LSG vs CSK: 3 ವಿಕೆಟ್ ಉರುಳಿಸಿ ಚೀಟಿ ಹೊರ ತೆಗೆದು ಸಂಭ್ರಮಿಸಿದ ಲಕ್ನೋ ವೇಗಿ
Akash Singh's IPL 2026 Heroics: ಐಪಿಎಲ್ 2026 ರ 59ನೇ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್‌ನ ಆಕಾಶ್ ಸಿಂಗ್, ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ 3 ವಿಕೆಟ್ ಪಡೆದು ಮಿಂಚಿದರು. ತಮ್ಮ ವೃತ್ತಿಜೀವನದ ಶ್ರೇಷ್ಠ ಪ್ರದರ್ಶನ ನೀಡಿದ ಅವರು, ರುತುರಾಜ್ ಗಾಯಕ್ವಾಡ್ ಸೇರಿದಂತೆ ಪ್ರಮುಖ ಬ್ಯಾಟ್ಸ್‌ಮನ್‌ಗಳನ್ನು ಔಟ್ ಮಾಡಿದರು. ಅವರ ವಿಶಿಷ್ಟ ಸಂಭ್ರಮಾಚರಣೆ ಪಂದ್ಯದ ಆಕರ್ಷಣೆಯಾಗಿತ್ತು.
ಐಪಿಎಲ್ 2026 ರ 59 ನೇ ಪಂದ್ಯದಲ್ಲಿ, ಲಕ್ನೋ ಸೂಪರ್ ಜೈಂಟ್ಸ್ ವೇಗಿ ಆಕಾಶ್ ಸಿಂಗ್ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಅದ್ಭುತ ಪ್ರದರ್ಶನದ ಮೂಲಕ ಎಲ್ಲರ ಗಮನ ಸೆಳೆದರು. ಈ ಸೀಸನ್ನಲ್ಲಿ ಮೊದಲ ಪಂದ್ಯವನ್ನಾಡಿದ ಆಕಾಶ್ ಸಿಕ್ಕ ಅವಕಾಶವನ್ನು ಸ್ಮರಣೀಯವಾಗಿಸಿದರು. ಆಕಾಶ್ ಸಿಂಗ್ ತಮ್ಮ ಮೊದಲ ಓವರ್‌ನಲ್ಲಿ ಕೇವಲ 7 ರನ್‌ಗಳನ್ನು ಬಿಟ್ಟುಕೊಟ್ಟು ಉತ್ತಮ ಆರಂಭ ಪಡೆದರು. ನಂತರ, ತಮ್ಮ ಎರಡನೇ ಓವರ್‌ನಲ್ಲಿ, ಚೆನ್ನೈ ನಾಯಕ ರುತುರಾಜ್ ಗಾಯಕ್ವಾಡ್ ಅವರನ್ನು ಔಟ್ ಮಾಡಿ, ಸೀಸನ್ನ ಮೊದಲ ವಿಕೆಟ್ ಪಡೆದರು.
ವಿಕೆಟ್ ಪಡೆದ ನಂತರ ವಿಶಿಷ್ಟ ರೀತಿಯಲ್ಲಿ ಸಂಭ್ರಮಾಚರಣೆ ಮಾಡಿದ ಆಕಾಶ್ ತಮ್ಮ ಜೇಬಿನಿಂದ ಒಂದು ಕಾಗದದ ತುಣುಕನ್ನು ಹೊರತೆಗೆದರು, ಅದರಲ್ಲಿ “ಅಕ್ಕಿ ಆನ್ ಫೈಯರ್! ಟಿ20 ಪಂದ್ಯಗಳಲ್ಲಿ ವಿಕೆಟ್ ಪಡೆಯುವುದು ಹೇಗೆ ಎಂಬುದು ಆಕಾಶ್ಗೆ ಗೊತ್ತು ಎಂದು ಬರೆಯಲಾಗಿತ್ತು. ನಂತರ, ಮೂರನೇ ಓವರ್‌ನಲ್ಲಿ, ಸಂಜು ಸ್ಯಾಮ್ಸನ್ ಅವರನ್ನು ಔಟ್ ಮಾಡುವ ಮೂಲಕ ತಮ್ಮ ಎರಡನೇ ವಿಕೆಟ್ ಪಡೆದರು. ಆಗಲೂ ಸಹ ಮತ್ತದೇ ಕಾಗದದ ತುಣುಕನ್ನು ಹೊರ ತೆಗೆದು ಆಚರಿಸಿದರು.
ಪವರ್‌ಪ್ಲೇ ನಂತರವೂ ಬೌಲಿಂಗ್ ಮುಂದುವರೆಸಿದ ಆಕಾಶ್ ಸಿಂಗ್ ತಮ್ಮ ಸತತ ನಾಲ್ಕನೇ ಓವರ್ ಬೌಲಿಂಗ್ ಮಾಡಿದರು. ಈ ಓವರ್‌ನಲ್ಲಿ ಅವರು ಉರ್ವಿಲ್ ಪಟೇಲ್ ಅವರನ್ನು ಸಹ ಔಟ್ ಮಾಡಿದರು. ಇದರರ್ಥ ಅವರು 4 ಓವರ್‌ಗಳಲ್ಲಿ 26 ರನ್‌ಗಳಿಗೆ 3 ವಿಕೆಟ್‌ಗಳನ್ನು ಕಬಳಿಸಿದರು, ಇದು ಅವರ ಐಪಿಎಲ್ ವೃತ್ತಿಜೀವನದ ಅತ್ಯುತ್ತಮ ಸ್ಪೆಲ್ ಆಗಿದೆ.