CSK vs RR: ಒಂದೇ ಓವರ್​ನಲ್ಲಿ 2 ವಿಕೆಟ್; ಸಿಎಸ್​ಕೆ ವಿರುದ್ಧ ಜಡೇಜಾ ಪ್ರತೀಕಾರ

Updated on: Mar 30, 2026 | 8:52 PM

Ravindra Jadeja's Revenge: ರವೀಂದ್ರ ಜಡೇಜಾ ಸಿಎಸ್‌ಕೆಯಿಂದ ರಾಜಸ್ಥಾನ್ ರಾಯಲ್ಸ್‌ಗೆ ಟ್ರೇಡ್ ಆಗಿ, ತಮ್ಮ ಭಾವಿ ತಂಡದ ವಿರುದ್ಧ ಆಡಿದ ಮೊದಲ ಪಂದ್ಯದಲ್ಲೇ ಮಿಂಚಿದ್ದಾರೆ. ಸಿಎಸ್‌ಕೆ ವಿರುದ್ಧ ಮೊದಲ ಓವರ್‌ ಬೌಲ್ ಮಾಡಿದ ಜಡೇಜಾ, ಸರ್ಫರಾಜ್ ಖಾನ್ ಮತ್ತು ಶಿವಂ ದುಬೆ ಅವರ ಎರಡು ಪ್ರಮುಖ ವಿಕೆಟ್‌ಗಳನ್ನು ಪಡೆದು ತಮ್ಮ ಮಾಜಿ ತಂಡಕ್ಕೆ ತಿರುಗೇಟು ನೀಡಿದ್ದಾರೆ.

2012 ರಲ್ಲಿ ಸಿಎಸ್​ಕೆ ತಂಡವನ್ನು ಸೇರಿ ಈ ತಂಡದ ಪರ ಬರೋಬ್ಬರಿ 12 ಆವೃತ್ತಿಗಳನ್ನು ಆಡಿದ್ದ ರವೀಂದ್ರ ಜಡೇಜಾ, ಈ ಆವೃತ್ತಿಯಲ್ಲಿ ತನ್ನ ಮಾತೃ ತಂಡ ರಾಜಸ್ಥಾನ್ ರಾಯಲ್ಸ್ ಪರ ಆಡುತ್ತಿದ್ದಾರೆ. ವಾಸ್ತವವಾಗಿ ಈ ವರ್ಷ ನಡೆದ ಮಿನಿ ಹರಾಜಿಗೂ ಮುನ್ನ ಸಿಎಸ್​ಕೆ ತಂಡ, ರವೀಂದ್ರ ಜಡೇಜಾ ಅವರನ್ನು ರಾಜಸ್ಥಾನ್ ರಾಯಲ್ಸ್ ತಂಡದೊಂದಿಗೆ ಟ್ರೇಡ್ ಮಾಡಿಕೊಂಡಿತ್ತು. ಜಡೇಜಾ ಬದಲಿಗೆ ರಾಜಸ್ಥಾನ್ ರಾಯಲ್ಸ್ ತಂಡದಲ್ಲಿದ್ದ ಸಂಜು ಸ್ಯಾಮ್ಸನ್ ಅವರನ್ನು ತನ್ನ ತಂಡಕ್ಕೆ ಸೇರಿಸಿಕೊಂಡಿತ್ತು.

ಈ ರೀತಿ ಟ್ರೇಡ್ ಮೂಲಕ ರಾಜಸ್ಥಾನ್ ತಂಡವನ್ನು ಸೇರಿಕೊಂಡಿದ್ದ ಜಡೇಜಾ, ಈ ಲೀಗ್​ನಲ್ಲಿ ಆಡಿದ ಮೊದಲ ಪಂದ್ಯದಲ್ಲೇ ಸಿಎಸ್​ಕೆ ವಿರುದ್ಧ ಭರ್ಜರಿ ಪ್ರದರ್ಶನ ನೀಡಿದ್ದಾರೆ. ತಂಡವನ್ನು ಮೂರು ಬಾರಿ ಚಾಂಪಿಯನ್‌ ಮಾಡುವಲ್ಲಿ ಶ್ರಮಿಸಿದ್ದ ತನ್ನನ್ನು ಕೈಬಿಟ್ಟ ಸಿಎಸ್​ಕೆ ವಿರುದ್ಧ ಸೇಡು ತೀರಿಸಿಕೊಂಡಿರುವ ಜಡೇಜಾ, ಸಿಎಸ್​ಕೆ ವಿರುದ್ಧ ಆಡಿದ ಮೊದಲ ಪಂದ್ಯದ ಮೊದಲ ಓವರ್​ನಲ್ಲೇ ಎರಡು ಪ್ರಮುಖ ವಿಕೆಟ್‌ಗಳನ್ನು ಉರುಳಿಸಿ ಸರಿಯಾದ ತಿರುಗೇಟು ನೀಡಿದ್ದಾರೆ.

ಸಿಎಸ್​ಕೆ ಇನ್ನಿಂಗ್ಸ್​ನ 8ನೇ ಓವರ್ ಬೌಲ್ ಮಾಡಲು ಬಂದ ಜಡೇಜಾ, ಈ ಓವರ್​ನ ಎರಡನೇ ಎಸೆತದಲ್ಲಿ ಸರ್ಫರಾಜ್ ಖಾನ್ ಅವರನ್ನು ಎಲ್​ಬಿಡಬ್ಲ್ಯೂ ಬಲೆಗೆ ಬೀಳಿಸಿದರು. ಸರ್ಫರಾಜ್ ವಿಕೆಟ್ ಪತನದ ಬಳಿಕ ಬಂದ ಶಿವಂ ದುಬೆ ಬಂದ ಕೂಡಲೇ ಜಡೇಜಾ ಅವರ ಎಸೆತವನ್ನು ಸಿಕ್ಸರ್​ಗಟ್ಟಿದರು. ಮತ್ತದೇ ಸಿಕ್ಸರ್​ಗೆ ಕೈ ಹಾಕಿದ ದುಬೆ ಕ್ಯಾಚಿತ್ತು ನಿರ್ಗಮಿಸಿದರು. ಅಂದರೆ ಜಡೇಜಾ ತಾವು ಬೌಲ್ ಮಾಡಿದ ಮೊದಲ ಓವರ್​ನಲ್ಲೇ ಪ್ರಮುಖ 2 ವಿಕೆಟ್‌ಗಳನ್ನು ಉರುಳಿಸಿದರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us