಾಫ್ ಮಾಡಿದರು. ನಂತರ ರೋಹಿತ್ ಶರ್ಮಾ ತಮ್ಮ ಭಾರತೀಯ ತಂಡದ ಜೆರ್ಸಿಗೆ ಆಟೋಗ್ರಾಫ್ ನೀಡಿದರು. ಇವರಿಬ್ಬರ ಆಟೋಗ್ರಾಫ್ನಿಂದ ಆತ ಖುಷಿಯಾಗಿದ್ದಾನೆ. ಆ ನಂತರ ಆತ ಎಲ್ಲಿಂದ ಬಂದಿದ್ದ ಎಂಬುದನ್ನು ಸಹ ಅದೇ ವಿಡಿಯೋದಲ್ಲಿ ತೋರಿಸಲಾಗಿದ್ದು, ಆತ ಪಾಕಿಸ್ತಾನ ಮೂಲದವನ್ನಾಗಿದ್ದು ಕರಾಚಿಯಿಂದ ಬಂದಿರುವುದಾಗಿ ಹೇಳಿದ್ದಾನೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

